ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಕೇರಳ ಬ್ಲಾಸ್ಟರ್ಸ್‌–ಎಸ್‌ಸಿ ಈಸ್ಟ್ ಬೆಂಗಾಲ್‌ಗೆ ಮೊದಲ ಜಯದ ಕನಸು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಮುಂಬೈ ಸಿಟಿ ಎಫ್‌ಸಿಗೆ ಹೈದರಾಬಾದ್ ತಂಡದ ಸವಾಲು
Last Updated 19 ಡಿಸೆಂಬರ್ 2020, 19:50 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ಐದು ಪಂದ್ಯಗಳನ್ನು ಆಡಿ ಗೆಲುವಿನ ಸವಿ ಅನುಭವಿಸಲು ವಿಫಲವಾಗಿರುವ ಕೇರಳ ಬ್ಲಾಸ್ಟರ್ಸ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ಮುಖಾಮುಖಿಯಾಗಲಿವೆ. ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಜಯದ ಲಯ ಕಂಡುಕೊಳ್ಳಲು ಕೇರಳ ಬ್ಲಾಸ್ಟರ್ಸ್ ಪ್ರಯತ್ನಿಸಲಿದ್ದರೆ, ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಸೆಣಸುತ್ತಿರುವ ಈಸ್ಟ್ ಬೆಂಗಾಲ್ ತಂಡ ಲೀಗ್‌ನ ಮೊದಲ ಜಯದ ಹಂಬಲದೊಂದಿಗೆ ಕಣಕ್ಕೆ ಇಳಿಯಲಿದೆ.

ಒಟ್ಟು 11 ತಂಡಗಳಿರುವ ಲೀಗ್‌ನಲ್ಲಿ ಈಸ್ಟ್ ಬೆಂಗಾಲ್ ತಂಡ ನಾಲ್ಕು ಸೋಲು ಮತ್ತು ಡ್ರಾದೊಂದಿಗೆ ಒಂದು ಪಾಯಿಂಟ್ ಗಳಿಸಿ ಪಾಯಿಂಟ್ ಪಟ್ಟಿಯ ಕೊನೆಯಲ್ಲಿದೆ. ಕೇರಳ ಎರಡು ಡ್ರಾಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಈ ವರೆಗೆ ಎರಡೂ ತಂಡಗಳು ತಲಾ 10 ಗೋಲುಗಳನ್ನು ಎದುರಾಳಿ ತಂಡಗಳಿಗೆ ಬಿಟ್ಟುಕೊಟ್ಟಿರುವುದು ರಕ್ಷಣಾ ವಿಭಾಗದ ದೌರ್ಬಲ್ಯಕ್ಕೆ ಕನ್ನಡಿ ಹಿಡಿದಿದೆ. ಫಾರ್ವರ್ಡ್ ವಿಭಾಗದ ಆಟಗಾರರಿಂದಲೂ ಗಮನಾರ್ಹ ಸಾಧನೆ ಆಗಲಿಲ್ಲ. ಕೇರಳ ಐದು ಗೋಲುಗಳನ್ನು ಗಳಿಸಿದ್ದರೆ ಈಸ್ಟ್ ಬೆಂಗಾಲ್ ಎರಡು ಬಾರಿ ಮಾತ್ರ ಚೆಂಡನ್ನು ಗುರಿ ಮುಟ್ಟಿಸಿದೆ.

ಏಳನೇ ಆವೃತ್ತಿಯಲ್ಲಿ ಈ ವರೆಗೆ ಶಾಟ್‌ಗಳ ಲೆಕ್ಕಾಚಾರದಲ್ಲೂ ಉಭಯ ತಂಡಗಳು ನೀರಸ ಆಟವಾಡಿವೆ. ಕೇರಳ 39 ಶಾಟ್‌ಗಳೊಂದಿಗೆ ಅತಿ ಕಡಿಮೆ ಶಾಟ್ ಗಳಿಸಿದ ತಂಡವಾಗಿದ್ದರೆ 48 ಶಾಟ್‌ಗಳೊಂದಿಗೆ ಕೋಲ್ಕತ್ತದ ತಂಡ ಅತಿ ಕಡಿಮೆ ಶಾಟ್‌ಗಳನ್ನು ಹೊಡೆದ ತಂಡಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಬಹುತೇಕ ಎಲ್ಲ ಪಂದ್ಯಗಳಲ್ಲೂ ಉತ್ತಮ ಆರಂಭ ಕಂಡಿವೆ. ಆದರೆ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಹತ್ತರ ಪೈಕಿ ಎಂಟು ಗೋಲುಗಳನ್ನು ಎರಡೂ ತಂಡಗಳು ದ್ವಿತೀಯಾರ್ಧದಲ್ಲಿ ಬಿಟ್ಟುಕೊಟ್ಟಿವೆ.

