ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ದಿಗ್ಗಜ, ಹಾಲಿವುಡ್‌ ನಟ ಸಿಂಪ್ಸನ್‌ ನಿಧನ

ಕೊಲೆ ಪ್ರಕರಣದ ಆರೋಪದಲ್ಲಿ ಕಳಂಕ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಲಾಸ್ ವೇಗಸ್‌: ಅಮೆರಿಕದ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ತಾರೆ ಹಾಗೂ ಹಾಲಿವುಡ್‌ ನಟ ಓ.ಜೆ.ಸಿಂಪ್ಸನ್ (76) ಅವರು ಬುಧವಾರ ರಾತ್ರಿ ನಿಧನರಾದರು.

ಫುಟ್‌ಬಾಲ್‌ ಕ್ಷೇತ್ರ, ನಂತರ ನಟನೆ ಹಾಗೂ ಜಾಹೀರಾತು ರಂಗದಲ್ಲಿ ಮಿಂಚಿದ್ದ ಅವರು ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. ಆದರೆ 1994ರ ಜೂನ್‌ನಲ್ಲಿ ಲಾಸ್‌ ಏಂಜಲಿಸ್‌ನಲ್ಲಿ ಮಾಜಿ ಪತ್ನಿ ಮತ್ತು ಆಕೆಯ ಸ್ನೇಹಿತನನ್ನು ದಾರುಣವಾಗಿ ಹತ್ಯೆಗೈದ ಆರೋಪ ಅವರ ಹೆಸರಿಗೆ ಕಳಂಕ ತಂದಿತು. 9 ತಿಂಗಳ ಕಾಲ ವಿಚಾರಣೆ ನಡೆದು 1995ರ ಅಕ್ಟೋಬರ್‌ನಲ್ಲಿ ಅವರು ಖುಲಾಸೆಗೊಂಡಿದ್ದರು.

ಒರೆಂಥಾಲ್‌ ಜೇಮ್ಸ್‌ ಸಿಂಪ್ಸನ್ ಅವರು ಬುಧವಾರ ರಾತ್ರಿ ಲಾಸ್‌ ವೇಗಸ್‌ನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ‘ಎಕ್ಸ್’ ಜಾಲತಾಣದಲ್ಲಿ ಗುರುವಾರ ಪ್ರಕಟಿಸಿದೆ. ಅವರು ಪ್ರಾಸ್ಟೇಟ್‌ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಅವರು ಕೊನೆಯುಸಿರೆಳೆದಾಗ ಮಕ್ಕಳು ಮತ್ತು ಮರಿಮಕ್ಕಳು ಜೊತೆಗಿದ್ದರು ಎಂದೂ ಹೇಳಿಕೆ ತಿಳಿಸಿದೆ.

1994ರ ಕೊಲೆ ಪ್ರಕರಣದ ನಂತರ ಪೊಲೀಸರು ಅವರನ್ನು ಬೆನ್ನಟ್ಟಿ ಬಂಧಿಸಿದ ದೃಶ್ಯ ಟಿ.ವಿ.ಗಳಲ್ಲಿ ನೇರಪ್ರಸಾರ ಆಗಿತ್ತು. ಅತಿ ಹೆಚ್ಚು ಜನರು ಅದನ್ನು ವೀಕ್ಷಿಸಿದ್ದರು.

ಕೊಲೆ ಪ್ರಕರಣದಲ್ಲಿ ದೋಷಮುಕ್ತರಾದರೂ, ಸಿವಿಲ್ ಪ್ರಕರಣದಲ್ಲಿ ಅವರು ಗೋಲ್ಡ್‌ಮನ್ ಕುಟುಂಬಕ್ಕೆ ಪರಿಹಾರವಾಗಿ ಸುಮಾರು ₹279 ಕೋಟಿ (33.5 ದಶಲಕ್ಷ ಡಾಲರ್) ನೀಡಬೇಕೆಂದು ಆದೇಶ ನೀಡಲಾಗಿತ್ತು. ಇದರಲ್ಲಿ ಬಹುಪಾಲು ಬಾಕಿವುಳಿಸಿದ್ದರು.

ಅಮೆರಿಕದ ನ್ಯಾಷನಲ್‌ ಫುಟ್‌ಬಾಲ್‌ ಲೀಗ್‌ನಲ್ಲಿ ಅವರು ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದರು. 1973ರಲ್ಲಿ ಅವರು ‘ಅತಿ ಅಮೂಲ್ಯ ಆಟಗಾರ’ ಗೌರವವನ್ನೂ ಪಡೆದಿದ್ದರು. ಫುಟ್‌ಬಾಲ್‌ಗೆ ವಿದಾಯ ಹೇಳಿ ಚಿತ್ರರಂಗ ಮತ್ತು ಜಾಹೀರಾತುಗಳಲ್ಲಿ ನಟಿಸತೊಡಗಿದ ನಂತರ ಅವರ ಜನಪ್ರಿಯತೆ ಇನ್ನಷ್ಟು  ಏರಿತ್ತು. ಕಿತ್ತಲೆಹಣ್ಣಿನ ರಸದಿಂದ ಹಿಡಿದು ಕಾರ್‌ ರೆಂಟಲ್‌ ವರೆಗಿನ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ದೇಶದ ಅತಿ ಹೆಚ್ಚು ಜನಪ್ರಿಯ ಕಪ್ಪು ವರ್ಣೀಯ ವ್ಯಕ್ತಿಯಾಗಿ ಪ್ರಸಿದ್ಧಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT