ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜೆಲ್‌ ಡಿ ಮರಿಯಾ ಮೋಡಿ

ಚಾಂಪಿಯನ್ಸ್‌ ಲೀಗ್ ಫುಟ್‌ಬಾಲ್‌: ಫೈನಲ್‌ಗೆ ಪಿಎಸ್‌ಜಿ
Last Updated 19 ಆಗಸ್ಟ್ 2020, 7:49 IST
ಅಕ್ಷರ ಗಾತ್ರ

ಲಿಸ್ಬನ್(ಪೋರ್ಚುಗಲ್)‌: ಪ್ಯಾರಿಸ್‌ ಸೇಂಟ್‌–ಜರ್ಮನ್‌ (ಪಿಎಸ್‌ಜಿ) ತಂಡವು ದೀರ್ಘಕಾಲದ ಕಾಯುವಿಕೆಗೆ ಅಂತ್ಯ ಹಾಡಿತು. 110 ಪಂದ್ಯಗಳನ್ನು ಆಡಿದ ಬಳಿಕ ಆ ತಂಡ ಯುಇಎಫ್‌ಎ ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಬಾರಿ‌ ಫೈನಲ್‌ ತಲುಪಿತು. ಮಂಗಳವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಫ್ರಾನ್ಸ್‌ ಮೂಲದ ತಂಡವು 3–0ಯಿಂದ ಲೀಪ್ಜಿಗ್‌ ತಂಡವನ್ನು ಪರಾಭವಗೊಳಿಸಿತು.

ಚಾಂಪಿಯನ್ಸ್‌ ಲೀಗ್‌ ಟೂರ್ನಿಯೊಂದರ ಫೈನಲ್‌ ತಲುಪಲು ಆರ್ಸೆನಲ್‌ ತಂಡವು 1971–2006ರ ಅವಧಿಯಲ್ಲಿ 90 ಪಂದ್ಯಗಳನ್ನು ಆಡಿತ್ತು. ಹೀಗಾಗಿ 110 ಪಂದ್ಯಗಳ ಬಳಿಕ ಪ್ರಶಸ್ತಿ ಸುತ್ತಿಗೆ ತಲುಪಿದ ದಾಖಲೆ ಪಿಎಸ್‌ಜಿ ತಂಡದ್ದಾಗಿದೆ.

ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಪಿಎಸ್‌ಜಿ ತಂಡದ ಎಂಜೆಲ್‌ ಡಿ ಮರಿಯಾ ಸೊಗಸಾದ ಆಟವಾಡಿದರು. 42ನೇ ನಿಮಿಷದಲ್ಲಿ ಅವರು ಒಂದು ಗೋಲು ದಾಖಲಿಸಿದರೆ, ಇನ್ನೆರಡು ಗೋಲು ಹೊಡೆಯಲು ಅವರು ನೆರವು ನೀಡಿದರು. ವಿಜೇತ ತಂಡದ ಪರ ಮಾರ್ಕಿನೋಸ್‌ (13ನೇ ನಿಮಿಷ) ಆರಂಭದಲ್ಲೇ ಕಾಲ್ಚಳಕ ತೋರಿ ಮುನ್ನಡೆ ತಂದುಕೊಟ್ಟರು. 56ನೇ ನಿಮಿಷದಲ್ಲಿ ಜುವಾನ್‌ ಬರ್ನಾಟ್‌ ವೆಲಾಸ್ಕೊ ತಂಡದ ಪರ ಮೂರನೇ ಗೋಲು ಹೊಡೆದರು.

ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪಿಎಸ್‌ಜಿ ತಂಡವು ಹೋದ ವಾರ 2–1ರಿಂದ ಅಟ್ಲಾಂಟ ತಂಡವನ್ನು ಸೋಲಿಸಿತ್ತು.

ಪಿಎಸ್‌ಜಿ, 16 ವರ್ಷಗಳ ನಂತರ ಚಾಂಪಿಯನ್ಸ್‌ ಲೀಗ್‌ ಫೈನಲ್‌ ತಲುಪಿದ ಮೊದಲ ಫ್ರೆಂಚ್‌ ಲೀಗ್ ಕ್ಲಬ್‌ ಎನಿಸಿಕೊಂಡಿದೆ. 2004ರಲ್ಲಿ ಮೊನಾಕೊ ತಂಡ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತ್ತು. ಪಿಎಸ್‌ಜಿ ಇಲ್ಲಿ ಪ್ರಶಸ್ತಿ ಗೆದ್ದರೆ 27 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಫ್ರಾನ್ಸ್ ಮೂಲದ ಎರಡನೇ ತಂಡ ಎನಿಸಿಕೊಳ್ಳಲಿದೆ. 1993ರಲ್ಲಿ ಮಾರ್ಸೆಲ್ಲೆ ತಂಡವು ಈ ಸಾಧನೆ ಮಾಡಿತ್ತು.

ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಪಿಎಸ್‌ಜಿ ತಂಡಕ್ಕೆ ಬಾಯರ್ನ್‌ ಮ್ಯೂನಿಚ್‌ ಅಥವಾ ಲಿಯೊನ್‌ ತಂಡ ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT