ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games 2023 | ಟ್ರ್ಯಾಪ್‌ ವಿಭಾಗದಲ್ಲಿ ಚಿನ್ನ, ಬೆಳ್ಳಿ

Published 1 ಅಕ್ಟೋಬರ್ 2023, 13:46 IST
Last Updated 1 ಅಕ್ಟೋಬರ್ 2023, 13:53 IST
ಅಕ್ಷರ ಗಾತ್ರ

ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದ ಶೂಟಿಂಗ್‌ ಸ್ಪರ್ಧೆಯ ಕೊನೆಯ ದಿನವೂ ಭಾರತದ ಶೂಟರ್‌ಗಳು ಪಾರಮ್ಯ ಮೆರೆದು ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.

ಪುರುಷರ ಟ್ರ್ಯಾಪ್‌ ವಿಭಾಗದಲ್ಲಿ ಚಿನ್ನ ಜಯಿಸಿದರೆ, ಮಹಿಳಾ ತಂಡ ಬೆಳ್ಳಿ ತಂದುಕೊಟ್ಟಿತು. ಪುರುಷರ ವೈಯಕ್ತಿಕ ವಿಭಾಗದಲ್ಲಿ ಕಿನಾನ್‌ ಚೆನಾಯ್‌ ಅವರು ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಏಳು ಚಿನ್ನ ಸೇರಿದಂತೆ ಒಟ್ಟು 22 ಪದಕಗಳೊಂದಿಗೆ ಭಾರತದ ಶೂಟರ್‌ಗಳು ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿ ಅತ್ಯುತ್ತಮ ಸಾಧನೆ ಮಾಡಿದರು.

ಕೊನೆಯ ದಿನವಾದ ಭಾನುವಾರ ನಡೆದ ಪುರುಷರ ಟ್ರ್ಯಾಪ್‌ ವಿಭಾಗದಲ್ಲಿ ಪೃಥ್ವಿರಾಜ್‌ ತೊಂಡೈಮನ್ (119), ಕಿನಾನ್‌ ಚೆನಾಯ್ (122) ಮತ್ತು ಜೊರಾವರ್‌ ಸಿಂಗ್‌ ಸಂಧು (120) ಅವರನ್ನೊಳಗೊಂಡ ಭಾರತ ತಂಡ ಒಟ್ಟು 361 ಪಾಯಿಂಟ್ಸ್‌ ಕಲೆಹಾಕಿ ಏಷ್ಯನ್‌ ದಾಖಲೆಯೊಂದಿಗೆ ಅಗ್ರಸ್ಥಾನ ಗಳಿಸಿತು.

ಖಾಲೆದ್ ಅಲ್‌ಮುದಾಫ್‌, ತಲಾಲ್‌ ಅಲ್‌ರಾಶಿದಿ ಮತ್ತು ಅಬ್ದುಲ್‌ರಹ್ಮಾನ್ ಅಲ್‌ಫೈಹಾನ್ ಅವರನ್ನೊಳಗೊಂಡ ಕುವೈತ್‌ ತಂಡ (359) ಎರಡನೇ ಸ್ಥಾನ ಪಡೆದರೆ, ಆತಿಥೇಯ ಚೀನಾ (354) ಕಂಚು ತನ್ನದಾಗಿಸಿಕೊಂಡಿತು.

ಇದಕ್ಕೂ ಮುನ್ನ ನಡೆದಿದ್ದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಭಾರತ ತಂಡ (337) ಬೆಳ್ಳಿ ಗೆದ್ದುಕೊಂಡಿತು. ಮನೀಷಾ ಕೀರ್ (114), ಪ್ರೀತಿ ರಜಕ್ (112) ಮತ್ತು ರಾಜೇಶ್ವರಿ ಕುಮಾರಿ (111) ಅವರು ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾದರು.

ಕ್ವಿಂಗಿಯಾನ್ ಲಿ, ಸುಯಿಸುಯಿ ವು ಮತ್ತು ಕ್ಸಿಂಗ್‌ಜು ಝಾಂಗ್‌ ಅವರನ್ನೊಳಗೊಂಡ ಆತಿಥೇಯ ಚೀನಾ ಒಟ್ಟು 357 ಪಾಯಿಂಟ್ಸ್‌ಗೊಂದಿಗೆ ಚಿನ್ನ ಜಯಿಸಿತು. ಈ ಹಾದಿಯಲ್ಲಿ ವಿಶ್ವದಾಖಲೆ ಮತ್ತು ಏಷ್ಯನ್‌ ಗೇಮ್ಸ್‌ ದಾಖಲೆಯನ್ನೂ ತನ್ನ ಹೆಸರಿಗೆ ಬರೆಯಿಸಿಕೊಂಡಿತು. ಕಂಚಿನ ಪದಕ ಕಜಕಸ್ತಾನದ (336) ಪಾಲಾಯಿತು.

ಕಿನಾನ್‌ಗೆ ಕಂಚು

ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಟ್ರ್ಯಾಪ್‌ ಶೂಟರ್‌ಗಳಿಗೆ ವೈಯಕ್ತಿಕ ವಿಭಾಗದಲ್ಲಿ ಗುರಿ ತಪ್ಪಿತು. ಕಿನಾನ್‌ ಚೆನಾಯ್‌ ಕಂಚು ಗೆಲ್ಲಲಷ್ಟೇ ಯಶಸ್ವಿಯಾದರು. ಅವರು 40 ರಲ್ಲಿ 32 ಪಾಯಿಂಟ್ಸ್‌ ಗಳಿಸಿದರು. ಆರು ಶೂಟರ್‌ಗಳನ್ನೊಳಗೊಂಡ ಫೈನಲ್‌ಗೆ ಕಿನಾನ್‌ ಮತ್ತು ಜೊರಾವರ್‌ ಸಿಂಗ್‌ ಸಂಧು ಅರ್ಹತೆ ಪಡೆದುಕೊಂಡಿದ್ದರು. 30 ರಲ್ಲಿ 23 ಪಾಯಿಂಟ್ಸ್‌ಗಳನ್ನು ಕಲೆಹಾಕಿದ ಜೊರಾವರ್‌ ಐದನೇ ಸ್ಥಾನಕ್ಕೆ ಜಾರಿದರು. ಚೀನಾದ ಕ್ವಿ ಯಿಂಗ್ (50 ರಲ್ಲಿ 47) ಮತ್ತು ಕುವೈತ್‌ನ ತಲಾಲ್‌ ಅಲ್‌ರಾಶಿದಿ (50 ರಲ್ಲಿ 45) ಅವರು ಕ್ರಮವಾಗಿ ಬೆಳ್ಳಿ ಹಾಗೂ ಚಿನ್ನ ಗೆದ್ದುಕೊಂಡರು. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ಮನೀಷಾ ಅವರಿಗೆ ಆರನೇ ಸ್ಥಾನ ಲಭಿಸಿತು.

ಶೂಟಿಂಗ್‌ನಲ್ಲಿ ಸಾಧನೆ

ಒಟ್ಟು ಪದಕ– 22

ಚಿನ್ನ – 7

ಬೆಳ್ಳಿ – 9

ಕಂಚು – 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT