ಭಾನುವಾರ, ಅಕ್ಟೋಬರ್ 24, 2021
21 °C
ಐ ಲೀಗ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಿಗೆ ಉದ್ಯಾನ ನಗರಿ ಆತಿಥ್ಯ: ಮೊದಲ ಪಂದ್ಯ ಇಂದು

ರಾಜಸ್ಥಾನ್ ಯುನೈಟೆಡ್‌ಗೆ ರಿಂಥಿ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪದಾರ್ಪಣೆ ಪಂದ್ಯದಲ್ಲಿ ಗೆಲುವಿನ ಗುರಿಯೊಂದಿಗೆ ರಾಜಸ್ಥಾನ್ ಯುನೈಟೆಡ್ ಎಫ್‌ಸಿ (ಆರ್‌ಯುಎಫ್‌ಸಿ) ಮತ್ತು ರಿಂಥಿ ಸ್ಪೋರ್ಟ್ಸ್ ಕ್ಲಬ್ ತಂಡಗಳು ಐ–ಲೀಗ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಹಣಾಹಣಿಯಲ್ಲಿ ಸೋಮವಾರ ಮುಖಾಮುಖಿಯಾಗಲಿವೆ.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು ಒಂಬತ್ತು ತಂಡಗಳು ಪಾಲ್ಗೊಳ್ಳಲಿದ್ದು ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಬಿ’ ಗುಂಪಿನಲ್ಲಿ ಐದು ತಂಡಗಳು ಇವೆ. ಎಫ್‌ಸಿ ಬೆಂಗಳೂರು ಯುನೈಟೆಡ್ ‘ಎ’ ಗುಂಪಿನಲ್ಲಿದೆ.

ರಾಜಸ್ಥಾನ್ ಮತ್ತು ರಿಂಥಿ ಇದೇ ಮೊದಲ ಬಾರಿ ಐ–ಲೀಗ್ ಅರ್ಹತಾ ಸುತ್ತಿನಲ್ಲಿ ಆಡುತ್ತಿವೆ. ರಾಜಸ್ಥಾನ್ ರಾಜ್ಯ ಲೀಗ್‌ನಲ್ಲಿ ಚಾಂಪಿಯನ್ ಆಗಿ ಅರ್ಹತಾ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿರುವ ಆರ್‌ಯುಎಫ್‌ಸಿ ಮುಖ್ಯ ಸುತ್ತು ಪ್ರವೇಶಿಸಿದರೆ ಐ–ಲೀಗ್‌ನಲ್ಲಿ ಆಡುವ ಆ ರಾಜ್ಯದ ಮೊದಲ ತಂಡ ಎನಿಸಿಕೊಳ್ಳಲಿದೆ. ಈ ಹಾದಿಯಲ್ಲಿ ತಂಡಕ್ಕೆ ಮೊದಲ ಪಂದ್ಯ ಮಹತ್ವದ್ದಾಗಿದೆ. 

‘ನಿರಾತಂಕದಿಂದ, ಸಂಘಟಿತ ಆಟ ಆಡುವುದು ನಮ್ಮ ಗುರಿ. ಇದನ್ನು ಆಟಗಾರರಿಗೆ ಈಗಾಗಲೇ ಮನದಟ್ಟು ಮಾಡಿಕೊಡಲಾಗಿದೆ. ಅಭ್ಯಾಸ ಪಂದ್ಯಗಳಲ್ಲಿ ಅನುಸರಿಸಿದ ತಂತ್ರಗಳನ್ನು ಇಲ್ಲಿ ಬಳಸಲು ನಿರ್ಧರಿಸಲಾಗಿದೆ. ಹೀಗಾಗಿ ಟೂರ್ನಿಯಲ್ಲಿ ಯಶಸ್ಸು ಕಾಣುವ ಭರವಸೆ ಇದೆ’ ಎಂದು ಸಹಾಯಕ ಕೋಚ್ ಅನಿಲ್ ತೋಮರ್ ಹೇಳಿದರು. ಇದೇ ಅಭಿಪ್ರಾಯವನ್ನು ನಾಯಕ ವಿಶಾಲ್ ಜೂನ್ ಅವರು ಕೂಡ ವ್ಯಕ್ತಪಡಿಸಿದರು.

ಮೇಘಾಲಯದ ರಿಂಥಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಯುವ ಆಟಗಾರರೇ ತುಂಬಿದ್ದಾರೆ. ಇತ್ತೀಚೆಗೆ ದೇಶಿ ಟೂರ್ನಿಗಳಲ್ಲಿ ಈ ತಂಡ ಅಮೋಘ ಸಾಮರ್ಥ್ಯ ಪ್ರದರ್ಶಿಸಿದೆ. 2019ರಲ್ಲಿ ರಾಣಿ ಮೋಟರ್ಸ್‌ ನಾಕೌಟ್ ಟೂರ್ನಿ, ಬೊಡೊಸಾ ಇಂಟರ್‌ನ್ಯಾಷನಲ್ ಕಪ್ ಮತ್ತು ಮೇಘಾಲಯದ ಮುಕ್ತ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಕಳೆದ ವರ್ಷ ಅಖಿಲ ಭಾರತ ಮುಖ್ಯಮಂತ್ರಿಗಳ ಕಪ್‌ನ ಚಾಂಪಿಯನ್ ಆಗಿರುವ ತಂಡ ಅಂಬೇಡ್ಕರ್ ಸ್ಮಾರಕ ಆಹ್ವಾನಿತ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದೆ. 

‘ಆರಂಭಗೊಂಡು ಎರಡು ವರ್ಷಗಳ ಅವಧಿಯಲ್ಲಿ ತಂಡದ ಆಟಗಾರರು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇದು ಅಂಗಣದಲ್ಲಿ ಯಶಸ್ಸು ಕಾಣಲು ನೆರವಾಗಲಿದೆ’ ಎಂಬುದು ನಾಯಕ ಬಾಂಪಿಂಖ್ರಾನಮ್ ನೊಂಗ್‌ಕ್ಲವ್‌ ಅವರ ಅನಿಸಿಕೆ. ‘ಈ ಅವಕಾಶಕ್ಕಾಗಿ ಅನೇಕ ತಿಂಗಳಿಂದ ಕಾಯುತ್ತಿದ್ದೆವು. ಆದ್ದರಿಂದ ತಂಡದ ಆಟಗಾರರೆಲ್ಲ ಹುರುಪಿನಲ್ಲಿದ್ದು ಉತ್ತಮ ಸಾಮರ್ಥ್ಯ ಭರವಸೆ ಇದೆ’ ಎಂದು ಕೋಚ್ ಕ್ಲಿಂಪಿರ್ಖತ್ ಸೆಮ್ಲೆ ಹೇಳಿದರು.
 

ಎ ಗುಂಪಿನ ತಂಡಗಳು

ಎಫ್‌ಸಿ ಬೆಂಗಳೂರು ಯುನೈಟೆಡ್‌

ಮದನ್ ಮಹಾರಾಜ್ ಎಫ್‌ಸಿ

ರಾಜಸ್ಥಾನ್ ಯುನೈಟೆಡ್ ಎಫ್‌ಸಿ

ರಿಂಥಿ ಸ್ಪೋರ್ಟ್ಸ್ ಕ್ಲಬ್‌

 

ಬಿ ಗುಂಪಿನ ತಂಡಗಳು

ಎಆರ್‌ಎ ಎಫ್‌ಸಿ

ಕಾರ್ಬೆಟ್ ಎಫ್‌ಸಿ

ಡೆಲ್ಲಿ ಫುಟ್‌ಬಾಲ್ ಕ್ಲಬ್‌

ಕೆಂಕ್ರೆ ಎಫ್‌ಸಿ

ಕೇರಳ ಯುನೈಟೆಡ್ ಎಫ್‌ಸಿ
 

ಆರಂಭ: ಸಂಜೆ 3.45

ನೇರ ‍ಪ್ರಸಾರ: ಐ–ಲೀಗ್ ಫೇಸ್‌ಬುಕ್ ಪುಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು