ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌: ಧನುಷ್‌ ಶ್ರೀಕಾಂತ್‌ಗೆ ಚಿನ್ನ

ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್
Published 5 ಜೂನ್ 2023, 16:30 IST
Last Updated 5 ಜೂನ್ 2023, 16:30 IST
ಅಕ್ಷರ ಗಾತ್ರ

ಜೂಲ್‌, ಜರ್ಮನಿ (ರಾಯಿಟರ್ಸ್‌): ಭಾರತದ ಧನುಷ್‌ ಶ್ರೀಕಾಂತ್‌ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನ ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.

ಸೋಮವಾರ ನಡೆದ ಸ್ಪರ್ಧೆಯಲ್ಲಿ ಧನುಷ್‌ ಒಟ್ಟು 249.4 ಪಾಯಿಂಟ್ಸ್‌ ಕಲೆಹಾಕಿ ಅಗ್ರಸ್ಥಾನ ಪಡೆದರು. ಧನುಷ್‌ ಅವರಿಗಿಂತ 1.3 ಪಾಯಿಂಟ್ಸ್‌ಗಳಿಂದ ಹಿಂದೆ ಬಿದ್ದ ಸ್ವೀಡನ್‌ನ ಪಾಂಟಸ್ ಕಲಿನ್ ಬೆಳ್ಳಿ ಜಯಿಸಿದರೆ, ಫ್ರಾನ್ಸ್‌ನ ರೊಮೇನ್ ಆಫ್ರೆರ್ ಕಂಚು ಪಡೆದರು. ಈ ಕೂಟದಲ್ಲಿ ಭಾರತಕ್ಕೆ ಲಭಿಸಿದ ಮೂರನೇ ಚಿನ್ನ ಇದು.

ಸ್ಕೀಟ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿ ಭಾರತ ಕಂಚು ಗೆದ್ದುಕೊಂಡಿತು. ಹರ್‌ಮೆಹರ್ ಮತ್ತು ಸಂಜನಾ ಸೂದ್‌ ಅವರು ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಸ್ವೀಡನ್‌ನ ಡೇವಿಡ್‌ ಜಾನ್ಸನ್ ಮತ್ತು ಫೆಲಿಸಿಯಾ ರಾಸ್‌ ವಿರುದ್ಧ ಗೆದ್ದರು.

ಭಾರತ ತಂಡ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡು ಚಿನ್ನ ಮತ್ತು ಒಂದು ಬೆಳ್ಳಿಯ ಪದಕದೊಂದಿಗೆ ಅಮೆರಿಕ ಎರಡನೇ ಸ್ಥಾನದಲ್ಲಿದೆ.

ಪುರುಷರ 10 ಮೀ. ಏರ್‌ ರೈಫಲ್‌ನಲ್ಲಿ ಧನುಷ್‌ ಸೇರಿದಂತೆ ಭಾರತದ ಮೂವರು ಫೈನಲ್‌ ಸುತ್ತು ಪ್ರವೇಶಿಸಿದ್ದರು.

ಧನುಷ್‌ ಅವರು ಅರ್ಹತಾ ಸುತ್ತಿನಲ್ಲಿ 628.4 ಪಾಯಿಂಟ್ಸ್‌ಗಳೊಂದಿಗೆ ಆರನೆಯವರಾಗಿ ಅಂತಿಮ ಸುತ್ತು ತಲುಪಿದ್ದರು. ಪ್ರಥಮ್‌ ಭಡಾನಾ ಅವರು 628.7 ಪಾಯಿಂಟ್ಸ್‌ಗಳೊಂದಿಗೆ ಐದನೆಯವರಾಗಿ ಮತ್ತು ಅಭಿನವ್‌ ಶಾ (626.7) ಎಂಟನೇ ಸ್ಥಾನ ಪಡೆದು ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

ಆದರೆ ಅಂತಿಮ ಸುತ್ತಿನಲ್ಲಿ ನಿಖರ ಗುರಿ ಹಿಡಿಯುವಲ್ಲಿ ಎಡವಿದ ಅಭಿನವ್‌ ಏಳನೇ ಸ್ಥಾನ ಪಡೆದರೆ, ಪ್ರಥಮ್‌ ನಾಲ್ಕನೇ ಸ್ಥಾನ ಪಡೆದು, ಅಲ್ಪ ಅಂತರದಲ್ಲಿ ಪದಕ ತಪ್ಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT