ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್‌ ಹಿಲಾಲ್‌ ಕ್ಲಬ್‌ ಸೇರಲಿರುವ ನೇಮರ್‌

Published 14 ಆಗಸ್ಟ್ 2023, 16:26 IST
Last Updated 14 ಆಗಸ್ಟ್ 2023, 16:26 IST
ಅಕ್ಷರ ಗಾತ್ರ

ಪ್ಯಾರಿಸ್‌: ಬ್ರೆಜಿಲ್‌ ಫುಟ್‌ಬಾಲ್‌ ತಂಡದ ಸ್ಟಾರ್‌ ಆಟಗಾರ ನೇಮರ್‌ ಅವರು ಸೌದಿ ಅರೇಬಿಯಾದ ಅಲ್‌ ಹಿಲಾಲ್‌ ಕ್ಲಬ್ ಸೇರಲಿದ್ದಾರೆ.

ನೇಮರ್‌ ಅವರನ್ನು ಎರಡು ವರ್ಷಗಳ ಅವಧಿಗೆ ಬಿಟ್ಟುಕೊಡುವ ಸಂಬಂಧ ಅವರು ಈಗ ಆಡುತ್ತಿರುವ ಪ್ಯಾರಿಸ್‌ ಸೇಂಟ್‌ ಜರ್ಮೈನ್‌ (ಪಿಎಸ್‌ಜಿ) ಮತ್ತು ಅಲ್‌ ಹಿಲಾಲ್‌ ಕ್ಲಬ್‌ ನಡುವೆ ಒಪ್ಪಂದ ನಡೆದಿದೆ ಎಂದು ಸೌದಿ ಅರೇಬಿಯಾದ ಮಾಧ್ಯಮವೊಂದು ವರದಿ ಮಾಡಿದೆ.

31 ವರ್ಷದ ನೇಮರ್‌ ಅವರು ಎರಡು ವರ್ಷಗಳ ಅವಧಿಗೆ ₹ 1,455 ಕೋಟಿ ಸಂಭಾವನೆ ಪಡೆಯಲಿದ್ಧಾರೆ ಎಂದು ಫ್ರಾನ್ಸ್‌ನ ‘ಲೆಕ್ವಿಪ್’ ದಿನಪತ್ರಿಕೆ ವರದಿ ಮಾಡಿದೆ. ಇದಲ್ಲದೆ ಅಲ್‌ ಹಿಲಾಲ್‌ ಕ್ಲಬ್‌ ‘ವರ್ಗಾವಣೆ ಶುಲ್ಕ’ದ ರೂಪದಲ್ಲಿ ಪಿಎಸ್‌ಜಿಗೆ ₹ 815 ಕೋಟಿ ನೀಡಲಿದೆ. ಆದರೆ ಈ ಒಪ್ಪಂದದ ಬಗ್ಗೆ ಪಿಎಸ್‌ಜಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ನೇಮರ್‌ 2017 ರಲ್ಲಿ ಪಿಎಸ್‌ಜಿ ಕ್ಲಬ್‌ ಸೇರಿಕೊಂಡಿದ್ದರು. ಅವರ ಒಪ್ಪಂದದ ಅವಧಿ 2025 ರಲ್ಲಿ ಕೊನೆಗೊಳ್ಳಬೇಕಿತ್ತು. ಇದೀಗ ಎರಡು ವರ್ಷ ಮುಂಚಿತವಾಗಿಯೇ ತಂಡ ತೊರೆಯಲಿದ್ದಾರೆ.

ಅಲ್‌ ಹಿಲಾಲ್ ಕ್ಲಬ್‌, ಪಿಎಸ್‌ಜಿಯ ಇನ್ನೊಬ್ಬ ಆಟಗಾರ ಫ್ರಾನ್ಸ್‌ನ ಕಿಲಿಯಾನ್‌ ಎಂಬಾಪೆ ಮತ್ತು ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರನ್ನು ಸೆಳೆದುಕೊಳ್ಳುವ ಪ್ರಯತ್ನ ನಡೆಸಿತ್ತು. ಆದರೆ ಎಂಬಾಪೆ, ಪಿಎಸ್‌ಜಿಯಲ್ಲೇ ಮುಂದುವರಿಯಲು ನಿರ್ಧರಿಸಿದ್ದರೆ, ಮೆಸ್ಸಿ ಅವರು ಅಮೆರಿಕದ ಮೇಜರ್‌ ಲೀಗ್‌ ಸಾಕರ್‌ನಲ್ಲಿ ಇಂಟರ್‌ ಮಯಾಮಿ ಕ್ಲಬ್‌ ಸೇರಿಕೊಂಡಿದ್ದರು.

ಸೌದಿ ಅರೇಬಿಯಾದ ಅತ್ಯಂತ ಯಶಸ್ವಿ ಕ್ಲಬ್‌ ಎನಿಸಿಕೊಂಡಿರುವ ಅಲ್‌ ಹಿಲಾಲ್, ಸೌದಿ ಲೀಗ್‌ನಲ್ಲಿ 18 ಸಲ ಚಾಂಪಿಯನ್‌ ಆಗಿದೆ. ಏಷ್ಯನ್‌ ಚಾಂಪಿಯನ್ಸ್‌ ಲೀಗ್‌ನಲ್ಲಿ ನಾಲ್ಕು ಸಲ ಪ್ರಶಸ್ತಿ ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT