ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌: ಗುಕೇಶ್‌ಗೆ ಜಯ, ಮತ್ತೆ ಜಂಟಿ ಅಗ್ರಸ್ಥಾನ

ಇನ್ನೆರಡೇ ಸುತ್ತುಗಳು ಬಾಕಿ* ಅಗ್ರಸ್ಥಾನದಲ್ಲಿ ಮೂವರು
Published 19 ಏಪ್ರಿಲ್ 2024, 13:09 IST
Last Updated 19 ಏಪ್ರಿಲ್ 2024, 13:09 IST
ಅಕ್ಷರ ಗಾತ್ರ

ಟೊರಾಂಟೊ: ಮತ್ತೊಮ್ಮೆ ಅಮೋಘ ಆಟವಾಡಿದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌, ಅಜರ್‌ಬೈಜಾನ್‌ನ ನಿಜತ್‌ ಅಬಸೋ‌ವ್ ಅವರನ್ನು ಸೋಲಿಸಿ ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿಯ 12ನೇ ಸುತ್ತಿನ ನಂತರ ಮರಳಿ ಜಂಟಿ ಅಗ್ರಸ್ಥಾನಕ್ಕೇರಿದರು. ಆದರೆ ಭಾರತದ ಇನ್ನಿಬ್ಬರು–  ಆರ್‌.ಪ್ರಜ್ಞಾನಂದ ಮತ್ತು ವಿದಿತ್ ಗುಜರಾತಿ ಅವರ ಪ್ರಶಸ್ತಿ ಕನಸು ಕೊನೆಗೊಂಡಿತು.

ಅಮೆರಿಕದ ಹಿಕಾರು ನಕಾಮುರಾ ಅವರು ಫ್ರಾನ್ಸ್‌ನ ಅಲಿರೇಝಾ ಫಿರೋಜಾ ಅವರನ್ನು ಮಣಿಸಿದ್ದರಿಂದ ಅವರು ಕೂಡ ನೆಪೊಮ್‌ನಿಯಾಚಿ, ಗುಕೇಶ್‌ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಮೂವರೂ ತಲಾ ಏಳೂವರೆ ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಈ ಮೂವರ ಬೆನ್ನತ್ತಿರುವ ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಏಳು ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಫಿಡೆ ಧ್ವಜದಡಿ ಆಡುತ್ತಿರುವ ರಷ್ಯಾದ ನೆಪೊಮ್‌, ಗುರುವಾರ ಗ್ರೇಟ್‌ಹಾಲ್‌ನಲ್ಲಿ ನಡೆದ 12ನೇ ಸುತ್ತಿನಲ್ಲಿ ಪ್ರಜ್ಞಾನಂದ ಜೊತೆ ಪಾಯಿಂಟ್‌ ಹಂಚಿಕೊಂಡರು. ಅಮೆರಿಕದ ಕರುವಾನಾ ಅವರು ಇನ್ನೊಂದು ಪಂದ್ಯದಲ್ಲಿ ವಿದಿತ್‌ ಅವರನ್ನು ಮಣಿಸಿದರು.

ಪ್ರಜ್ಞಾನಂದ (6) ಅವರು ಐದನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಗುಜರಾತಿ (5) ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಎರಡನೇ ಸುತ್ತುಗಳು ಉಳಿದಿರುವ ಕಾರಣ ಇವರಿಬ್ಬರು ಅಗ್ರಸ್ಥಾನಕ್ಕೇರುವ ಸಾಧ್ಯತೆಯಿಲ್ಲ. ಅಲಿರೇಝಾ (4.5) ಮತ್ತು ಅಬಸೋವ್‌ (3) ಏಳು ಮತ್ತು ಎಂಟನೇ ಸ್ಥಾನದಲ್ಲೇ ಇದ್ದಾರೆ.

ಗುಕೇಶ್‌ ಅವರು ದೀರ್ಘ ಇತಿಹಾಸ ಹೊಂದಿರುವ ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎರಡನೇ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. 1959ರಲ್ಲಿ ಅಮೆರಿಕದ ತಾರೆ ಬಾಬಿ ಫಿಷರ್‌ ಭಾಗವಹಿಸಿದ್ದಾಗ ಅವರಿಗೆ 16 ವರ್ಷ ವಯಸ್ಸಾಗಿತ್ತು. ‌

ಅಬಸೋವ್‌ ವಿರುದ್ಧ ಕಪ್ಪು ಕಾಯಿಗಳಲ್ಲಿ ಆಡಿದ ಗುಕೇಶ್‌ಗೆ ಲೀಡ್‌ ಪಡೆಯಲು ಜಯ ಅನಿವಾರ್ಯವಾಗಿತ್ತು. ನಿಮ್ಜೊ ಇಂಡಿಯನ್‌ ಡಿಫೆನ್ಸ್‌ನಲ್ಲಿ ಉತ್ತಮ ಆರಂಭ ಮಾಡಿದ ಗುಕೇಶ್‌ ಮಧ್ಯಮ ಹಂತದಲ್ಲಿ ಕರಾರುವಾಕ್ ನಡೆಗಳ ಮೂಲಕ ಎಲ್ಲ ವಿಭಾಗಗಳಲ್ಲಿ ಮೇಲುಗೈ ಪಡೆದರು. ಅವರ ‘ಪಾಸ್ಡ್‌ ಪಾನ್‌’ಗಳು ಉತ್ತಮ ಸ್ಥಿತಿಯಲ್ಲಿದ್ದವು. ಹೀಗಾಗಿ ಗೆಲುವು ಖಚಿತವಾಯಿತು.

ಚೀನಾ ಪಾರಮ್ಯ:

ಮಹಿಳಾ ವಿಭಾಗದಲ್ಲಿ ಚೀನಾದ ಪ್ರಾಬಲ್ಯ ಮುಂದುವರಿಯಿತು. ಜೊಂಗ್‌ಯಿ ತಾನ್‌, ಬಲ್ಗೇರಿಯಾದ ನುರ್ಗ್ಯುಲ್‌ ಸಲಿಮೋವಾ ಅವರ ಜೊತೆ ಡ್ರಾ ಮಾಡಿಕೊಂಡಿದ್ದು, ಒಟ್ಟು ಎಂಟು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ರಷ್ಯಾದ ಕ್ಯಾತರಿನಾ ಲಾಗ್ನೊ, ಚೀನಾದ ಇನ್ನೊಬ್ಬ ಆಟಗಾರ್ತಿ ಟಿಂಗ್ಜಿ ಲೀ ಅವರಿಂದ ಅರ್ಧ ಪಾಯಿಂಟ್‌ ಕಸಿದುಕೊಳ್ಳಲಷ್ಟೇ ಶಕ್ತರಾದರು. ಲೀ (7.5) ಈಗ ಅರ್ಧ ಪಾಯಿಂಟ್‌ ಅಂತರದಿಂದ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ಕೋನೇರು ಹಂಪಿ ಅವರು ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚಿನಾ ( ) ಅವರನ್ನು ಡ್ರಾಕ್ಕೆ ಒಳಪಡಿಸಿದರು. ಭಾರತದ ಇನ್ನೊಬ್ಬ ಆಟಗಾರ್ತಿ ಆರ್‌.ವೈಶಾಲಿ 57 ನಡೆಗಳಲ್ಲಿ ಉಕ್ರೇನ್‌ನ ಅನ್ನಾ ಮುಝಿಚುಕ್‌ ಅವರನ್ನು ಸೋಲಿಸಿ ಸತತ ಎರಡನೇ ಜಯ ಸಂಪಾದಿಸಿದರು.

ಹಂಪಿ, ಲಾಗ್ನೊ, ಗೊರ್ಯಾಚ್ಕಿನಾ ಅವರು ತಲಾ ಆರು ಪಾಯಿಂಟ್ಸ್‌ ಪಡೆದಿದ್ದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ವೈಶಾಲಿ (5.5) ಆನೇ ಸ್ಥಾನದಲ್ಲಿದ್ದಾರೆ. ಸಲಿಮೋವಾ ಮತ್ತು ಮುಝಿಚುಕ್‌ (ತಲಾ 4.5) ನಂತರದ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT