ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ 7 ವರ್ಷದೊಳಗಿನವರ ಚೆಸ್‌: ದೇವನಾರಾಯಣನ್‌ಗೆ ನಿರೀಕ್ಷಿತ ಪ್ರಶಸ್ತಿ

Published 5 ಸೆಪ್ಟೆಂಬರ್ 2024, 14:53 IST
Last Updated 5 ಸೆಪ್ಟೆಂಬರ್ 2024, 14:53 IST
ಅಕ್ಷರ ಗಾತ್ರ

ಮೈಸೂರು: ಕೇರಳದ ಪಾಲಕ್ಕಾಡ್‌ನ ಬಾಲಕ ದೇವನಾರಾಯಣನ್ ಕಲ್ಲಿಯತ್ ಆಜೇಯ ಸಾಧನೆಯೊಡನೆ ರಾಷ್ಟ್ರೀಯ 7 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ ಓಪನ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡ. ಒಂದು ಸುತ್ತು ಇರುವಾಗಲೇ ಅಗ್ರಪಟ್ಟ ಖಚಿತಪಡಿಸಿಕೊಂಡಿದ್ದ ಐದನೇ ಶ್ರೇಯಾಂಕದ ಈ ಆಟಗಾರ 9 ಸುತ್ತುಗಳಿಂದ 9 ಪಾಯಿಂಟ್ಸ್‌ ಗಳಿಸಿ ಈ ಕೂಟವನ್ನು ಸ್ಮರಣೀಯವಾಗಿಸಿಕೊಂಡ.

ವಿಜಯನಗರದ ಸಂಭ್ರಮ ಕನ್ವೆನ್ಷನ್‌ ಹಾಲ್‌ನಲ್ಲಿ ಗುರುವಾರ ಮುಕ್ತಾಯಗೊಂಡ ಈ ಕೂಟದಲ್ಲಿ ಗೋವಾದ ಪ್ರಯಂಕ್ ಗಾಂವಕರ್‌ (8) ಎರಡನೇ ಸ್ಥಾನ ಗಳಿಸಿದ. ಪಶ್ಚಿಮ ಬಂಗಾಳದ ಆರಾಧ್ಯೊ ಗುಯಿನ್ (7.5), ತಮಿಳುನಾಡಿನ ತಕ್ಷಂತ್ ಆನಂದ್ (7.5), ಉತ್ತರಾಖಂಡದ ತೇಜಸ್ ತಿವಾರಿ (7.5) ಕ್ರಮವಾಗಿ ಮೂರರಿಂದ ಐದವರೆಗಿನ ಸ್ಥಾನಗಳನ್ನು ಪಡೆದರು.

ಟ್ರೋಫಿ ಜೊತೆಗೆ ದೇವನಾರಾಯಣನ್ ₹50,000 ಬಹುಮಾನ ಪಡೆದರೆ, ಪ್ರಯಂಕ್ ₹36,000 ಮತ್ತು ಆರಾಧ್ಯೊ ₹30,000 ಬಹುಮಾನ ಪಡೆದರು. ಕಪ್ಪು ಕಾಯಿಗಳಲ್ಲಿ ಆಡಿದ ದೇವನಾರಾಯಣನ್ ಕೊನೆಯ ಸುತ್ತಿನಲ್ಲಿ ತಮಿಳುನಾಡಿನ ಇನ್ಬಾ ರಮೇಶ್‌ಬಾಬು (7) ಅವರನ್ನು ಸೋಲಿಸಿದ. ಪ್ರಯಂಕ್‌, ಕವಿನ್ ವೆಳವನ್ ಮೇಲೆ ಜಯಸಾಧಿಸಿದ.

ದೇವನಾರಾಯಣನ್ ಸಾಧನೆ ಅಮೋಘ. ಈ ವರ್ಷ ಫೆಬ್ರುವರಿಯಲ್ಲಿ ನಡೆದ ರಾಷ್ಟ್ರೀಯ 7 ವರ್ಷದೊಳಗಿನವರ ಟೂರ್ನಿಯ ವೇಳೆ ಈತ ರೇಟಿಂಗ್ ಪಡೆದಿರಲಿಲ್ಲ. ಆದರೆ ಅಂತಿಮವಾಗಿ ರನ್ನರ್ ಅಪ್‌ ಪ್ರಶಸ್ತಿ ಪಡೆದಿದ್ದ.

ಬಾಲಕಿಯರ ವಿಭಾಗದಲ್ಲಿ ತಮಿಳುನಾಡಿನ ಆರಣ್ಯಾ ಆರ್‌. ಮತ್ತು ಪಶ್ಚಿಮ ಬಂಗಾಳದ ಅರ್ಪಿತಾಂಗ್ಶಿ ಭಟ್ಟಾಚಾರ್ಯ ತಲಾ ಎಂಟು ಪಾಯಿಂಟ್ಸ್ ಪಡೆದರೂ ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಮೊದಲ, ಎರಡನೇ ಸ್ಥಾನ ಪಡೆದರು. ಪಶ್ಚಿಮ ಬಂಗಾಳದ ಸಾಯಿ ಆಸ್ತಾ ಸಿಂಗ್ (7.5) ಮೂರನೇ ಸ್ಥಾನ ಪಡೆದರೆ, ರಾಜಸ್ತಾನದ ಶ್ರೇಯಾಂಸಿ ಜೈನ್‌, ಪೌಶಿತಾ ಪಾಲಿವಾಲ್‌ (ತಲಾ 7) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು. ಮೊದಲ ಮೂರು ಸ್ಥಾನ ಪಡೆದವರು ಟ್ರೋಫಿ ಜೊತೆಗೆ ಕ್ರಮವಾಗಿ ₹50,000, ₹36,000 ಮತ್ತು ₹30,000 ಬಹುಮಾನ ಗಳಿಸಿದರು.

ವಿಶೇಷ ಎಂದರೆ ಮೊದಲ ಏಳು ಸ್ಥಾನ ಪಡೆದವರಲ್ಲಿ ಮೊದಲ ಇಬ್ಬರಷ್ಟೇ ರೇಟಿಂಗ್ ಹೊಂದಿದ್ದರು.

ಓಪನ್‌, ಬಾಲಕಿಯರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರು ಈ ವಯೋವರ್ಗದ ವಿಶ್ವ, ಏಷ್ಯನ್ ಮತ್ತು ಕಾಮನ್ವೆಲ್ತ್‌ ಚೆಸ್‌ ಕೂಟದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT