ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Saff Football Championship: ಭಾರತದ ಮುಡಿಗೆ ಸ್ಯಾಫ್ ಕಿರೀಟ, ಕುವೈತ್‌ಗೆ ನಿರಾಸೆ

ಫೈನಲ್‌ನಲ್ಲಿ ರೋಚಕ ಜಯ ಸಾಧಿಸಿದ ಸುನಿಲ್ ಚೆಟ್ರಿ ಬಳಗ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ರಾತ್ರಿ ಎರಡು ತಾಸಿಗಿಂತಲೂ ಹೆ್ಚ್ಚು ಹೊತ್ತು ರೋಚಕ ರಸದೌತಣ ನೀಡಿದ ಸ್ಯಾಫ್‌ ಫುಟ್‌ಬಾಲ್ ಫೈನಲ್‌ನಲ್ಲಿ ಭಾರತ ತಂಡವು ಚಾಂಪಿಯನ್‌ ಕಿರೀಟ ಧರಿಸಿತು.

ಪೆನಾಲ್ಟಿ ಶೂಟೌಟ್‌ ಮೂಲಕ ಫಲಿತಾಂಶ ನಿರ್ಧಾರವಾದ ಪಂದ್ಯದಲ್ಲಿ 5–4ರಿಂದ ಕುವೈತ್‌ ತಂಡವನ್ನು ಹಣಿದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳ ನಡುವೆ ತುರುಸಿನ ಹೋರಾಟದಿಂದಾಗಿ ಸ್ಕೋರ್‌ 1–1 ರಲ್ಲಿ ಸಮಬಲ ಆಗಿತ್ತು. ಪಂದ್ಯದ ಎರಡನೇ ಅವಧಿಯಲ್ಲಿ ಒಂದೂ ಗೋಲು ಗಳಿಕೆಯಾಗಲಿಲ್ಲ. ಆದರೆ  ಮೊದಲ ಕ್ಷಣದಿಂದಲೇ ರೋಚಕತೆ ಹುಟ್ಟಿಸಿದ ಪಂದ್ಯದ ಪ್ರಥಮಾರ್ಧದದಲ್ಲಿ ಉಭಯ ತಂಡಗಳು ಒಂದೊಂದು ಗೋಲು ಗಳಿಸಿದವು.

ಆರಂಭದಿಂದಲೂ ಎರಡೂ ತಂಡಗಳ ಆಟಗಾರರು ಆಕ್ರಮಣಕಾರಿ ಶೈಲಿ ಮತ್ತು ವೇಗಕ್ಕೆ ಒತ್ತು ನೀಡಿದರು. ಈ ಸೆಣಸಾಟದಲ್ಲಿ ಮೊದಲು ಮೇಲುಗೈ ಸಾಧಿಸಿದ್ದು ಕುವೈತ್ ತಂಡ. 14ನೇ ನಿಮಿಷದಲ್ಲಿ ಕುವೈತ್‌ನ ಅಬಿಬ್ ಅಲ್  ಖಲೈದಿ  ಕಾಲ್ಚಳಕ ಮೆರೆದರು. ಆತಿಥೇಯ ಬಳಗದ ರಕ್ಷಣಾ ಪಡೆಯನ್ನು ದಾಟುವುದರ ಜೊತೆಗೆ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರನ್ನೂ ವಂಚಿಸಿದರು. ಇದರೊಂದಿಗೆ ತಮ್ಮ ತಂಡಕ್ಕೆ 1–0 ಮುನ್ನಡೆ ಒದಗಿಸಿಕೊಟ್ಟರು.

ಸಮಬಲ ಸಾಧಿಸಲು ಆತಿಥೇಯ ತಂಡವು ಮತ್ತಷ್ಟು ಚುರುಕಾಗಿ ಆಡಿತು. ಪದೇ ಪದೇ ಕುವೈತ್ ಗೋಲು ವಲಯಕ್ಕೆ ಲಗ್ಗೆ ಇಟ್ಟಿತು. 16ನೇ ನಿಮಿಷದಲ್ಲಿ ಚಾಂಗ್ಟೆ ಪ್ರಯತ್ನಕ್ಕೆ ಗೋಲು ಒಲಿಯುವ ಸಾಧ್ಯತೆ ಇತ್ತು. ಆದರೆ ಕುವೈತ್ ಗೋಲ್‌ಕೀಪರ್ ಅಬ್ದುಲ್‌ ರೆಹಮಾನ್ ಮರ್ಜೋಕ್ ತಡೆಗೋಡೆಯಾದರು. ಇದಾಗಿ ಮೂರು ನಿಮಿಷಗಳ ನಂತರ ಕುವೈತ್ ಆಟಗಾರರು ಫ್ರೀಕಿಕ್‌ನಲ್ಲಿ ಗೋಲು ಗಳಿಸುವ ಅವಕಾಶವನ್ನು ಭಾರತದ ಗೋಲ್‌ಕೀಪರ್ ಸಂಧು ತಡೆದರು.

ಆದರೆ 38ನೇ ನಿಮಿಷದಲ್ಲಿ ಭಾರತದ ಪಾಳೆಯದಲ್ಲಿ ಸಂಭ್ರಮದ ಅಲೆಯದ್ದಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನವಾಯಿತು. ಅದಕ್ಕೆ ಕಾರಣರಾಗಿದ್ದು ಲಾಲಿಂಜುವಾಲಾ ಚಾಂಗ್ಟೆ. ಕುವೈತ್‌ನ ಅಲ್ ಧೆ್ಫಿರಿ ಅವರ ಪಾಸ್ ಕೊಡುವ ಪ್ರಯತ್ನ ವಿಫಲಗೊಳಿಸಿದ ಭಾರತದ ಕುನಿಯನ್  ಅವರು ಸಹಲ್‌ಗೆ ಪಾಸ್ ಕೊಟ್ಟರು. ಚುರುಕಾಗಿ ಪ್ರತಿಕ್ರಿಯಿಸಿದ ಸಹಾಲ್ ಅವರಿಂದ ಪಾಸ್‌ ಪಡೆದ ನಾಯಕ ಚೆಟ್ರಿಯವರು ಚಾಂಗ್ಟೆಯತ್ತ ಕ್ರಾಸ್ ಮಾಡಿದರು. ಚಾಂಗ್ಟೆ ಚೆಂಡನ್ನು ಗುರಿ ಮುಟ್ಟಿಸಿದರು.
 
ಕುವೈತ್‌ಗೆ ಟ್ರಿಪಲ್ ಹಳದಿ ದರ್ಶನ!

45ನೇ ನಿಮಿಷದಲ್ಲಿ ಕುವೈತ್‌ನ ಮೂವರಿಗೆ ರೆಫರಿ ಹಳದಿ ಕಾರ್ಡ್ ತೋರಿಸಿದರು. ಒರಟು ಆಟವಾಡಿದ ಅಲಬ್ಲೋಷಿ ಅವರಿಗೆ ರೆಫರಿ ಮೊದಲು ಹಳದಿ ಕಾರ್ಡ್ ತೋರಿಸಿದರು. ಇದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದ ಅಲ್‌ ದೆಫೀರಿಗೂ ರೆಫರಿ ಹಳದಿ ಕಾರ್ಡ್ ತೋರಿದರು. ಅದೇ ಸಮಯಕ್ಕೆ ಡಗ್‌ಔಟ್ ಎದುರಿಗಿದ್ದ ಕೋಚ್ ರುಯೊ ಬೆಂಟೊ ಕೂಡ ಆಕ್ರೋಶಭರಿತರಾಗಿ ಪ್ರತಿಭಟನೆ ವ್ಯಕ್ತಪಡಿಸಿದರು. ಅವರಿಗೂ  ಕಾರ್ಡ್‌ ತೋರಿಸಿದ ರೆಫರಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT