ಹ್ಯಾರಿ ಕೇನ್ ಭಯದಲ್ಲಿ ಸ್ವೀಡನ್‌

7
ಇಂಗ್ಲೆಂಡ್‌ ತಂಡಕ್ಕೆ ಸ್ವೀಡನ್‌ ಎದುರಾಳಿ: ಎರಡು ದಶಕಗಳ ನಂತರ ನಾಲ್ಕರ ಘಟ್ಟಕ್ಕೇರುವ ಕನಸು

ಹ್ಯಾರಿ ಕೇನ್ ಭಯದಲ್ಲಿ ಸ್ವೀಡನ್‌

Published:
Updated:

ಸಮಾರ: ಎರಡು ದಶಕಗಳ ನಂತರ ಸೆಮಿಫೈನಲ್‌ ಹಂತ ಪ್ರವೇಶಿಸುವ ಕನಸಿನೊಂದಿಗೆ ಇಂಗ್ಲೆಂಡ್‌ ಮತ್ತು ಸ್ವೀಡನ್ ತಂಡಗಳು ವಿಶ್ವಕಪ್‌ ಫುಟ್‌ಬಾಲ್‌ನ ಎಂಟರ ಘಟ್ಟದಲ್ಲಿ ಶನಿವಾರ ಸೆಣಸಲಿವೆ.

ಸಮಾರ ಅರೆನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ ಇಂಗ್ಲೆಂಡ್‌ 1990ರ ನಂತರ ಇದೇ ಮೊದಲ ಬಾರಿ ಸೆಮಿಫೈನಲ್‌ಗೆ ತಲುಪಿದ ಸಾಧನೆ ಮಾಡಿದಂತಾಗುತ್ತದೆ. ಸ್ವೀಡನ್‌ ಗೆದ್ದರೆ 1994ರ ನಂತರ ಮೊದಲ ಸಲ ನಾಲ್ಕರ ಘಟ್ಟದಲ್ಲಿ ಆಡಿದಂತಾಗಲಿದೆ.

ಸ್ವಿಟ್ಜರ್ಲೆಂಡ್‌ ವಿರುದ್ಧ ನಡೆದ ಪ್ರೀ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ 1–0 ಗೋಲಿನಿಂದ ಗೆದ್ದ ಸ್ವೀಡನ್‌ ಭರವಸೆಯಲ್ಲಿದ್ದರೆ ಬಲಿಷ್ಠ ಕೊಲಂಬಿಯಾ ತಂಡವನ್ನು ಕಟ್ಟಿ ಹಾಕಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಇಂಗ್ಲೆಂಡ್‌ನ ಆತ್ಮವಿಶ್ವಾಸ ಹೆಚ್ಚಿದೆ. ಆದ್ದರಿಂದ ಈ ತಂಡಗಳ ನಾಕೌಟ್ ಹಣಾಹಣಿ ಕುತೂಹಲ ಕೆರಳಿಸಿದೆ.

ಸ್ವಿಟ್ಜರ್ಲೆಂಡ್‌ ಎದುರಿನ ಪಂದ್ಯದಲ್ಲಿ ನಿರ್ಣಾಯಕ ಗೋಲು ಗಳಿಸಿದ ಎಮಿಲ್ ಫೋರ್ಬ್ಸ್‌ ಬರ್ಗ್‌ ಅವರ ಮೇಲೆ ಸ್ವೀಡನ್‌ ಭರವಸೆ ಇರಿಸಿದೆ. ಟೂರ್ನಿಯಲ್ಲಿ ಈ ವರೆಗೆ ಮಿಂಚಿನ ಆಟ ಆಡಿರುವ ಹ್ಯಾರಿ ಕೇನ್‌ ಮೇಲೆ ನಿರೀಕ್ಷೆ ಇರಿಸಿಕೊಂಡು ಇಂಗ್ಲೆಂಡ್ ತಂಡ ಕಣಕ್ಕೆ ಇಳಿಯಲಿದೆ.

ಪೆನಾಲ್ಟಿ ಶೂಟೌಟ್‌ನಲ್ಲಿ ಕೊಲಂಬಿಯಾ ಆಟಗಾರರನ್ನು ಕಂಗೆಡಿಸಿದ ಇಂಗ್ಲೆಂಡ್‌ನ ಗೋಲ್‌ ಕೀಪರ್‌ ಜೋರ್ಡನ್‌ ಪಿಕ್‌ಫಾರ್ಡ್‌ ಅವರ ಮೇಲೆಯೂ ಶನಿವಾರದ ಪಂದ್ಯದಲ್ಲಿ ನಿರೀಕ್ಷೆಯ ಭಾರವಿದೆ.

ಗಾಯದ ಸಮಸ್ಯೆ?
ಇಂಗ್ಲೆಂಡ್ ತಂಡದ ಅನೇಕರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಕೊಲಂಬಿಯಾ ಎದುರಿನ ಪಂದ್ಯದಲ್ಲಿ ಗಾಯಗೊಂಡಿದ್ದ ಜೆಮಿ ವಾರ್ಡಿ ಶನಿವಾರ ಕಣಕ್ಕೆ ಇಳಿಯುವುದು ಸಂದೇಹ. ಡೇಲ್ ಅಲಿ, ಕೈಲಿ ವಾಕರ್‌ ಮತ್ತು ಆ್ಯಶ್ಲೆ ಅವರ ಬಗ್ಗೆ ಕೂಡ ತಂಡದ ಆಡಳಿತ ಇನ್ನೂ ಸೂಕ್ತ ನಿರ್ಧಾರ ಕೈಗೊಂಡಿಲ್ಲ.

ಮಿಕಾಯೆಲ್ ಬದಲಿಗೆ ಎಮಿಲ್‌?
ಅಶಿಸ್ತು ತೋರಿ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿರುವ ಮಿಕಾಯೆಲ್ ಲಾಸ್ಟಿಕ್ ಬದಲಿಗೆ ಎಮಿಲ್ ಕ್ರಾಫ್ತ್ ಸ್ವೀಡನ್‌ ಪರ ಶನಿವಾರ ಆಡುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಆಡಲು ಸಾಧ್ಯವಾಗದಿದ್ದ ಸೆಬಾಸ್ಟಿಯನ್‌ ಲಾರ್ಸನ್‌ ಮತ್ತು ಗುಸ್ತವ್‌ ಸ್ವೆನ್ಸನ್‌ ಕ್ವಾರ್ಟರ್‌ ಫೈನಲ್ ಪಂದ್ಯಕ್ಕೆ ಲಭ್ಯ ಇರುವರು. ಪಾದದ ಗಾಯಕ್ಕೆ ಒಳಗಾಗಿದ್ದ ಆಲ್ಬಿನ್‌ ಎಕ್ದಲ್‌ ಚೇತರಿಸಿಕೊಂಡಿದ್ದಾರೆ. ಆದರೆ ಮೊಣಕಾಲು ನೋವಿನಿಂದ ಬಳಲುತ್ತಿರುವ ಜುಮ್ಮಿ ಡರ್ಮಜ್‌ ಆಡುವ ಸಾಧ್ಯತೆ ಕಡಿಮೆ.

ಪ್ರಮುಖ ಅಂಶಗಳು
ವಿವಿಧ ಟೂರ್ನಿಗಳಲ್ಲಿ ಉಭಯ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು ತಲಾ ಏಳು ಬಾರಿ ಗೆದ್ದಿವೆ. ಒಂಬತ್ತು ಪಂದ್ಯಗಳು ಡ್ರಾ ಆಗಿವೆ.

* 1923ರ ಮೇ 21ರಂದು ಈ ತಂಡಗಳು ಮೊದಲು ಸೆಣಸಿದ್ದವು. ಆ ಪಂದ್ಯದಲ್ಲಿ ಇಂಗ್ಲೆಂಡ್‌ 4–2ರ ಅಂತರದಲ್ಲಿ ಗೆದ್ದಿತ್ತು

* ಎರಡೂ ತಂಡಗಳು ಕೊನೆಯದಾಗಿ ಮುಖಾಮುಖಿಯಾದದ್ದು 2012ರ ನವೆಂಬರ್‌ 14ರಂದು. ಆ ಪಂದ್ಯದಲ್ಲಿ ಸ್ವೀಡನ್‌ 4–2 ಗೋಲುಗಳಿಂದ ಗೆದ್ದಿತ್ತು.

* ವಿಶ್ವಕಪ್‌ನಲ್ಲಿ ಈ ವರೆಗೆ ಎರಡು ಬಾರಿ ಮಾತ್ರ ಇಂಗ್ಲೆಂಡ್ ಮತ್ತು ಸ್ವೀಡನ್ ಮುಖಾಮುಖಿಯಾಗಿವೆ. 2002ರಲ್ಲಿ ಗುಂಪು ಹಂತದ ಪಂದ್ಯ 1–1ರಿಂದ ಡ್ರಾ ಆಗಿತ್ತು.

* 2006ರ ಗುಂಪು ಹಂತದ ಪಂದ್ಯವೂ ಡ್ರಾ ಆಗಿತ್ತು. ಎರಡೂ ತಂಡಗಳು ತಲಾ ಎರಡು ಗೋಲುಗಳನ್ನು ಗಳಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !