ವೇಹಸ್–ಸುರ್–ಮಾನ್ (ಫ್ರಾನ್ಸ್): ಒಲಿಂಪಿಕ್ ಚಾಂಪಿಯನ್ ಪಟ್ಟದಿಂದ ಎಮ್ಮಾ ಟ್ವಿಗ್ ಅವರನ್ನು ಕೆಳಗಿಇಳಿಸಿದ ಡಚ್ ರೋಯಿಂಗ್ ಸ್ಪರ್ಧಿ ಕರೋಲಿನ್ ಫ್ಲೋರಿನ್ ಅವರು ಮಹಿಳೆಯರ ಸಿಂಗಲ್ ಸ್ಕಲ್ಸ್ ಚಿನ್ನ ಗೆದ್ದರು. ಫ್ಲೋರಿನ್ ಕುಟುಂಬ ಈಗಾಗಲೇ ಒಲಿಂಪಿಕ್ ಚಿನ್ನಗಳ ಸಂಗ್ರಹ ಹೊಂದಿದೆ.
ಎರಡು ಬಾರಿಯ ವಿಶ್ವ ಚಾಂಪಿಯನ್, 26 ವರ್ಷದ ಫ್ಲೋರಿನ್, 7ನಿಮಿಷ 17.28 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು. ನ್ಯೂಜಿಲೆಂಡ್‌ನ ಸ್ಪರ್ಧಿಗಿಂತ ಎರಡು ಸೆಕೆಂಡು ಮೊದಲೇ ಗುರಿಮುಟ್ಟಿದರು.
ಲಿಥುವೇನಿಯಾದ ವಿಕ್ಟೋರಿಯಾ ಸೆಂಕುಂಟೆ (7:20.85) ಕಂಚಿನ ಪದಕ ಗೆದ್ದರು. ಇದು ರೋಯಿಂಗ್‌ನಲ್ಲಿ ಲಿಥುವೇನಿಯಾಕ್ಕೆ ಮೊದಲ ಪದಕ. ನ್ಯೂಜಿಲೆಂಡ್‌ನ ಟ್ವಿಗ್ ನಾಲ್ಕನೇ ಸ್ಥಾನಕ್ಕೆ ಸರಿದರು.
500 ಮೀ. ಕ್ರಮಿಸಿದ ನಂತರ ಮುನ್ನಡೆ ಗಿಟ್ಟಿಸಿದ ಫ್ಲೋರಿನ್ ನಂತರ ಲೀಡ್ ಬಿಟ್ಟುಕೊಡಲಿಲ್ಲ.
ಫ್ಲೋರಿನ್ ಅವರ ಅಣ್ಣ ಫಿನ್ ಫ್ಲೋರಿನ್ ಈ ವಾರದ ಆರಂಭದಲ್ಲಿ ಕ್ವಾಡ್ರಪಲ್ ಸ್ಕಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಇವರ ತಂದೆ ರೊನಾಲ್ಡ್ ಫ್ಲೋರಿನ್ ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಆಗಿದ್ದಾರೆ. ಅವರು 1988ರ ಸೋಲ್ ಮತ್ತು 1996ರ ಅಟ್ಲಾಂಟಾ ಕ್ರೀಡೆಗಳಲ್ಲಿ ಚಾಂಪಿಯನ್ ಆಗಿದ್ದರು.
ತಮ್ಮ ಶ್ರೇಯಸ್ಸಿಗೆ ಎಮ್ಮಾ ಟ್ವಿಗ್ ಅವರ ಪಾಲೂ ಇದೆ ಎಂದು ಡಚ್ ಸ್ಪರ್ಧಿ ಹೇಳಿದರು. ‘ಕೊನೆಯ ಕೆಲವೇ ಮೀಟರ್ ಇದ್ದಾಗ ಅವರ ಪೈಪೋಟಿಯಿಂದ ನಾನು ಮುಂದಕ್ಕೆ ಹೋದೆ. ಅವರು ಎರಡನೇ ಚಿನ್ನಕ್ಕೆ ಇನ್ನಿಲ್ಲದ ಯತ್ನ ನಡೆಸಿದರು’ ಎಂದು ಪ್ರತಿಕ್ರಿಯಿಸಿದರು.