ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು: ಅಂತಿಮ್‌ಗೆ ಪ್ಯಾರಿಸ್ ಒಲಿಂಪಿಕ್ಸ್‌ ರಹದಾರಿ

Published 22 ಸೆಪ್ಟೆಂಬರ್ 2023, 4:28 IST
Last Updated 22 ಸೆಪ್ಟೆಂಬರ್ 2023, 4:28 IST
ಅಕ್ಷರ ಗಾತ್ರ

ಬೆಲ್‌ಗ್ರೇಡ್‌ (ಸರ್ಬಿಯಾ): ಭಾರತದ ಅಂತಿಮ್ ಪಂಘಲ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದರು. ಅದರೊಂದಿಗೆ ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿದರು.

ಗುರುವಾರ ನಡೆದ 53 ಕೆ.ಜಿ ವಿಭಾಗದ ಬೌಟ್‌ನಲ್ಲಿ 19 ವರ್ಷದ ಅಂತಿಮ್ ಸ್ವೀಡನ್‌ನ ಎಮಾ ಜೊನಾ ಡೆನಿಸ್ ಮ್ಯಾಲ್ಮಗ್ರಿನ್ ವಿರುದ್ಧ ಗೆದ್ದರು.

ಪ್ಯಾರಿಸ್ ಒಲಿಂಪಿಕ್‌ ಕೂಟಕ್ಕೆ ಆಯ್ಕೆ ಯಾದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.

ಗೀತಾ ಪೋಗಟ್ (2012), ಬಬಿತಾ ಪೋಗಟ್ (2012), ಪೂಜಾ ದಂಡಾ (2018), ವಿನೇಶಾ ಪೋಗಟ್ (2019) ಮತ್ತು ಅನ್ಷು ಮಲಿಕ್ ಅವರು ಈ ಹಿಂದೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿ ಒಲಿಂಪಿಕ್‌ ಅರ್ಹತೆ ಗಳಿಸಿದ್ದರು.

ಗ್ರಿಕೊ ರೋಮನ್ ನಿರಾಶೆ: ‌ಭಾರತದ ಗ್ರಿಕೊ–ರೋಮನ್ ಕುಸ್ತಿಪಟುಗಳ ನಿರಾಶಾದಾಯಕ ಪ್ರದರ್ಶನ ಮುಂದು ವರಿದಿದೆ. 82 ಕೆ.ಜಿ. ವಿಭಾಗದಲ್ಲಿ ಭಾರತದ ಸಜನ್ ಅವರು ದಕ್ಷಿಣ ಕೊರಿಯಾದ ಎದುರಾಳಿ ಎದುರು 3–1 ರಿಂದ ಸೋಲನುಭವಿಸಿದರು.

ಗುರುವಾರ ನಡೆದ ಈ ಸೆಣಸಾಟದಲ್ಲಿ ಸಜನ್ ಅವರು ದಕ್ಷಿಣ ಕೊರಿಯಾದ ಯಾಂಗ್‌ ಸೆಜಿನ್ ಅವರಿಗೆ ಸಾಟಿಯಾಗಲಿಲ್ಲ. ಯಾಂಗ್ ಅವರು ತಾಂತ್ರಿಕವಾಗಿಯೂ ಉತ್ತಮ ಪಟ್ಟುಗಳನ್ನು ಪ್ರದರ್ಶಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತದ ಸ್ಪರ್ಧಿ 18ನೇ ಸ್ಥಾನದಲ್ಲಿದ್ದರೆ, ಕೊರಿಯಾದ ಪೈಲ್ವಾನ್ 19ನೇ ಸ್ಥಾನದಲ್ಲಿ ಇದ್ದಾರೆ.

ಫ್ರೀಸ್ಟೈಲ್‌ ಕುಸ್ತಿಯಲ್ಲೂ ಭಾರತ ತಂಡ ಪುರುಷರ ವಿಭಾಗದಲ್ಲಿ ಮುಗ್ಗರಿಸಿದ್ದು, ಪದಕದ ಸುತ್ತಿಗೆ ಮುನ್ನಡೆಯುವಲ್ಲಿ ಯಾರಿಗೂ ಸಾಧ್ಯವಾಗಿಲ್ಲ.

ಪುರುಷರ 77 ಕೆ.ಜಿ. ವಿಭಾಗದಲ್ಲಿ ನೇರವಾಗಿ ಪ್ರಿಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದ್ದ ಗುರುಪ್ರೀತ್‌ ಸಿಂಗ್‌ ಅವರು ವಿಶ್ವದ ಅಗ್ರಮಾನ್ಯ ಕುಸ್ತಿಪಟು, ಹಂಗರಿಯ ಲೆವೈ ಝೊಲ್ಟಾನ್ ಅವರಿಗೆ ಕೇವಲ ಒಂದು ನಿಮಿಷ 12 ಸೆಕೆಂಡುಗಳಲ್ಲಿ ಮಣಿದರು.

ಝೊಲ್ಟಾನ್ ಅವರು ಬೆಲ್‌ಗ್ರೇಡ್‌ನಲ್ಲಿ ನಡೆದ 2022ರ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಬೆಳ್ಳಿಯ ಪದಕ ಗಳಿಸಿದ್ದರು.

ಆದರೆ, ಝೊಲ್ಟಾನ್ ಅವರು ಫೈನಲ್‌ ತಲುಪಿದಲ್ಲಿ, ಗುರುಪ್ರೀತ್‌ ಅವರು ರಿಪೆಷಾಜ್ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ.

ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು), ಭಾರತ ಕುಸ್ತಿ ಫೆಡರೇಷನ್‌ಅನ್ನು ಅಮಾನತುಗೊಳಿಸಿರುವ ಕಾರಣ ಭಾರತದ ಸ್ಪರ್ಧಿಗಳು ಯುಡಬ್ಲ್ಯುಡಬ್ಲ್ಯು ಧ್ವಜದಡಿ ಪಾಲ್ಗೊಳ್ಳುತ್ತಿದ್ದಾರೆ.

130 ಕೆ.ಜಿ. ವಿಭಾಗದ ಗ್ರಿಕೊ ರೋಮನ್ ವಿಭಾಗದ ಪೈಲ್ವಾನ್ ಮೆಹರ್ ಸಿಂಗ್ ಕೂಡ ಕ್ವಾಲಿಫಿಕೇಷನ್ ಸುತ್ತಿನಲ್ಲೇ ಸೋಲನುಭವಿಸಿದರು. 27ನೇ ಶ್ರೇಯಾಂಕದ ಮೆಹರ್, 28ನೇ ಶ್ರೇಯಾಂಕದ ಡೇವಿಡ್ ಒವಸಪ್ಯಾನ್ (ಅರ್ಮೇನಿಯಾ) ಅವರಿಗೆ 0–8 ರಿಂದ ಸೋತರು. ಕೇವಲ 39 ಸೆಕೆಂಡುಗಳಲ್ಲಿ ಸೆಣಸಾಟ ಇತ್ಯರ್ಥಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT