ಕೋಪಾ ಅಮೆರಿಕ: ಬ್ರೆಜಿಲ್‌ಗೆ ನೇಮರ್ ಬಲ

ರಿಯೊ ಡಿ ಜನೈರೊ: ಸ್ಟಾರ್ ಆಟಗಾರರಾದ ನೇಮರ್ ಮತ್ತು ಅಲೆಕ್ಸಿಸ್ ಸ್ಯಾಂಚೆಜ್ ತಂಡಗಳಿಗೆ ಮರಳಿರುವುದರಿಂದ ಬ್ರೆಜಿಲ್ ಮತ್ತು ಚಿಲಿಗೆ ಬಲ ಬಂದಿದ್ದು ಕೋಪಾ ಅಮೆರಿಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯದ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿವೆ.
ಹಾಲಿ ಚಾಂಪಿಯನ್ ಬ್ರೆಜಿಲ್ ಪರವಾಗಿ ಫಾರ್ವರ್ಡ್ ಆಟಗಾರ ನೇಮರ್ ಕಣಕ್ಕೆ ಇಳಿಯಲು ಸಜ್ಜಾಗಿದ್ದು ಚಿಲಿ ಪರ ಅಲೆಕ್ಸಿಸ್ ಆಡಲಿದ್ದಾರೆ. ಅವರು ಮೀನಖಂಡದ ನೋವಿನಿಂದ ಬಳಲುತ್ತಿದ್ದರು.
ಭಾನುವಾರ ಈಕ್ವಡೊರ್ ಎದುರು ನಡೆದ ಪಂದ್ಯದಲ್ಲಿ ನೇಮರ್, ಡಿಫೆಂಡರ್ ಥಿಯಾಗೊ ಸಿಲ್ವಾ ಮತ್ತು ಸ್ಟ್ರೈಕರ್ ಗ್ಯಾಬ್ರಿಯಲ್ ಜೀಸಸ್ ಅವರಿಗೆ ವಿಶ್ರಾಂತಿ ನಿಡಲಾಗಿತ್ತು. ಆ ಪಂದ್ಯ 1–1ರಲ್ಲಿ ಡ್ರಾ ಆಗಿತ್ತು. ಅದಕ್ಕೂ ಮೊದಲು ಮೂರು ಪಂದ್ಯಗಳಲ್ಲಿ ಗೆದ್ದಿದ್ದು ಶುಕ್ರವಾರದ ಪಂದ್ಯದಲ್ಲಿ ಜಯ ಗಳಿಸುವ ನೆಚ್ಚಿನ ತಂಡ ಎನಿಸಿಕೊಂಡಿದೆ.
ಚಿಲಿ ಗುಂಪು ಹಂತದ ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದುಕೊಂಡಿದೆ. 2014ರ ವಿಶ್ವಕಪ್ ಟೂರ್ನಿಯ 16ರ ಘಟ್ಟದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ನಿಗದಿತ ಅವಧಿಯಲ್ಲಿ 1–1ರಲ್ಲಿ ಡ್ರಾ ಆಗಿದ್ದ ಪಂದ್ಯದಲ್ಲಿ ಬ್ರೆಜಿಲ್ ಪೆನಾಲ್ಟಿ ಶೂಟೌಟ್‌ನಲ್ಲಿ 3–2ರಲ್ಲಿ ಜಯ ಗಳಿಸಿತ್ತು.
ಶುಕ್ರವಾರ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 2019ರ ಕೋಪಾ ಅಮೆರಿಕ ರನ್ನರ್ ಅಪ್ ಪೆರು ತಂಡ ಪರಾಗ್ವೆಯನ್ನು ಎದುರಿಸಲಿದೆ.
ಪೆರು ಮತ್ತು ಪರಾಗ್ವೆ ನಡುವಿನ ಪಂದ್ಯ ಭಾರತೀಯ ಕಾಲಮಾನ ಶನಿವಾರ ಮುಂಜಾನೆ 2.30ಕ್ಕೆ ಆರಂಭವಾಗಲಿದ್ದು ಬ್ರೆಜಿಲ್ ಮತ್ತು ಚಿಲಿ ನಡುವಿನ ಪಂದ್ಯ ಮುಂಜಾನೆ 5.30ರಿಂದ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.