‘ಪ್ರತಿಯೊಂದು ಪಂದ್ಯವೂ ಹೊಸ ಸವಾಲು. ಎಲ್ಲ ಪಂದ್ಯಗಳಿಗೂ ಮೊದಲು ಚೆನ್ನಾಗಿ ಸಿದ್ಧತೆ ಮಾಡಲಾಗುತ್ತದೆ. ಆದರೆ ಅಂಗಣದಲ್ಲಿ ಸರಿಯಾದ ಸಾಮರ್ಥ್ಯ ತೋರಲು ಆಗುತ್ತಿಲ್ಲ. ಅದೇನೇ ಇರಲಿ, ಮುಂದಿನ ಪಂದ್ಯದಲ್ಲಿ ವೈಫಲ್ಯಗಳನ್ನು ಮೆಟ್ಟಿನಿಂತು ಜಯ ಗಳಿಸಲು ಪ್ರಯತ್ನಿಸುವುದು ನಮ್ಮ ಗುರಿ’ ಎಂದು ಕೇರಳದ ಕೋಚ್‌ ಕಿಬು ವಿಕೂನ ಹೇಳಿದರು.

ಮೊದಲ ನಾಲ್ಕು ಪಂದ್ಯಗಳಲ್ಲಿ ಗೋಲು ಗಳಿಸಲು ವಿಫಲವಾಗಿದ್ದ ಈಸ್ಟ್ ಬೆಂಗಾಲ್ ಕಳೆದ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ ಎರಡು ಗೋಲು ಗಳಿಸಿದೆ. ಆ ಎರಡೂ ಗೋಲುಗಳನ್ನು ಜಾಕ್ ಮಗೌಮಾ ಗಳಿಸಿದ್ದರು. ಇದು ತಂಡದಲ್ಲಿ ಭರವಸೆ ಮೂಡಿಸಿದೆ. ಹೀಗಾಗಿ ಕೇರಳ ವಿರುದ್ಧ ಉತ್ತಮ ಸಾಧನೆ ಮಾಡುವ ಉತ್ಸಾಹದಲ್ಲಿದೆ.

‘ಪಂದ್ಯದ ಪ್ರತಿ ಹಂತದಲ್ಲೂ ಏಕಾಗ್ರತೆಯನ್ನು ಕಳೆದುಕೊಳ್ಳದಂತೆ ಆಡುವುದು ಮುಖ್ಯ. ಹಿಂದಿನ ಪಂದ್ಯಗಳ ಯಾವುದೋ ಸಂದರ್ಭದಲ್ಲಿ ತಪ್ಪು ಆಗಿರಬಹುದು. ಅದು ಮುಂದುವರಿಯದಂತೆ ನೋಡಿಕೊಳ್ಳಬೇಕಾಗಿದೆ’ ಎಂದು ಬೆಂಗಾಲ್ ಕೋಚ್ ರಾಬಿ ಫಾವ್ಲರ್ ಅಭಿಪ್ರಾಯಪಟ್ಟರು.

ಮುಂಬೈ ಸಿಟಿಗೆ ಹೈದರಾಬಾದ್ ಸವಾಲು
ವಾಸ್ಕೊ (ಪಿಟಿಐ):
ಲೀಗ್‌ನಲ್ಲಿ ಈ ವರೆಗೆ ಒಂದು ಪಂದ್ಯವನ್ನೂ ಸೋಲದ ಹೈದರಾಬಾದ್ ಎಫ್‌ಸಿ ತಂಡ ಭಾನುವಾರ ಸಂಜೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿಯನ್ನು ಎದುರಿಸಲಿದೆ. ಐದು ಪಂದ್ಯಗಳಲ್ಲಿ ಎರಡನ್ನು ಗೆದ್ದಿದ್ದು ಮೂರರಲ್ಲಿ ಡ್ರಾ ಸಾಧಿಸಿದೆ. ಈ ಮೂಲಕ ಒಂಬತ್ತು ಪಾಯಿಂಟ್ ಕಲೆ ಹಾಕಿದೆ. ಮುಂಬೈ ಸಿಟಿ ಎಫ್‌ಸಿ ನಾಲ್ಕರಲ್ಲಿ ಗೆದ್ದಿದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ರಾವ್ಲಿನ್ ಬೋರ್ಜೆಸ್‌, ಆ್ಯಡಮ್ ಲೀ ಫಾಂಡ್ರೆ, ಅಹಮ್ಮದ್ ಜಹೌ, ಹ್ಯೂಗೊ ಬೌಮೊಸ್ ಹಾಗೂ ಬಾರ್ತೊಲೊಮೆ ಒಗ್ಬೆಚೆ ಮುಂತಾದವರು ಮುಂಬೈ ತಂಡಕ್ಕೆ ಆರಂಭದ ಕೆಲವು ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ನಂತರ ಹೆರ್ನಾನ್ ಸಂಟಾನ ಮತ್ತು ಮೊರ್ತಜಾ ಫಾಲ್ ಕೂಡ ಮಿಂಚಿದ್ದಾರೆ. ಗೋಲ್‌ಕೀಪರ್ ಅಮರಿಂದರ್ ಸಿಂಗ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಕಳೆದ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡದ ವಿರುದ್ಧ 3–2ರ ಜಯ ಗಳಿಸಿರುವ ಹೈದರಾಬಾದ್ ತಂಡ ಮುಂಬೈ ಸಿಟಿಯ ಸವಾಲು ಸ್ವೀಕರಿಸಲು ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT