ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಭಾರತ– ಪಾಕ್‌ ಸೆಣಸು ಇಂದು

ಸೆಮಿ ತಲುಪಲು ಪಾಕ್‌ಗೆ ಗೆಲುವು ಅನಿವಾರ್ಯ
Published 8 ಆಗಸ್ಟ್ 2023, 23:30 IST
Last Updated 8 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಚೆನ್ನೈ: ಮೂರು ಬಾರಿಯ ಚಾಂಪಿಯನ್ ಭಾರತ ತಂಡ, ಬುಧವಾರ ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಕೊನೆಯ ರೌಂಡ್‌ರಾಬಿನ್‌ ಲೀಗ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ ಸ್ಥಾನವನ್ನು ಈಗಾಗಗಲೇ ಖಚಿತಪಡಿಸಿರುವ ಭಾರತ, ಈ ಪಂದ್ಯದಲ್ಲಿ ಅಲಕ್ಷ್ಯ ಮನೋಭಾವ ನುಸುಳದಂತೆ ನೋಡಿಕೊಳ್ಳಬೇಕಾಗಿದೆ. 

ಇನ್ನೊಂದು ಕಡೆ ಪಾಕಿಸ್ತಾನಕ್ಕೆ ಈ ಪಂದ್ಯ ಮಹತ್ವದ್ದು. ಗೆದ್ದರೆ ಮಾತ್ರ ಅದು ಅಂತಿಮ ನಾಲ್ಕರ ಹಂತ ಸುಗಮ. ಸೋತಲ್ಲಿ, ಅದರ ಭವಿಷ್ಯ ಇತರ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಚೀನಾ– ಜಪಾನ್‌ ಪಂದ್ಯದಲ್ಲಿ ಚೀನಾ ಗೆಲ್ಲಲಿ ಮತ್ತು ಮಲೇಷ್ಯಾ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ದೊಡ್ಡ ಅಂತರದಿಂದ ಸೋಲಿಸಲಿ ಎಂದು ಅದು ಹಾರೈಸಬೇಕಾಗಿದೆ.

ಭಾರತ ಮೂರು ಗೆಲುವು, ಒಂದು ಡ್ರಾ ಪಂದ್ಯದಿಂದ ಒಟ್ಟು 10 ಪಾಯಿಂಟ್ ಗಳಿಸಿದ್ದು, ಲೀಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮಲೇಷ್ಯಾ (9), ದಕ್ಷಿಣ ಕೊರಿಯಾ (5), ಪಾಕಿಸ್ತಾನ (5) ಮತ್ತು ಚೀನಾ (1) ನಂತರದ ಸ್ಥಾನಗಳಲ್ಲಿ ಇವೆ.

ಭಾರತದಂತೆ, ಪಾಕ್‌ ತಂಡವೂ ಮೂರು ಬಾರಿ ಈ ಟೂರ್ನಿಯ ಚಾಂಪಿಯನ್‌ ಆಗಿವೆ. ಈಗಿನ ರ್‍ಯಾಂಕಿಂಗ್ ಮತ್ತು ಸಾಧಿಸಿರುವ ಬೆಳವಣಿಗೆಯ ದೃಷ್ಟಿಯಿಂದ ಭಾರತ ಬುಧವಾರದ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಭಾರತ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 16ನೇ ಸ್ಥಾನದಲ್ಲಿ ಇದೆ.

ಆದರೆ ಭಾರತ–ಪಾಕ್‌ ಪಂದ್ಯದಲ್ಲಿ ರ‍್ಯಾಂಕಿಂಗ್ ಗಣನೆಗೆ ಬರುವುದು ಕಡಿಮೆ. ಯಾವ ತಂಡ ಒತ್ತಡವನ್ನು ತಾಳಿ ನಿಲ್ಲಬಲ್ಲದು ಎಂಬುದಷ್ಟೇ ಇಲ್ಲಿ ಪ್ರಮುಖ. ಹರ್ಮನ್‌ಪ್ರೀತ್ ಪಡೆ ಈ ಟೂರ್ನಿಯಲ್ಲಿ ಆಕ್ರಮಣಕಾರಿ ಆಟ ಆಡುತ್ತಿದೆ. ಆದರೆ ರಕ್ಷಣಾ ವಿಭಾಗ ಬಲಪಡಿಸಿಕೊಳ್ಳಬೇಕಿದೆ.

ಭಾರತ ಸೆಮಿಫೈನಲ್‌ನಲ್ಲಿ ಪಾಕ್‌ ತಂಡವನ್ನು ಎದುರಿಸುವ ಸಾಧ್ಯತೆಯೇ ಅಧಿಕವಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಇರುವವರು ನಾಲ್ಕನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಬೇಕಾಗುತ್ತದೆ. ಎರಡನೇ ಸ್ಥಾನ ಪಡೆದವರು, ಮೂರನೇ ಸ್ಥಾನ ಪಡೆದ ತಂಡದ ವಿರುದ್ಧ ಸೆಣಸಬೇಕಾಗುತ್ತದೆ. ಈ ಪಂದ್ಯಗಳು ಶುಕ್ರವಾರ ನಡೆಯಲಿವೆ.

ಭಾರತ ತಂಡ, ತನ್ನ ಪಂದ್ಯಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಡಬಾರದು ಎಂದು ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಈಗಾಗಲೇ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT