ಸೋಮವಾರ, ಮಾರ್ಚ್ 1, 2021
19 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಗೋಲು ಗಳಿಸಿದ ಡೀಗೊ ಮೌರಿಸಿಯೊ, ಎರಿಕ್ ಪಾರ್ಟಲು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಡ್ರಾಗೆ ಸಮಾಧಾನಪಟ್ಟ ಬಿಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ (ಪಿಟಿಐ): ಚಿಗುರು ಮೀಸೆಯ ಆಟಗಾರ, ನಾಯಕ ಜೆರಿ ಮಾಮಿಯಂತಾಂಗ್ವ ನೇತೃತ್ವದ ಒಡಿಶಾ ಎಫ್‌ಸಿ ತಂಡದ ಪ್ರಬಲ ಪೈಪೋಟಿಗೆ ತಕ್ಕ ಉತ್ತರ ನೀಡಲು ಯಶಸ್ವಿಯಾದರೂ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಜಯದ ಕನಸು ಈಡೇರಲಿಲ್ಲ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯ 1–1ರಲ್ಲಿ ಡ್ರಾ ಆಯಿತು. ಈ ಮೂಲಕ ಸತತ ಏಳನೇ ಪಂದ್ಯದಲ್ಲೂ ಸುನಿಲ್ ಚೆಟ್ರಿ ಬಳಗದ ಜಯದ ಆಸೆ ಕಮರಿತು.

ಲೀಗ್‌ನಲ್ಲಿ ಈ ವರೆಗೆ ಏಕೈಕ ಜಯ ಗಳಿಸಿರುವ ಒಡಿಶಾ ಎಫ್‌ಸಿ ತಂಡ ಬೆಂಗಳೂರು ಎಫ್‌ಸಿಗೆ ಆರಂಭದಿಂದಲೇ ಸವಾಲೆಸೆಯಿತು. ಚುರುಕಿನ ಆಟದ ಮೂಲಕ ನಾಯಕ ಜೆರಿ ಪದೇ ಪದೇ ಬೆಂಗಳೂರು ಆವರಣದಲ್ಲಿ ಆತಂಕ ಸೃಷ್ಟಿಸಿದರು. ಬಿಎಫ್‌ಸಿ ಕೂಡ ಪ್ರತಿ ಹೋರಾಟ ನಡೆಸಿತು. ರಾಹುಲ್ ಭೆಕೆ ಮತ್ತು ಸುರೇಶ್ ವಾಂಗ್ಜಂ ಎದುರಾಳಿ ತಂಡದ ರಕ್ಷಣಾ ಗೋಡೆಯನ್ನು ಕೆಡವಿ ಮುನ್ನುಗ್ಗಿದರು. ಏಳನೇ ನಿಮಿಷದಲ್ಲಿ ವಶಕ್ಕೆ ಸಿಕ್ಕಿದ ಚೆಂಡನ್ನು ಗುರಿಮುಟ್ಟಿಸಲು ಸುನಿಲ್ ಚೆಟ್ರಿ ಅತ್ಯುತ್ತಮ ಪ್ರಯತ್ನ ನಡೆಸಿದರು. ಆದರೆ ಆರ್ಷದೀಪ್ ಸಿಂಗ್ ಅವರ ಚುರುಕಿನ ಕೀಪಿಂಗ್‌ ಚೆಟ್ರಿಗೆ ನಿರಾಸೆ ಮೂಡಿಸಿತು.

ಎಂಟನೇ ನಿಮಿಷದಲ್ಲಿ ಡೀಗೊ ಮೌರಿಸಿಯೊ ಗೋಲು ಗಳಿಸಿ ಒಡಿಶಾಗೆ ಮುನ್ನಡೆ ತಂದುಕೊಟ್ಟರು. ಸಮಯೋಚಿತ ಆಟದ ಮೂಲಕ ಜೆರಿ, ಚೆಂಡನ್ನು ಮ್ಯಾನ್ಯುಯೆಲ್ ಒನ್ವುಗೆ ನೀಡಿದರು. ಒನ್ವು ಅದನ್ನು ಬಿಎಫ್‌ಸಿಯ ಪೆನಾಲ್ಟಿ ವಲಯಕ್ಕೆ ಕ್ರಾಸ್ ಮಾಡಿದರು. ಡೀಗೊ ಮೌರಿಸಿಯೊ ಒಂದು ಕ್ಷಣವೂ ತಡ ಮಾಡದೆ ಅದನ್ನು ಗೋಲುಪೆಟ್ಟಿಗೆಯ ಒಳಗೆ ಅಟ್ಟಿದರು. ಚೆಂಡು ಕ್ರಾಸ್ ಬಾರ್‌ಗೆ ಬಡಿದು ಬಲೆಯ ಒಳಗೆ ಚಿಮ್ಮಿತು.

ಎರಿಕ್ ಪಾರ್ಟಲು ಮ್ಯಾಜಿಕ್:82ನೇ ನಿಮಿಷದಲ್ಲಿ ಎರಿಕ್ ಪಾರ್ಟಲು ಅವರು ಬಿಎಫ್‌ಸಿಗೆ ಸಮಬಲ ಗಳಿಸಿಕೊಟ್ಟರು. ಎಡಭಾಗದ ಕಾರ್ನರ್‌ನಲ್ಲಿ ಸುನಿಲ್ ಚೆಟ್ರಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಕ್ಲೀಟನ್ ಸಿಲ್ವಾ ಕಡೆಗೆ ಅಟ್ಟಿದರು. ಅವರು ನೀಡಿದ ಚೆಂಡಿಗೆ ತಲೆಯೊಡ್ಡಿದ ಪಾರ್ಟಲು ಗುರಿ ಮುಟ್ಟಿ ಸಂಭ್ರಮಿಸಿದರು.

ಜೆಮ್ಶೆಡ್‌ಪುರ–ಹೈದರಾಬಾದ್ ಪಂದ್ಯ ಡ್ರಾ

ವಾಸ್ಕೊದ ತಿಲಕ್ ಮೈದಾನ್‌ನಲ್ಲಿ ಸಂಜೆ ನಡೆದ ಜೆಮ್ಶೆಡ್‌ಪುರ ಎಫ್‌ಸಿ ಹಾಗೂ ಹೈದಾಬಾದ್ ಎಫ್‌ಸಿ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಮುಕ್ತಾಯಗೊಂಡಿತು. 18 ಪಾಯಿಂಟ್‌ ಗಳಿಸಿರುವ ಹೈದರಾಬಾದ್ ನಾಲ್ಕನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು