ಗುರುವಾರ , ಜುಲೈ 29, 2021
25 °C
ಅಗ್ರಸ್ಥಾನ ಭದ್ರಪಡಿಸಿಕೊಂಡ ರಿಯಲ್‌ ಮ್ಯಾಡ್ರಿಡ್‌

ಲಾ ಲಿಗಾ ಫುಟ್‌ಬಾಲ್‌ ಟೂರ್ನಿ: ಮತ್ತೆ ಮಿಂಚಿದ ರಾಮೊಸ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬಿಲ್ಬಾವೊ: ಸರ್ಜಿಯೊ ರಾಮೊಸ್ ಅವರು‌ ಮತ್ತೊಮ್ಮೆ ರಿಯಲ್‌ ಮ್ಯಾಡ್ರಿಡ್‌ ತಂಡಕ್ಕೆ ಆಪತ್ಬಾಂಧವರಾದರು. 

ರಾಮೊಸ್‌ ಕಾಲ್ಚಳಕದ ಬಲದಿಂದ ಮ್ಯಾಡ್ರಿಡ್‌ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 1–0 ಗೋಲಿನಿಂದ ಅಥ್ಲೆಟಿಕ್‌‌ ಬಿಲ್ಬಾವೊ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 77ಕ್ಕೆ ಹೆಚ್ಚಿಸಿಕೊಂಡಿರುವ ತಂಡವು ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. 

70 ಪಾಯಿಂಟ್ಸ್‌ ಕಲೆಹಾಕಿರುವ ಎಫ್‌ಸಿ ಬಾರ್ಸಿಲೋನಾ ಎರಡನೇ ಸ್ಥಾನದಲ್ಲಿದೆ.

ಫುಟ್‌ಬಾಲ್‌ ಚಟುವಟಿಕೆಗಳು ಪುನರಾರಂಭವಾದ ಬಳಿಕ ಮ್ಯಾಡ್ರಿಡ್‌ ಗಳಿಸಿದ ಸತತ ಏಳನೇ ಗೆಲುವು ಇದಾಗಿದೆ.

ಜಿನೆದಿನ್‌ ಜಿದಾನೆ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ರಿಯಲ್‌ ಮ್ಯಾಡ್ರಿಡ್‌ ತಂಡ ಹೋದ ಶುಕ್ರವಾರ ನಡೆದಿದ್ದ ಜಿಟಾಫೆ ಎದುರಿನ ಪಂದ್ಯದಲ್ಲಿ 1–0 ಗೋಲಿನಿಂದ ಗೆದ್ದಿತ್ತು. ಆಗಲೂ ರಾಮೊಸ್ ಅವರು‌ ಪೆನಾಲ್ಟಿ ಅವಕಾಶದಲ್ಲಿ ಮೋಡಿ ಮಾಡಿದ್ದರು.

ಪಾಯಿಂಟ್ಸ್‌ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಅಥ್ಲೆಟಿಕ್‌ ತಂಡ ಆರಂಭದಿಂದಲೇ ಮ್ಯಾಡ್ರಿಡ್‌ ತಂಡಕ್ಕೆ ಪ್ರಬಲ ಪೈಪೋಟಿ ನೀಡಿತು. ಹೀಗಾಗಿ ಮೊದಲಾರ್ಧದ ಆಟ ಗೋಲು ರಹಿತವಾಗಿತ್ತು.

ದ್ವಿತೀಯಾರ್ಧದ ಶುರುವಿನಲ್ಲೂ ಸಮಬಲದ ಪೈಪೋಟಿ ಕಂಡುಬಂತು. 73ನೇ ನಿಮಿಷದಲ್ಲಿ ಮ್ಯಾಡ್ರಿಡ್‌ ತಂಡಕ್ಕೆ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ರಾಮೊಸ್‌, ತಂಡದ ಸಂಭ್ರಮಕ್ಕೆ ಕಾರಣರಾದರು. ಹಿಂದಿನ ಏಳು ಪಂದ್ಯಗಳಲ್ಲಿ ರಾಮೊಸ್‌ ದಾಖಲಿಸಿದ ಐದನೇ ಗೋಲು ಇದಾಗಿದೆ. 

ಹಿಂದಿನ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ವಿಶ್ವಾಸದ ಉತ್ತುಂಗದಲ್ಲಿದ್ದ ಅಥ್ಲೆಟಿಕ್‌ ತಂಡವು ಈ ಪಂದ್ಯದಲ್ಲಿ ಗೋಲಿನ ಖಾತೆ ತೆರೆಯಲು ವಿಫಲವಾಯಿತು. 

ಮ್ಯಾಡ್ರಿಡ್‌ ತಂಡವು ಈ ಪಂದ್ಯದಲ್ಲಿ ಏಡನ್‌ ಹಜಾರ್ಡ್‌ ಮತ್ತು ರಾಫೆಲ್‌ ವರಾನೆ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿತ್ತು. ಇಬ್ಬರೂ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಈ ತಂಡವು 2017ರ ಬಳಿಕ ಲಾ ಲಿಗಾ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿಲ್ಲ. ಆ ಕೊರಗನ್ನು ನೀಗಿಸಿಕೊಳ್ಳಲು ಈಗ ಉತ್ತಮ ಅವಕಾಶ ಸಿಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು