ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಫುಟ್‌ಬಾಲ್: ಭಾರತ ಮಹಿಳಾ ತಂಡಕ್ಕೆ ಸ್ವೀಡನ್‌ನ ಥಾಮಸ್ ಮುಖ್ಯ ಕೋಚ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಮಹಿಳಾ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಆಗಿ ಥಾಮಸ್ ಡೆನ್ನರ್‌ಬಿ ಅವರು ಶೀಘ್ರವೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಶುಕ್ರವಾರ ಈ ವಿಷಯ ತಿಳಿಸಿದೆ.

ಸ್ವೀಡನ್‌ನ 62 ವರ್ಷದ ಥಾಮಸ್‌, ಈ ಹಿಂದೆ ಭಾರತದ 17 ವರ್ಷದೊಳಗಿನ ಮಹಿಳಾ ತಂಡದ ತರಬೇತುದಾರರಾಗಿದ್ದರು. 2022ರಲ್ಲಿ ಭಾರತದಲ್ಲೇ ನಡೆಯಲಿರುವ ಎಎಫ್‌ಸಿ ಏಷ್ಯಾಕಪ್ ಟೂರ್ನಿಗೆ ಸಜ್ಜುಗೊಳ್ಳಲು ಮಹಿಳಾ ಸೀನಿಯರ್ ತಂಡಕ್ಕೆ ಅವರು ನೆರವಾಗುತ್ತಿದ್ದಾರೆ.

‘ಮಹಿಳಾ ತಂಡದ ಕೋಚ್ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ ಎಐಎಫ್‌ಎಫ್‌ಗೆ ಆಭಾರಿಯಾಗಿದ್ದೇನೆ. ಇದು ನನಗೆ ದೊರೆತ ಗೌರವ. ತಂಡದ ಶಕ್ತಿಯ ಬಗೆಗೆ ನನಗೆ ಅರಿವಿದೆ. ಏಷ್ಯಾಕಪ್‌ಗೆ ಮಹಿಳಾ ತಂಡವನ್ನು ಸಜ್ಜುಗೊಳಿಸುವುದು ನನ್ನ ಮುಂದಿರುವ ಸವಾಲು. ಇಂತಹ ಸವಾಲುಗಳನ್ನು ಎದುರಿಸಲು ನನಗೆ ಖುಷಿಯಾಗುತ್ತದೆ‘ ಎಂದು ಡೆನ್ನರ್‌ಬಿ ಹೇಳಿದ್ದಾರೆ.

ಥಾಮಸ್‌ ಅವರು ಹಲವು ರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ್ದು, ಮೂವತ್ತಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಯಶಸ್ವಿ ಕೋಚ್‌ ಆಗಿಯೂ ಹೆಸರುವಾಸಿಯಾಗಿದ್ದಾರೆ.

2011ರಲ್ಲಿ ಅವರ ಮಾರ್ಗದರ್ಶನದಲ್ಲಿ ಸ್ವೀಡನ್ ಮಹಿಳಾ ತಂಡವು 2011ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿತ್ತು.

‘ಅಪಾರ ಅನುಭವ ಹೊಂದಿರುವ ಥಾಮಸ್ ಅವರು ಮಹಿಳಾ ತಂಡಕ್ಕೆ ಹೊಸ ಶಕ್ತಿ ತುಂಬಲಿದ್ದಾರೆ. ಭಾರತ ತಂಡಗಳ ಪರಿಚಯ ಅವರಿಗಿದೆ. ತಂಡವನ್ನು ತಾಂತ್ರಿಕ ಮತ್ತು ಸ್ಪರ್ಧಾತ್ಮಕವಾಗಿ ಸಜ್ಜುಗೊಳಿಸಲು ನಾವು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ‘ ಎಂದು ಎಐಎಫ್‌ಎಫ್‌ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು