ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ ಭೀತಿಯಲ್ಲಿ ಮೊರೊಕ್ಕೊ

ಇಂದು ‘ಬಿ’ ಗುಂಪಿನ ಹಣಾಹಣಿ: ಸುಲಭ ಗೆಲುವಿನ ನಿರೀಕ್ಷೆಯಲ್ಲಿ ಪೋರ್ಚುಗಲ್‌
Last Updated 19 ಜೂನ್ 2018, 18:50 IST
ಅಕ್ಷರ ಗಾತ್ರ

ಮಾಸ್ಕೊ: ಬಲಿಷ್ಠ ಸ್ಪೇನ್‌ ತಂಡದ ಎದುರು ‘ಹ್ಯಾಟ್ರಿಕ್‌’ ಗೋಲು ದಾಖಲಿಸಿ ಅಭಿಮಾನಿಗಳ ಮನಗೆದ್ದಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ.

21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಪೋರ್ಚುಗಲ್‌ ಮತ್ತು ಮೊರೊಕ್ಕೊ ಮುಖಾಮುಖಿಯಾಗಲಿವೆ. ‘ಬಿ’ ಗುಂಪಿನ ಈ ಹಣಾಹಣಿಗೆ ಲುಜ್‌ನಿಕಿ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ. ಪೋರ್ಚುಗಲ್ ತಂಡದ ನಾಯಕ ರೊನಾಲ್ಡೊ ಈ ಹೋರಾಟದ ಕೇಂದ್ರಬಿಂದುವಾಗಿದ್ದಾರೆ.

ವೃತ್ತಿಬದುಕಿನಲ್ಲಿ 51 ಬಾರಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿರುವ 33ರ ಹರೆಯದ ಕ್ರಿಸ್ಟಿಯಾನೊ, ಫಿಫಾ ವಿಶ್ವಕಪ್‌ನಲ್ಲಿ ‘ಹ್ಯಾಟ್ರಿಕ್‌’ ಗೋಲು ಗಳಿಸಿದ ಅತಿ ಹಿರಿಯ ಆಟಗಾರ ಎಂಬ ದಾಖಲೆಯನ್ನು ಶುಕ್ರವಾರ ತಮ್ಮದಾಗಿಸಿಕೊಂಡಿದ್ದರು. ಸ್ಪೇನ್‌ ವಿರುದ್ಧ ಏಕಾಂಗಿಯಾಗಿ ಹೋರಾಡಿದ್ದ ಅವರು ಪೋರ್ಚುಗಲ್‌ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಹೀಗಾಗಿ ಅವರಿಗೆ ‘ಪಂದ್ಯ ಶ್ರೇಷ್ಠ’ ಗೌರವ ಲಭಿಸಿತ್ತು.

ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೊನಾಲ್ಡೊ ಬಳಗ, ಮೊರೊಕ್ಕೊ ಎದುರು ಗೆಲ್ಲುವ ನೆಚ್ಚಿನ ತಂಡವಾಗಿದೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಈ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ.

ಅನುಭವಿಗಳಾದ ಬ್ರೂನೊ ಅಲ್ವೆಸ್‌, ಪೆಪೆ, ಜೋಸ್‌ ಫಾಂಟೆ, ಯುವ ಆಟಗಾರರಾದ ರಾಫೆಲ್‌ ಗುಯೆರಿರೊ, ರುಬೆನ್‌ ದಿಯಾಸ್‌, ರಿಕಾರ್ಡೊ, ಮರಿಯೊ ರುಯಿ ಮತ್ತು ಸೆಡ್ರಿಕ್‌ ಅವರು ರಕ್ಷಣಾ ವಿಭಾಗದ ಶಕ್ತಿಯಾಗಿದ್ದಾರೆ. ಮೊರೊಕ್ಕೊ ಆಟಗಾರರು ಚೆಂಡಿನೊಂದಿಗೆ ಆವರಣ ಪ್ರವೇಶಿಸದಂತೆ ತಡೆಯುವ ಸಾಮರ್ಥ್ಯ ಇವರಿಗಿದೆ.

ಮಿಡ್‌ಫೀಲ್ಡ್‌ ವಿಭಾಗದಲ್ಲಿ ಆಡುವ ಮ್ಯಾನುಯೆಲ್‌ ಫರ್ನಾಂಡೀಸ್‌, ಜೊವೊ ಮೌಟಿನ್ಹೊ, ಜೊವೊ ಮರಿಯೊ, ಬರ್ನಾರ್ಡೊ ಸಿಲ್ವ, ವಿಲಿಯಂ, ಬ್ರೂನೊ ಫರ್ನಾಂಡೀಸ್‌ ಮತ್ತು ಆ್ಯಂಡ್ರಿಯನ್‌ ಸಿಲ್ವ ಅವರೂ ತಂಡದ ಭರವಸೆಯಾಗಿದ್ದಾರೆ.

ಮುಂಚೂಣಿ ವಿಭಾಗದ ಆಟಗಾರರಾದ ರೊನಾಲ್ಡೊ, ಆ್ಯಂಡ್ರೆ ಸಿಲ್ವ, ಗೊಂಕ್ಯಾಲೊ ಗುಯೆಡೆಸ್‌ ಮತ್ತು ಜೆಲ್ಸನ್‌ ಮಾರ್ಟಿನ್ಸ್‌ ಅವರು ಪಾದರಸದಂತಹ ಚಲನೆ ಮತ್ತು ಸೊಬಗಿನ ಡ್ರಿಬ್ಲಿಂಗ್‌ ಮೂಲಕ ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರನ್ನು ಕಂಗೆಡಿಸಬಲ್ಲರು. ಇವರನ್ನು ನಿಯಂತ್ರಿಸಲು ಮೊರೊಕ್ಕೊ ತಂಡ ಯಾವ ಬಗೆಯ ರಣನೀತಿ ಹೆಣೆದು ಅಂಗಳಕ್ಕಿಳಿಯಲಿದೆ ಎಂಬ ಕುತೂಹಲ ಈಗ ಗರಿಗೆದರಿದೆ.

ಮಿಂಚುವ ತವಕದಲ್ಲಿ ಮೊರೊಕ್ಕೊ: 20 ವರ್ಷಗಳ ನಂತರ ವಿಶ್ವಕಪ್‌ಗೆ ಅರ್ಹತೆ ಗಳಿಸಿರುವ ಮೊರೊಕ್ಕೊ ತಂಡ ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಇರಾನ್‌ ಎದುರು ಮಣಿದಿತ್ತು.

ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಮುಂಚೂಣಿ ವಿಭಾಗದ ಆಟಗಾರ ಅಜೀಜ್‌ ಬೌಹಾದೌಜ್‌, ಮೊರೊಕ್ಕೊ ಪಾಲಿಗೆ ಖಳನಾಯಕರಾಗಿದ್ದರು.


*
ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಸ್ಪೇನ್ ಎದುರು ಡ್ರಾ ಮಾಡಿಕೊಂಡಿದ್ದು ಖುಷಿ ನೀಡಿದೆ. ಮೊರೊಕ್ಕೊ ವಿರುದ್ಧ ಗೆಲ್ಲುವುದು ನಮ್ಮ ಗುರಿ.
–ಕ್ರಿಸ್ಟಿಯಾನೊ ರೊನಾಲ್ಡೊ,
ಪೋರ್ಚುಗಲ್‌ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT