ಬುಧವಾರ, ಡಿಸೆಂಬರ್ 2, 2020
25 °C
ಆರನೇ ಬಾರಿ ಪ್ರಶಸ್ತಿ ಗೆದ್ದ ಮ್ಯೂನಿಚ್

ಸೋಲಿನ ನಿರಾಸೆ: ಗಲಾಟೆ ಮಾಡಿದ ಫುಟ್‌ಬಾಲ್ ಅಭಿಮಾನಿಗಳ ಬಂಧನ

ಎಪಿ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್/ಲಿಸ್ಬನ್: ಸೋಲಿನಿಂದ ಬೇಸರಗೊಂಡು ಅಧಿಕಾರಿಗಳ ಜೊತೆ ಜಗಳಕ್ಕಿಳಿದು ಕಾರುಗಳಿಗೆ ಬೆಂಕಿ ಹಚ್ಚಿದ ಪ್ಯಾರಿಸ್ ಸೇಂಟ್ ಜರ್ಮನ್ (ಪಿಎಸ್‌ಜಿ) ತಂಡದ 148 ಮಂದಿ ಅಭಿಮಾನಿಗಳನ್ನು ಪ್ಯಾರಿಸ್ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಪೋರ್ಚುಗಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಬಯೇನ್ ಮ್ಯೂನಿಚ್ ತಂಡ 1–0 ಅಂತರದಲ್ಲಿ ಪಿಎಸ್‌ಜಿಯನ್ನು ಮಣಿಸಿತ್ತು. ಉದ್ರಿಕ್ತ ಅಭಿಮಾನಿಗಳು ಬೀದಿಗೆ ಇಳಿದು ಗಲಾಟೆ ಮಾಡಿದ್ದರು. ಮಾಸ್ಕ್ ಧರಿಸಿದೆ ಹೊರಗೆ ಬಂದದ್ದಕ್ಕೆ ನೂರಾರು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೂಡ ಪೊಲೀಸರು ಸೋಮವಾರ ತಿಳಿಸಿದ್ದಾರೆ.

‘ಗಲಾಟೆಯಲ್ಲಿ 16 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಫುಟ್‌ಬಾಲ್ ಪ್ರಿಯರ ಪೈಕಿ ಎಷ್ಟು ಮಂದಿಗೆ ಗಾಯಗಳಾಗಿವೆ ಎಂಬುದರ ಮಾಹಿತಿ ಸಿಗಲಿಲ್ಲ ಎಂದು ಸಚಿವ ಜೆರಾಲ್ಡ್ ಡರ್ಮಾನಿನ್ ಟ್ವೀಟ್ ಮಾಡಿದ್ದಾರೆ.

ಪಂದ್ಯದ ನಂತರ ಬೀದಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಗೆದ್ದ ತಂಡದ ಅಭಿಮಾನಿಗಳು ಪಟಾಕಿ ಸಿಡಿಸಿ ಕುಣಿದಾಡುತ್ತ ಸಂಭ್ರಮಿಸಿದರೆ ಸೋತ ತಂಡದವರು ಅಲ್ಲಲ್ಲಿ ಬೆಂಕಿ ಹಚ್ಚಿದರು. ಪೊಲೀಸರು ಮಾಸ್ಕ್ ಧರಿಸದವರನ್ನು ಮತ್ತು ಅಂತರ ಕಾಯ್ದುಕೊಳ್ಳದವರನ್ನು ಗುಂಪಿನಿಂದ ಚದುರಿಸಿದರು. ಬಾರ್ ಮತ್ತು ಹೋಟೆಲ್‌ಗಳಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿದರು. ಪ್ಯಾರಿಸ್‌ನ ಕ್ರೀಡಾಂಗಣವೊಂದರ ಹೊರಗೆ ಎರಡು ಬೃಹತ್ ಪರದೆಗಳಲ್ಲಿ ಪಂದ್ಯದ ನೇರ ಪ್ರಸಾರ ಮಾಡಲಾಗಿತ್ತು. ಅಂತರ ಕಾಯ್ದುಕೊಳ್ಳುವುದಕ್ಕಾಗಿ ಕೇವಲ ಐದು ಸಾವಿರ ಮಂದಿಗೆ ಪ್ರವೇಶ ಕಲ್ಪಿಸಲಾಗಿತ್ತು.

ಆರನೇ ಬಾರಿ ಪ್ರಶಸ್ತಿ ಗೆದ್ದ ಮ್ಯೂನಿಚ್

ಕಿಂಗ್ಸ್‌ಲಿ ಕೋಮಾನ್ ಗಳಿಸಿದ ಏಕೈಕ ಗೋಲಿನಿಂದ ಪಿಎಸ್‌ಜಿ ತಂಡವನ್ನು ಮಣಿಸಿದ ಬಯೇನ್ ಮ್ಯೂನಿಚ್ ಆರನೇ ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪೋರ್ಚುಗಲ್‌ನ ಲಿಸ್ಬನ್‌ನಲ್ಲಿರುವ ಎಸ್ಟಾಡಿಯಾ ಡಿ ಲೂಜ್ ಕ್ರೀಡಾಂಗಣದಲ್ಲಿ ನಡೆದ ಪೈನಲ್ ಪಂದ್ಯ ಪ್ರತಿ ಕ್ಷಣವೂ ರೋಚಕವಾಗಿತ್ತು. 59ನೇ ನಿಮಿಷದಲ್ಲಿ ಜೋಶುವಾ ಕಿಮಿಚ್ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ಹೆಡ್ ಮಾಡಿದ ಕೋಮಾನ್ ಅವರು ಮೋಹಕವಾಗಿ ಗೋಲು ಗಳಿಸಿದರು. ಈ ಮುನ್ನಡೆಯನ್ನು ಕೊನೆಯ ವರೆಗೂ ಉಳಿಸಿಕೊಂಡ ತಂಡ ಗೆಲುವಿನ ನಗೆ ಸೂಸಿತು. ತಂಡ ಈಗಾಗಲೇ ಬಂಡೆಸ್‌ಲೀಗಾ ಮತ್ತು ಜರ್ಮನ್ ಕಪ್ ಪ್ರಶಸ್ತಿ ಗಳಿಸಿದೆ.

24 ವರ್ಷದ ಕೋಮಾನ್ ಪ್ಯಾರಿಸ್‌ನಲ್ಲಿ ಜನಿಸಿದವರು. ಆರಂಭದಲ್ಲಿ ಪಿಎಸ್‌ಜಿ ತಂಡದಲ್ಲಿದ್ದ ಅವರು 2014ರಲ್ಲಿ ಯುವೆಂಟಸ್ ಪರ ಆಡಲು ತಂಡವನ್ನು ತೊರೆದಿದ್ದರು. ನಂತರ ಮ್ಯೂನಿಚ್ ತಂಡವನ್ನು ಸೇರಿದ್ದರು. ಲಿಯೋನ್ ಎದುರು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಫೈನಲ್‌ ಪಂದ್ಯದಲ್ಲಿ ಭರವಸೆ ಇರಿಸಿ ಕಣಕ್ಕೆ ಇಳಿಸಲಾಗಿತ್ತು. ಅವರಿಗಾಗಿ ಇವಾನ್ ಪೆರಿಸಿಕ್‌ಗೆ ವಿಶ್ರಾಂತಿ ನೀಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು