ಬ್ರಸೆಲ್ಸ್: ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಅವರು ಶನಿವಾರ ಇಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದರು. ಗ್ರೆನೆಡಾದ ಪೀಟರ್ಸ್ ಆ್ಯಂಡರ್ಸನ್ ಅವರಿಗೆ ನಿಕಟ ಪೈಪೋಟಿಯೊಡ್ಡಿದ ನೀರಜ್ ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ಡೈಮಂಡ್ ಟ್ರೋಫಿ ಜಯವನ್ನು ಕೈತಪ್ಪಿಸಿಕೊಂಡರು. ಪೀಟರ್ಸ್ ಪ್ರಥಮ ಸ್ಥಾನ ಪಡೆದರು.
ಆ್ಯಂಡರ್ಸನ್ ಅವರು ತಮ್ಮ ಮೊದಲ ಎಸೆತದಲ್ಲಿಯೇ 87.87 ಮೀಟರ್ಸ್ ದೂರದ ಸಾಧನೆ ಮಾಡಿದರು. ನೀರಜ್ ತಮ್ಮ ಮೂರನೇ ಥ್ರೋನಲ್ಲಿ 87.86 ಮೀ ಸಾಧನೆ ಮಾಡಿದರು. ಅತ್ಯಲ್ಪ ಅಂತರದಲ್ಲಿ ಪೀಟರ್ಸನ್ ಅವರಿಗಿಂತ ಹಿಂದುಳಿದರು. ನಂತರದ ಮೂರು ಎಸೆತಗಳಲ್ಲಿ ನೀರಜ್ ಕ್ರಮವಾಗಿ 82.04 ಮೀ, 83.30 ಮೀ ಹಾಗೂ 86.46 ಮೀ ದೂರ ಥ್ರೋ ಮಾಡಿದರು.
ಜರ್ಮನಿಯ ಜೂಲಿಯನ್ ವೇಬರ್ ಅವರು 85.87 ಮೀ ದೂರ ಥ್ರೋ ಮಾಡಿ ಮೂರನೇ ಸ್ಥಾನ ಪಡೆದರು. ನೀರಜ್ ಅವರು ಈ ಸಾಧನೆಯೊಂದಿಗೆ ಡೈಮಂಡ್ ಲೀಗ್‌ನಲ್ಲಿ ಪದಕ ಜಯದ ಹ್ಯಾಟ್ರಿಕ್ ಮಾಡಿದರು.
ನೀರಜ್ ಅವರು 2022ರಲ್ಲಿ ಜ್ಯೂರಿಚ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಕೂಟದಲ್ಲಿ ಪ್ರಥಮ ಮತ್ತು 2023ರಲ್ಲಿ ಯುಗೇನ್‌ನಲ್ಲಿ ನಡೆದಾಗ ದ್ವಿತೀಯ ಸ್ಥಾನ ಗಳಿಸಿದ್ದರು.
ಅವರು ಈಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.