ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಒಲಿಂಪಿಯಾಡ್‌ | ಅಮೆರಿಕ ವಿರುದ್ಧ ಗೆದ್ದ ಭಾರತ: ಖಚಿತವಾದ ಐತಿಹಾಸಿಕ ಚಿನ್ನ

Published : 22 ಸೆಪ್ಟೆಂಬರ್ 2024, 0:32 IST
Last Updated : 22 ಸೆಪ್ಟೆಂಬರ್ 2024, 0:32 IST
ಫಾಲೋ ಮಾಡಿ
Comments

ಬುಡಾಪೆಸ್ಟ್‌: ವಿಶ್ವ ಚಾಂಪಿಯನ್‌ಷಿಪ್‌ಗೆ ಚಾಲೆಂಜರ್‌ ಆಗಿರುವ ಡಿ. ಗುಕೇಶ್‌ ಮತ್ತು ಅರ್ಜುನ್ ಇರಿಗೇಶಿ ಅವರು ಯಶಸ್ಸಿನ ಓಟ ಮುಂದುವರಿಸಿದರು. ಇದರಿಂದ ಭಾರತ, 45ನೇ ಚೆಸ್‌ ಒಲಿಂಪಿಯಾಡ್‌ನ 10ನೇ ಸುತ್ತಿನಲ್ಲಿ ಶನಿವಾರ ಅಮೆರಿಕ ತಂಡವನ್ನು 2.5–1.5ರಿಂದ ಸೋಲಿಸಿತು. ತನ್ಮೂಲಕ ಒಂದು ಸುತ್ತು ಉಳಿದಿರುವಂತೆ ಮೊದಲ ಬಾರಿ ಚಿನ್ನದ ಪದಕವನ್ನು ಖಚಿತ ಪಡಿಸಿಕೊಂಡಿತು.

ಗುಕೇಶ್‌ ಮೊದಲ ಬೋರ್ಡ್‌ನಲ್ಲಿ ತಮಗಿಂತ ಮೇಲಿನ ಕ್ರಮಾಂಕದ ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸಿದರು. ಆದರೆ, ಎರಡನೇ ಬೋರ್ಡ್‌ನಲ್ಲಿ ಅಮೆರಿಕದ ವೆಸ್ಲಿ ಸೋ ಅವರು ಭಾರತದ ಪ್ರಜ್ಞಾನಂದ ಅವರನ್ನು ಮಣಿಸಿದ್ದರಿಂದ ಸ್ಕೋರ್‌ 1–1 ಆಯಿತು.

ಮೂರನೇ ಬೋರ್ಡ್‌ನಲ್ಲಿ ಅರ್ಜುನ್‌, ಎದುರಾಳಿ ಲೆನಿಯರ್ ಡೊಮಿಂಗುಜ್ ಪೆರೆಜ್ ಅವರನ್ನು ಮಣಿಸಿದ್ದರಿಂದ ಭಾರತಕ್ಕೆ ಮತ್ತೆ ಮುನ್ನಡೆ ಲಭಿಸಿತು. ಕೊನೆಯ ಬೋರ್ಡ್‌ನಲ್ಲಿ ವಿದಿತಿ ಗುಜರಾತಿ ಪ್ರಬಲ ಆಟವಾಡಿ ಲೆವೊನ್ ಅರೋನಿಯನ್ ಅವರ ಜೊತೆ ಡ್ರಾ ಮಾಡಿಕೊಂಡರು. ಭಾರತ 19 ಪಾಯಿಂಟ್ಸ್‌ ಗಳಿಸಿ ಐತಿಹಾಸಿಕ ಪ್ರಶಸ್ತಿಯತ್ತ ದಾಪುಗಾಲು ಹಾಕಿತು.

ಮಹಿಳಾ ವಿಭಾಗದಲ್ಲಿ ಭಾರತ ತಂಡವು 2.5-1.5 ಚೀನಾವನ್ನು ಸೋಲಿಸಿತು.

ಅಮೆರಿಕ ಜೊತೆ ಡ್ರಾ: ಶುಕ್ರವಾರ ನಡೆದ ಪಂದ್ಯದಲ್ಲಿ ಐಎಂ ವಂತಿಕಾ ಅಗರವಾಲ್, ಅಗತ್ಯ ಸಂದರ್ಭದಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಐರಿನಾ ಕ್ರುಶ್ ಅವರನ್ನು ಸೋಲಿಸಿದರು. ಆ ಮೂಲಕ ಒಂಬತ್ತನೇ ಸುತ್ತಿನಲ್ಲಿ ಭಾರತ ವನಿತಾ ತಂಡ  2–2 ರಿಂದ ಅಮೆರಿಕ ಜೊತೆ ಶುಕ್ರವಾರ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಓಪನ್ ವಿಭಾಗದಲ್ಲಿ ಭಾರತ ತಂಡ 2–2 ರಿಂದ ಉಜ್ಬೇಕಿಸ್ತಾನ ಜೊತೆ ಡ್ರಾ ಮಾಡಿಕೊಂಡಿತು. ನಾಲ್ಕೂ ಪಂದ್ಯಗಳು ಡ್ರಾ ಆದವು. ಭಾರತ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮಹಿಳಾ ವಿಭಾಗದಲ್ಲಿ ಕಜಕಸ್ತಾನವು (16 ಪಾಯಿಂಟ್ಸ್‌), ಭಾರತವನ್ನು (15 ಪಾಯಿಂಟ್ಸ್‌) ಎರಡನೇ ಸ್ಥಾನಕ್ಕೆ ಸರಿಸಿದೆ. 9 ತಂಡಗಳು ತಲಾ 14 ಪಾಯಿಂಟ್ಸ್ ಕಲೆಹಾಕಿ ಮೂರರಿಂದ 11ರವರೆಗಿನ ಸ್ಥಾನದಲ್ಲಿವೆ.

ಓಪನ್ ವಿಭಾಗದಲ್ಲಿ ಸತತ ಎಂಟು ಪಂದ್ಯಗಳಲ್ಲಿ ಜಯಗಳಿಸಿದ್ದ ಭಾರತ ಮೊದಲ ಬಾರಿ ಎದುರಾಳಿಗೆ ಪಾಯಿಂಟ್‌ ಬಿಟ್ಟುಕೊಟ್ಟಿತು. ಈ ಸುತ್ತು ಗೆದ್ದಿದ್ದರೆ ಭಾರತಕ್ಕೆ ಚಿನ್ನ ಖಚಿತವಾಗುತಿತ್ತು. ಆದರೆ ಒಂಬತ್ತನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಉಜ್ಬೇಕಿಸ್ತಾನ ಎದುರಿನ ಪಂದ್ಯ 2–2 ಸಮಬಲ ಆಯಿತು. ಈ ಫಲಿತಾಂಶದಿಂದ ಅಗ್ರಸ್ಥಾನಕ್ಕೆ ಚ್ಯುತಿಯಾಗಿಲ್ಲ. ಭಾರತ 17 ಪಾಯಿಂಟ್ಸ್ ಗಳಿಸಿದ್ದರೆ, ಮೂರು ತಂಡಗಳು (ಅಮೆರಿಕ, ಉಜ್ಬೇಕಿಸ್ತಾನ, ಚೀನಾ) ತಲಾ 15 ಪಾಯಿಂಟ್ಸ್ ಕಲೆಹಾಕಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT