ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನವ್‌– ಗೌತಮಿ ಚಿನ್ನಕ್ಕೆ ಗುರಿ

ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ ಶೂಟಿಂಗ್
Published 4 ಜೂನ್ 2023, 14:17 IST
Last Updated 4 ಜೂನ್ 2023, 14:17 IST
ಅಕ್ಷರ ಗಾತ್ರ

ಜೂಲ್‌, ಜರ್ಮನಿ: ಭಾರತದ ಗೌತಮಿ ಭನೋಟ್ ಮತ್ತು ಅಭಿನವ್‌ ಶಾ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನ 10 ಮೀ. ಏರ್‌ ರೈಫಲ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿ ಚಿನ್ನ ಗೆದ್ದರು.

ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 17–7 ರಲ್ಲಿ ಫ್ರಾನ್ಸ್‌ನ ಓಷಾನ್‌ ಮುಲ್ಲರ್‌ ಮತ್ತು ರೊಮೇನ್ ಆಫ್ರೆರ್‌ ಅವರನ್ನು ಮಣಿಸಿತು. ನಾರ್ವೆಯ ಪೆರ್ನೈಲ್ ನೋರ್‌ ವಾಲ್– ಜೆನ್ಸ್‌ ಓಲ್‌ಸ್ರುಡ್ ಜೋಡಿ ಕಂಚು ಜಯಿಸಿತು.

ಗೌತಮಿ ಮತ್ತು ಅಭಿವನ್‌ ಅವರು ಅರ್ಹತಾ ಹಂತದಲ್ಲಿ 628.3 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಣದಲ್ಲಿದ್ದ ಭಾರತದ ಇನ್ನೊಂದು ಜೋಡಿ ಸ್ವಾತಿ ಚೌಧರಿ– ಸಲೀಂ 624.3 ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನ ಗಳಿಸಿತು.

10 ಮೀ. ಏರ್‌ ಪಿಸ್ತೂಲ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿ ಭಾರತದ ಸೈನ್ಯಮ್– ಅಭಿನವ್‌ ಚೌಧರಿ ಜೋಡಿ ಬೆಳ್ಳಿ ಗೆದ್ದಿತು. ಭಾರತದ ಶೂಟರ್‌ಗಳು ಫೈನಲ್‌ನಲ್ಲಿ 12 ಪಾಯಿಂಟ್ಸ್‌ ಕಲೆಹಾಕಿದರೆ, 16 ಅವಕಾಶಗಳಲ್ಲಿ ನಿಖರ ಗುರಿ ಕಂಡುಕೊಂಡ ಜೂರಿ ಕಿಮ್– ಕಾಂಗ್‌ಹಿನ್‌ ಕಿಮ್ ಚಿನ್ನ ಜಯಿಸಿದರು.

ಸೈನ್ಯಮ್‌ ಅವರು ಏರ್‌ ಪಿಸ್ತೂಲ್‌ ವೈಯಕ್ತಿಕ ವಿಭಾಗದಲ್ಲಿ ಶನಿವಾರ ಚಿನ್ನ ಜಯಿಸಿದ್ದರು.

ಭಾರತದ ಸುರುಚಿ ಇಂದರ್‌ ಸಿಂಗ್‌ ಮತ್ತು ಶುಭಮ್‌ ಬಿಸ್ಲಾ ಅವರು ಕಂಚು ಪಡೆದುಕೊಂಡರು. ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಅವರು 16 ಪಾಯಿಂಟ್ಸ್‌ ಗಳಿಸಿದರೆ, ಉಜ್ಬೆಕಿಸ್ತಾನದ ನಿಗಿನಾ ಸೈದ್‌ಕುಲೊವಾ– ಮುಹಮ್ಮದ್ ಕಮಲೋವ್ (14) ನಾಲ್ಕನೇ ಸ್ಥಾನ ಪಡೆದುಕೊಂಡರು.

ಸ್ಕೀಟ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಶೂಟರ್‌ಗಳು ಅರ್ಹತಾ ಸುತ್ತು ದಾಟಲು ವಿಫಲರಾದರು.

ಜೂನಿಯರ್‌ ಪುರುಷರ ಸ್ಕೀಟ್‌ ವಿಭಾಗದಲ್ಲಿ ಋತುರಾಜ್ ಬುಂದೇಲಾ 116 ಸ್ಕೋರ್‌ಗಳೊಂದಿಗೆ 19ನೇ ಸ್ಥಾನ ಪಡೆದರೆ, ಅಭಯ್‌ ಸಿಂಗ್‌ ಸೆಖೋನ್ (115) ಅವರು 21ನೇ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ರೈಜಾ ಧಿಲ್ಲೋನ್ 11ನೇ ಸ್ಥಾನ, ಮುಫದ್ದಲ್ ದೀಸಾವಾಲಾ 14 ಹಾಗೂ ಸಂಜನಾ ಸೂದ್‌ 16ನೇ ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT