ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಭಾರತದ ಮುಡಿಗೆ ಕಿರೀಟ

ಮಲೇಷ್ಯಾ ವಿರುದ್ಧ ಗೆಲುವು
Published 12 ಆಗಸ್ಟ್ 2023, 17:08 IST
Last Updated 12 ಆಗಸ್ಟ್ 2023, 17:08 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮಲೇಷ್ಯಾ ತಂಡ ಒಡ್ಡಿದ ಸ್ಫೂರ್ತಿಯುತ ಸವಾಲನ್ನು ಬದಿಗೊತ್ತಿದ ಭಾರತ ತಂಡ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡಿತು.

ಮೇಯರ್‌ ರಾಧಾಕೃಷ್ಣನ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ 4–3 ಗೋಲುಗಳಿಂದ ಗೆದ್ದಿತು.

ಭಾರತ ತಂಡ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಈ ಹಿಂದೆ 2011, 2016 ಮತ್ತು 2018 ರಲ್ಲಿ (ಪಾಕಿಸ್ತಾನದ ಜತೆ ಜಂಟಿಯಾಗಿ) ಚಾಂಪಿಯನ್‌ ಅಗಿತ್ತು.

ಜುಗ್‌ರಾಜ್‌ ಸಿಂಗ್‌ (9ನೇ ನಿ.), ಹರ್ಮನ್‌ಪ್ರೀತ್‌ ಸಿಂಗ್‌ (45ನೇ ನಿ.), ಗುರುಜಂತ್‌ ಸಿಂಗ್‌ (45ನೇ ನಿ.) ಮತ್ತು ಆಕಾಶ್‌ದೀಪ್‌ ಸಿಂಗ್‌ (56ನೇ ನಿ.) ಅವರು ಗೋಲು ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಲೇಷ್ಯಾ ತಂಡದ ಪರ ಅಬು ಕಮಲ್‌ ಅಝ್ರಾಯ್ (14ನೇ ನಿ.), ರಹೀಂ ರಝಿ (18ನೇ ನಿ.) ಹಾಗೂ ಮುಹಮ್ಮದ್ ಅಮೀನುದೀನ್‌ (28ನೇ ನಿ.) ಅವರು ಚೆಂಡನ್ನು ಗುರಿ ಸೇರಿಸಿದರು.

45ನೇ ನಿಮಿಷದರೆಗೆ 1–3 ಗೋಲುಗಳಿಂದ ಹಿನ್ನಡೆಯಲ್ಲಿದ್ದ ಭಾರತ, ಕೊನೆಯಲ್ಲಿ ಅಮೋಘ ರೀತಿಯಲ್ಲಿ ಮರುಹೋರಾಟ ನಡೆಸಿ ಗೆಲುವು ತನ್ನದಾಗಿಸಿಕೊಂಡಿತು.

ಜಪಾನ್‌ಗೆ ಮೂರನೇ ಸ್ಥಾನ: ಕಳೆದ ಬಾರಿಯ ಚಾಂಪಿಯನ್‌ ದಕ್ಷಿಣ ಕೊರಿಯಾ ತಂಡವನ್ನು 5–3 ಗೋಲುಗಳಿಂದ ಮಣಿಸಿದ ಜಪಾನ್‌ ತಂಡ, ಮೂರನೇ ಸ್ಥಾನ ಗಳಿಸಿತು.

ರ‍್ಯೋಮ ಓಕಾ (3ನೇ ನಿ.), ರ‍್ಯೊಸೆಯಿ ಕಾಟೊ (9ನೇ ನಿ.), ಕೆಂಟಾರೊ ಫುಕುದಾ (28), ಶೋತಾ ಯಮಾಡ (53) ಮತ್ತು ಕೆನ್‌ ನಗಯೊಶಿ (58) ಅವರು ಜಪಾನ್‌ ತಂಡದ ಭರ್ಜರಿಗೆ ಗೆಲುವಿಗೆ ಕಾರಣರಾದರು.

ಕೊರಿಯಾ ತಂಡದ ಪರ ಜಾಂಗ್‌ಹ್ಯೂನ್‌ ಜಾಂಗ್ (15 ಮತ್ತು 33ನೇ ನಿ.) ಎರಡು ಗೋಲುಗಳನ್ನು ಗಳಿಸಿದರೆ, ಮತ್ತೊಂದು ಗೋಲನ್ನು ಚೆಯೊಲಿಯೊನ್‌ ಪಾರ್ಕ್‌ (26) ತಂದಿತ್ತರು.

ಆಕ್ರಮಣಕಾರಿ ಆಟವಾಡಿದ ಜಪಾನ್‌ ಮೂರನೇ ನಿಮಿಷದಲ್ಲೇ ಮುನ್ನಡೆ ಗಳಿಸಿತು. ಕೊರಿಯಾ ತಂಡದ ಡಿಫೆಂಡರ್‌ಗಳನ್ನು ತಪ್ಪಿಸಿದ ಓಕಾ ಅವರು ಚೆಂಡನ್ನು ಗುರಿ ಸೇರಿಸಿದರು. ಆರು ನಿಮಿಷಗಳ ಬಳಿಕ ಕಾಟೊ ಅವರು ಫೀಲ್ಡ್‌ ಗೋಲು ಮೂಲಕ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಕೊಸೆಯ್‌ ಕವಾಬೆ ಮತ್ತು ಕೆಂಟಾರೊ ಫುಕುದಾ ಅವರ ಚಾಣಾಕ್ಷ ಆಟ ಈ ಗೋಲಿಗೆ ಕಾರಣವಾಯಿತು.

ಮೊದಲ ಕ್ವಾರ್ಟರ್‌ನ ಕೊನೆಯಲ್ಲಿ ಗೋಲಿನ ಖಾತೆ ತೆರೆದ ಕೊರಿಯಾ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿತು. ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದ್ದರಿಂದ ಜಪಾನ್‌ ಒಂದು ಗೋಲಿನ ಮುನ್ನಡೆ (3–2) ಉಳಿಸಿಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಜಾಂಗ್‌ ಅವರ ಗೋಲಿನ ನೆರವಿನಿಂದ ಕೊರಿಯಾ 3–3 ರಿಂದ ಸಮಬಲ ಸಾಧಿಸಿತು.

ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟವಾಡಿದ ಜಪಾನ್‌ ತಂಡ ಎರಡು ಗೋಲುಗಳನ್ನು ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

2021ರ ಟೂರ್ನಿಯ ಫೈನಲ್‌ನಲ್ಲಿ ಜಪಾನ್‌ ತಂಡ ಕೊರಿಯಾ ಎದುರು ಸೋತು ‘ರನ್ನರ್‌ ಅಪ್‌’ ಆಗಿತ್ತು. ಅಂದು ಎದುರಾಗಿದ್ದ ಸೋಲಿಗೆ ಈ ಬಾರಿ ಮುಯ್ಯಿ ತೀರಿಸಿಕೊಂಡಿತು.

ನಾಲ್ಕನೇ ಸಲ ಪ್ರಶಸ್ತಿ ಗೆದ್ದ ಭಾರತ ಫೈನಲ್‌ನಲ್ಲಿ 4–3 ಗೋಲುಗಳ ಜಯ ಆಕಾಶ್‌ದೀಪ್‌ ಸಿಂಗ್‌ ಗೆಲುವಿನ ಗೋಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT