ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಟೊ ಮೊಮೊಟಾಗೆಆಘಾತ

ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಆ್ಯಂಥನಿ ಸಿನಿಸುಕಾ ಗಿಂಟಿಂಗ್‌ಗೆ ಒಲಿದ ಜಯ
Last Updated 23 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಚಾಂಗ್‌ಜೌ: ಜಪಾನ್‌ನ ಕೆಂಟೊ ಮೊಮೊಟಾ ಅವರು ಚೀನಾ ಓಪನ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಘಾತ ಅನುಭವಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಇಂಡೊನೇಷ್ಯಾದ ಆ್ಯಂಥನಿ ಸಿನಿಸುಕಾ ಗಿಂಟಿಂಗ್‌ ಅವರು 23–21, 21–19ರಲ್ಲಿ ಕೆಂಟೊ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು.

ರೋಚಕ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಕೆಂಟೊ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಆ್ಯಂಥನಿ ಅವರ ಸವಾಲು ಮೀರಲು ವಿಫಲರಾದರು.

ಪಂದ್ಯದ ಆರಂಭದಿಂದಲೂ ಉಭಯ ಆಟಗಾರರು ಆಕ್ರಮಣಕಾರಿ ಆಟವಾಡಿದರು. ಮೊದಲ ಗೇಮ್‌ನ ಆರಂಭದಲ್ಲಿ ಕೆಂಟೊ ಅವರು ಮುನ್ನಡೆ ಸಾಧಿಸಿದರು. ಆದರೆ, ಕೆಲಹೊತ್ತಿನಲ್ಲಿ ಇಂಡೊನೇಷ್ಯಾದ ಆಟಗಾರ ತಿರುಗೇಟು ನೀಡಿದರು. ಸಮಬಲ ಸಾಧಿಸುವಲ್ಲಿ ಯಶಸ್ವಿಯಾದ ಅವರು ಪಂದ್ಯ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲು ಕಾರಣರಾದರು.

ಮನಮೋಹಕ ಸ್ಮ್ಯಾಷ್‌ ಹಾಗೂ ಆಕರ್ಷಕ ರಿಟರ್ನ್‌ಗಳಿಂದ ಉಭಯ ಆಟಗಾರರು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ರೋಚಕ ಘಟ್ಟ ತಲುಪಿದ ಮೊದಲ ಗೇಮ್‌ನಲ್ಲಿ ಕೆಂಟೊ ನಿರಾಸೆ ಅನುಭವಿಸಿದರು. ಧೀರ್ಘ ರ‍್ಯಾಲಿಯಲ್ಲಿ ಅವರು ಎಡವಿದರು. ಗಿಂಟಿಂಗ್‌ ನೀಡಿದ ರಿಟರ್ನ್‌ಗೆ ಪ್ರತ್ಯುತ್ತರ ನೀಡಲು ವಿಫಲರಾದರು. ಛಲ ಬಿಡದೇ ಹೋರಾಡಿದ ಗಿಂಟಿಂಗ್‌ ಅವರು ಮೊದಲ ಸೆಟ್‌ ಅನ್ನು ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನ ಆರಂಭದಿಂದಲೂ ಕೆಂಟೊ ಮತ್ತೆ ಪ್ರಾಬಲ್ಯ ಮೆರೆದರು. ಆದರೆ, ಕೂಡಲೇ ಎಚ್ಚೆತ್ತುಕೊಂಡ ಆ್ಯಂಥನಿ ಅವರು ಪ್ರತಿತಂತ್ರಗಳನ್ನು ಹೆಣೆದರು. ಅವರ ಆಟ ರಂಗೇರಿತು. ಮೊಮೊಟಾ ಸವಾಲು ಮೀರಲು ಅವರು ಯಶಸ್ವಿಯಾದರು. ಇದೇ ವೇಳೆ ಕೆಲ ತಪ್ಪುಗಳನ್ನು ಎಸಗಿದ ಕೆಂಟೊ ಅವರು ಎದುರಾಳಿಗೆ ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಹೀಗಾಗಿ ಗಿಂಟಿಂಗ್‌ ಅವರು ಗೇಮ್‌ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು.

ಇದೇ ಟೂರ್ನಿಯಲ್ಲಿ ಅವರು ಅಗ್ರಶ್ರೇಯಾಂಕಿತ ಆಟಗಾರ ವಿಕ್ಟರ್‌ ಅಕ್ಸೆಲ್ಸೆನ್‌ ಸವಾಲು ಮೀರಿದ್ದರು. ಐದನೇ ಶ್ರೇಯಾಂಕಿತ ಚೌ ಟಿನ್‌ ಚೆನ್‌ ಹಾಗೂ ಆರನೇ ಶ್ರೇಯಾಂಕಿತ ಆಟಗಾರ ಚೆನ್‌ ಲಾಂಗ್‌ ಅವರನ್ನು ಪರಾಭವಗೊಳಿಸಿದ್ದರು.ಇತ್ತೀಚೆಗೆ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲೂ ಗಿಂಟಿಂಗ್‌ ಅವರು ಜಪಾನ್‌ನ ಆಟಗಾರನನ್ನು ಸೋಲಿಸಿದ್ದರು.

ಕರೋಲಿನಾ ಮರೀನ್‌ ಮುಡಿಗೆ ಪ್ರಶಸ್ತಿ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪೇನ್‌ನ ಕರೋಲಿನಾ ಮರೀನ್‌ ಅವರು ಪಾರಮ್ಯ ಮೆರೆದರು.

ಫೈನಲ್‌ ಪಂದ್ಯದಲ್ಲಿ ಅವರು 21–18, 21–13ರಿಂದ ಚೀನಾದ ಚೆನ್‌ ಯೂಫಿ ಅವರನ್ನು ಮಣಿಸಿದರು. ಈ ಪಂದ್ಯವು 47 ನಿಮಿಷ ನಡೆಯಿತು.

ಕಿಮ್‌–ಆ್ಯಂಡರ್ಸ್‌ ಜೋಡಿಗೆ ಜಯ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಡೆನ್ಮಾರ್ಕ್‌ನ ಕಿಮ್‌ ಅಸ್ತ್ರಪ್‌ ಹಾಗೂ ಆ್ಯಂಡರ್ಸ್‌ ಸ್ಕಾರುಪ್‌ ರಸ್ಮುಸೆನ್‌ ಜೋಡಿಯು ಪ್ರಶಸ್ತಿ ಜಯಿಸಿದೆ.

ಫೈನಲ್‌ ಪಂದ್ಯದಲ್ಲಿ ಈ ಜೋಡಿಯು 21–13, 17–21, 21–14ರಿಂದ ಚೀನಾದ ಹನ್‌ ಚೆಂಗ್‌ಕೈ ಹಾಗೂ ಜೌ ಹ್ವಾಡೊಂಗ್‌ ಜೋಡಿಯನ್ನು ಮಣಿಸಿತು.

ಮಹಿಳೆಯರ ಡಬಲ್ಸ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಜಪಾನ್‌ನ ಮಿಸಾಕಿ ಮಟ್ಸುಟೊಮೊ ಹಾಗೂ ಅಯಕಾ ಟಕಹಾಶಿ ಜೋಡಿಯು ಪ್ರಶಸ್ತಿ ಗೆದ್ದಿತು. ಈ ಜೋಡಿಯು ಅವರದೇ ರಾಷ್ಟ್ರದ ಮಯು ಮಟ್ಸುಟೊಮೊ ಹಾಗೂ ವಕನಾ ನಗಹರಾ ಜೋಡಿಯನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT