ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸ್ಟಾರ್‌ಗಿರಿಯ ತಾಕತ್ತು ತೋರಿಸಿದ ರೊನಾಲ್ಡೊ

Last Updated 17 ಜೂನ್ 2021, 6:50 IST
ಅಕ್ಷರ ಗಾತ್ರ

ಕ್ರಿಸ್ಟಿಯಾನೊ ರೊನಾಲ್ಡೊ..

ವಿಶ್ವದೆಲ್ಲೆಡೆ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಫುಟ್‌ಬಾಲ್ ಆಟಗಾರ. ರೊನಾಲ್ಡೊ ಗೋಲು ಹೊಡೆಯುವ ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣರಳಿಸಿಕೊಂಡು ನೋಡುವ ಅಬಾಲವೃದ್ಧರು ಅಸಂಖ್ಯಾತ. ಈಗ ಅವರ ಇನ್ನೊಂದು ಚುಟುಕು ವಿಡಿಯೊ ಭಾರಿ ಸುದ್ದಿಯಲ್ಲಿದೆ.

ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದ ಸಂದರ್ಭದ ಪತ್ರಿಕಾಗೋಷ್ಠಿಯಲ್ಲಿ ಕೊಕಾ ಕೋಲಾ ತಂಪುಪಾನೀಯದ ಬಾಟಲಿಗಳನ್ನು ಪಕ್ಕಕ್ಕೆ ಸರಿಸಿದ್ದ ರೊನಾಲ್ಡೊ ‘ನೀರು ಕುಡಿಯಿರಿ ಆರೋಗ್ಯವಾಗಿರಿ‘ ಎಂದು ನೀರಿನ ಬಾಟಲಿ ತೋರಿಸಿದ್ದ ವಿಡಿಯೊ ಅದು. ಅವರು ಈ ಮಾತು ಹೇಳಿದ ಮರುದಿನವೇ ಕೋಲಾ ಕಂಪೆನಿಯ ಶೇರುಗಳ ಬೆಲೆ ಇಳಿಮುಖವಾಯಿತು. ಅಂದಾಜು ₹ 29 ಸಾವಿರ ಕೋಟಿ ನಷ್ಟವನ್ನು ಕಂಪೆನಿ ಅನುಭವಿಸಿತು.

ಆದರೆ ಈ ಪ್ರಕರಣದಲ್ಲಿ ಲಾಭ–ನಷ್ಟಗಳನ್ನು ಪಕ್ಕಕ್ಕಿಟ್ಟು ನೋಡಬೇಕಾದ ಕೆಲವು ಮಹತ್ವದ ಸಂಗತಿಗಳಿವೆ. ಅದರಲ್ಲಿ ಪ್ರಮುಖವಾಗಿ; ಜನಾನುರಾಗಿಯಾಗಿ ಬೆಳೆದ ಕ್ರೀಡಾ ತಾರೆ (ಇದು ಸಿನಿಮಾ, ರಾಜಕೀಯ ಮತ್ತಿತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ) ಯೊಬ್ಬನ ಮಾತಿಗಿರುವ ಮೌಲ್ಯ ಎಂತಹದು ಎಂಬುದು. ಇನ್ನೊಂದೆಡೆ ಆ ಸ್ಥಾನಕ್ಕೇರಿದವರು ತಮ್ಮ ಸಾಮಾಜಿಕ ಹೊಣೆ ಮತ್ತು ಬದ್ಧತೆಯನ್ನು ತೋರಬೇಕಾದ ರೀತಿ, ನೀತಿ.

ಈ ಎರಡು ವಿಷಯಗಳಲ್ಲಿಯೂ ಈಗ ರೊನಾಲ್ಡೊ ನಡೆಯು ಯುರೋಪ್ ಮತ್ತು ಅಮೆರಿಕ ಮಾಧ್ಯಮಗಳ ಹಾಗೂ ಜನಸಮೂಹದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ

‘ಕ್ರೀಡಾತಾರೆಗಳ ಅಭಿಮಾನಿಗಳ ಬಳಗದಲ್ಲಿ ಹದಿಹರೆಯದವರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ತಮ್ಮ ನೆಚ್ಚಿನ ಆಟಗಾರರ ಹಾವಭಾವ, ಅವರು ಧರಿಸುವ ಉಡುಗೆ ತೊಡುಗೆಗಳು, ತಿನ್ನುವ ಆಹಾರಗಳ ಬಗ್ಗೆ ಬಹಳ ಆಸಕ್ತಿಯಿಂದ ತಿಳಿದುಕೊಂಡಿರುತ್ತಾರೆ. ಅಲ್ಲದೇ ಅಂತಹ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ ತಾರೆಗಳು ತಾವು ಪ್ರಚಾರ ಮಾಡುವ ಉತ್ಪನ್ನಗಳ ಬಗ್ಗೆ ಜಾಗರೂಕರಾಗಿರಬೇಕು. ಆ ಕಾರ್ಯವನ್ನು ಈಗ ರೊನಾಲ್ಡೊ ಮಾಡಿದ್ದಾರೆ. ಅದರ ಪರಿಣಾಮ ನೋಡಿ ಹೇಗಿದೆ‘ ಎಂದು ಸಿಎನ್‌ಎನ್‌ ವಾಹಿನಿಯಲ್ಲಿ ತಜ್ಞರೊಬ್ಬರು ಹೇಳಿದ್ದು ಬಹಳಷ್ಟು ಕ್ರೀಡಾಪಟುಗಳಿಗೆ ಚುಚ್ಚಿದಂತಿತ್ತು.

ರೊನಾಲ್ಡೊ ಆರೋಗ್ಯ ಮತ್ತು ಶಿಸ್ತಿನ ಜೀವನದ ಬಗ್ಗೆ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಈ ಹಿಂದೆಯೂ ಕೂಡ ಅವರು ಕಾರ್ಬೋನೆಟೆಡ್ ಡ್ರಿಂಕ್ಸ್‌ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

‘ನನ್ನ ಮಗನಲ್ಲಿ ಉತ್ತಮ ಸಾಮರ್ಥ್ಯವಿದೆ. ಮುಂದೊಂದು ದಿನ ಅವನು ದೊಡ್ಡ ಫುಟ್‌ಬಾಲ್ ಆಟಗಾರನಾಗುವನೇ ಎಂಬುದನ್ನು ನೋಡಬೇಕು. ಆದರೆ ಅವನು ಆಗಾಗ ಕೋಕ್ ಕುಡಿತಾನೆ, ಕುರುಕಲು ತಿಂಡಿ ಮೆಲ್ಲುತ್ತಾನೆ. ಅದು ನನಗೆ ಬಹಳ ಕಿರಿಕಿರಿಯುಂಟು ಮಾಡುತ್ತದೆ‘ ಎಂದು ಹಿಂದೊಮ್ಮೆ ರೊನಾಲ್ಡೊ ಸಾರ್ವಜನಿಕವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ರೊನಾಲ್ಡೊ ತಮ್ಮ ಸಿದ್ಧಾಂತಗಳಿಗೆ ತೋರಿಸುವ ಬದ್ಧತೆ. ಕೋಲಾ ಕಂಪೆನಿಯು ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಸಹಪ್ರಾಯೋಜಕ ಸಂಸ್ಥೆ. ಅದು ಟೂರ್ನಿಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡಿದೆ ಎಂಬ ಅರಿವಿದ್ದು ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ ರೋನಾಲ್ಡೊ. ಅವರ ವಿರುದ್ಧ ಕಂಪೆನಿ ಅಥವಾ ಆಯೋಜಕರು ಇದುವರೆಗೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು. ಏಕೆಂದರೆ ರೊನಾಲ್ಡೊಗೆ ಇರುವ ಫ್ಯಾನ್‌ ಫಾಲೋಯಿಂಗ್ ಎಂಬ ಅಂದಾಜು ಅವರಿಗೆ ಇದೆ. ಆದ್ದರಿಂದಲೇ ಇಷ್ಟಕ್ಕೆ ವಿಷಯವನ್ನು ತಣ್ಣಗಾಗಿಸುವತ್ತ ಅವು ಪ್ರಯತ್ನಿಸುತ್ತಿವೆ.

ಕ್ರಿಸ್ಟಿಯಾನೊ ರೊನಾಲ್ಡೊನ ಪುಣಾಣಿ ಅಭಿಮಾನಿ
ಕ್ರಿಸ್ಟಿಯಾನೊ ರೊನಾಲ್ಡೊನ ಪುಣಾಣಿ ಅಭಿಮಾನಿ

ರೊನಾಲ್ಡೊ ತಮ್ಮ ಜೀವನದಲ್ಲಿ ಹಲವು ಜನಪರ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರು ರಕ್ತದಾನ ಮಾಡುವ ರೂಢಿ ಇಟ್ಟುಕೊಂಡಿದ್ದಾರೆ. ಅದಕ್ಕಾಗಿಯೇ ತಮ್ಮ ಮೈಮೇಲೆ ಟ್ಯಾಟೂಗಳನ್ನು ಹಾಕಿಸಿಕೊಂಡಿಲ್ಲ. ಟ್ಯಾಟೂಗಳನ್ನು ಹಾಕಿಕೊಂಡರೆ ಅದಕ್ಕೆ ಬಳಸುವ ಶಾಯಿಯಲ್ಲಿರುವ ರಾಸಾಯನಿಕ ಅಂಶವು ರಕ್ತ ಸೇರುತ್ತದೆ. ಆದ್ದರಿಂದ ಟ್ಯಾಟೂ ಹಾಕಿಸಿಕೊಂಡ ನಂತರ ಐದಾರು ತಿಂಗಳು ರಕ್ತದಾನ ಮಾಡಬಾರದು ಎಂಬ ನಿಯಮ ಯುರೋಪ್ ದೇಶಗಳಲ್ಲಿದೆ. ಆದ್ದರಿಂದ ಮೂರು ತಿಂಗಳಿಗೊಮ್ಮೆ ರಕ್ತ ನೀಡುವ ಪರಿಪಾಠ ತಪ್ಪುತ್ತದೆ ಎನ್ನುವ ಕಾರಣಕ್ಕೆ ರೊನಾಲ್ಡೊ ಟ್ಯಾಟೂ ಉಸಾಬರಿಗೆ ಹೋಗಿಲ್ಲ. ಈಚೆಗೆ ಕೋವಿಡ್ ಪೀಡಿತರ ಕಷ್ಟಗಳಿಗೂ ರೊನಾಲ್ಡೊ ಮಿಡಿದಿದ್ದರು. ತಮ್ಮ ಒಡೆತನದ ಹೋಟೆಲ್‌ಗಳನ್ನು ಆಸ್ಪತ್ರೆಯನ್ನಾಗಿ ಮಾಡಿದ್ದರು ಎಂದು ಸ್ಪಾನಿಷ್ ಮಾಧ್ಯಮಗಳು ವರದಿ ಮಾಡಿದ್ದವು. ಅದೇ ಸಮಯದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದ ಆರೋಪವನ್ನೂ ರೊನಾಲ್ಡೊ ಎದುರಿಸಿದ್ದರು.

ಆದರೆ ಅವರ ಇವತ್ತಿನ ನಡೆಯಂತೂ ಬೇರೆ ಕ್ರೀಡಾ ಮತ್ತು ಸಿನಿ ತಾರೆಗಳಿಗೆ ಪಾಠವಾಗಬೇಕು. ಸೋಡಾ ಹೆಸರಿನಲ್ಲಿ ಮದ್ಯದ ಉತ್ಪನ್ನಗಳನ್ನು ಪ್ರಚಾರ ಮಾಡುವ, ಡಿಜಿಟಲ್‌ ಗೇಮಿಂಗ್ ಮುಂದಿಟ್ಟುಕೊಂಡು ಜೂಜಾಟಗಳನ್ನು ಪ್ರಚಾರ ಮಾಡುವ ನಮ್ಮ ದೇಶದ ಕ್ರಿಕೆಟಿಗರು, ಜಂಕ್‌ ಫುಡ್‌ಗಳನ್ನು ರುಚಿಕರ ಖಾದ್ಯಗಳೆಂದು ಮಕ್ಕಳ ಮನಸ್ಸಿಗೆ ತುಂಬುವ ಬಾಲಿವುಡ್ ತಾರೆಗಳು, ಕೇಸರಿ, ಮಸಾಲಾ ಹೆಸರಲ್ಲಿ ತಂಬಾಕು ಉತ್ಪನ್ನ ಪ್ರಚಾರ ಮಾಡುವ ಹೀರೊಗಳು ತಮ್ಮ ತಾರಾಶಕ್ತಿಯನ್ನು ಅರಿತುಕೊಳ್ಳಬೇಕು. ಸಾಮಾಜಿಕ ಬದ್ಧತೆ ತೋರಿದಾಗ, ಉತ್ಪನ್ನಗಳನ್ನು ಮಾಡುವ ಕಂಪೆನಿಗಳು ನೈತಿಕ ಹಾದಿಯಲ್ಲಿರುತ್ತವೆ. ಅದರ ಲಾಭ ಜನರಿಗೆ ಆಗುತ್ತದೆ. ಆ ಮೂಲಕ ತಮ್ಮ ಅಭಿಮಾನಿಗಳ ಋಣ ತೀರಿಸುವ ಅವಕಾಶ ತಾರೆಗಳದ್ದಾಗುತ್ತದೆ. ತಮ್ಮ ನೆಚ್ಚಿನ ಆಟಗಾರರ ಗೆಲುವಿಗಾಗಿ ಪ್ರಾರ್ಥಿಸುವ, ಜಯಿಸಿದಾಗ ಕುಣಿದು ಕುಪ್ಪಳಿಸುವ, ಸೋತಾಗ ಕಣ್ಣೀರಾಗುವ, ಕಷ್ಟಕ್ಕೆ ಮಿಡಿಯುವ ಅಭಿಮಾನಿಗಳ ಹಿತರಕ್ಷಣೆಯೂ ಈ ತಾರೆಗಳ ಹೊಣೆಯಲ್ಲವೇ?

ರೊನಾಲ್ಡೊ ತಮ್ಮ ದೇಶದ ತಂಡಕ್ಕೆ, ಲೀಗ್ ಕ್ಲಬ್‌ಗಳಲ್ಲಿಯೂ ಆಡುತ್ತಾರೆ. ಆದರೆ ತಮ್ಮ ಆಟದಿಂದ, ಗಳಿಸಿದ ಗೋಲು ಮತ್ತು ಹಣದಿಂದ ಮಾತ್ರ ದಿಗ್ಗಜರಾಗಿ ಬೆಳೆದಿಲ್ಲ. ಅವರ ಜನಪರ ನಡೆನುಡಿಗಳಿಂದಾಗಿಯೂ ಅವರು ಅಭಿಮಾನಿಗಳ ಕಣ್ಮಣಿಯಾಗಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT