ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಪ್ಪಿದ ಒಲಿಂಪಿಕ್ಸ್: ಆತ್ಮಹತ್ಯೆಗೆ ಯೋಚಿಸಿದ್ದ ಅಥ್ಲೀಟ್ ಹರ್ಮಿಲನ್ ಬೇನ್ಸ್

Published : 12 ಸೆಪ್ಟೆಂಬರ್ 2024, 15:54 IST
Last Updated : 12 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ವಿಫಲವಾದ ನಿರಾಸೆಯಲ್ಲಿ ಅಥ್ಲೀಟ್ ಹರ್ಮಿಲನ್ ಬೇನ್ಸ್ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದರಂತೆ!

ಇದೀಗ ಖಿನ್ನತೆಯಿಂದ ಹೊರಬಂದಿರುವ 26 ವರ್ಷದ ಹರ್ಮಿಲನ್ ಅವರು ರೂಪದರ್ಶಿಯಾಗುವತ್ತ ಚಿತ್ತ ನೆಟ್ಟಿದ್ದಾರೆ. ಪಂಜಾಬಿನ ಹರ್ಮಿಲನ್ ಅವರು ಎರಡು ವರ್ಷಗಳ ಹಿಂದೆ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 800 ಮೀ ಮತ್ತು 1500 ಮೀ ಓಟದ ಸ್ಪರ್ಧೆಗಳಲ್ಲಿ ಎರಡು ಪದಕಗಳನ್ನು ಜಯಿಸಿದ್ದರು. 

ಕಳೆದ ಋತುವಿನಲ್ಲಿ ಗಾಯದಿಂದಾಗಿ ಕ್ರೀಡೆಯಿಂದ ಹೊರಗುಳಿದಿದ್ದರು. ಅದರಿಂದಾಗಿ ಅವರು ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ತಪ್ಪಿಸಿಕೊಂಡಿದ್ದರು. 

‘ನನಗೆ ಪ್ಯಾರಿಸ್ ಒಲಿಂಪಿಕ್‌ ಕೂಟದಲ್ಲಿ ಸ್ಪರ್ಧಿಸುವ ಗುರಿ ಇತ್ತು. ಆದರೆ ಗಾಯಗೊಂಡಿದ್ದರಿಂದ ನನ್ನ ಸಾಮರ್ಥ್ಯವು ಕುಂಠಿತವಾಯಿತು. ಒಲಿಂಪಿಕ್ಸ್ ಅವಕಾಶ ಕೈತಪ್ಪಿದ್ದರಿಂದ ಅಪಾರ ಬೇಸರವಾಗಿತ್ತು. ಅದರಿಂದಾಗಿ ನಾನ್ನು ಖಿನ್ನತೆಗೊಳಗಾಗಿದ್ದೆ. ಮಾನಸಿಕವಾಗಿ ಖಾಲಿತನ ಕಾಡಿತ್ತು. ಯಾವುದೇ ವಿಚಾರ ಮಾಡುವಷ್ಟೂ ಚೈತನ್ಯ ಉಳಿದಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲೂ ಯೋಚಿಸಿದ್ದೆ. ಕ್ರೀಡೆಯನ್ನೂ ತೊರೆಯಲೂ ಮುಂದಾಗಿದ್ದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ‘ದ ಕ್ವೀನ್’ ಎಂದೇ ಪರಿಚತರಾಗಿರುವ ಹರ್ಮಿಲನ್ ಹೇಳಿದ್ದಾರೆ.

ಅವರು ಅಸ್ಥಿರಜ್ಜುವಿನ ಸೆಳೆತದಿಂದ (ಗ್ರೇಡ್ 2ಬಿ) ಬಳಲುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಅವರು ಟ್ರ್ಯಾಕ್‌ಗೆ ಮರಳುವುದು ಖಚಿತವಿಲ್ಲ. 

‘ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅದಮ್ಯವಾದ ಆಸೆ ಇತ್ತು. ಅದಕ್ಕಾಗಿ ಗಾಯದ ನೋವಿನಲ್ಲಿಯೂ ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದ ಕೂಟವೊಂದರಲ್ಲಿ ಭಾಗವಹಿಸಿದೆ. ಆದರೆ ಆಗ ಗ್ರೇಡ್ 1 ಹಂತದಲ್ಲಿದ್ದ ಗಾಯ ಉಲ್ಬಣಿಸಿ ಗ್ರೇಡ್ 2ಬಿ ಆಯಿತು. ಇನ್ನೊಂದು ಸ್ಕ್ಯಾನ್ ಆದ ನಂತರ ಶಸ್ತ್ರಚಿಕಿತ್ಸೆ ಕುರಿತು ನಿರ್ಧಾರ ಕೈಗೊಳ್ಳುವೆ. ಸದ್ಯಕ್ಕೆ ಇನ್ನೂ ಒಂಬತ್ತು ತಿಂಗಳು ಓಡಲು ಸಾಧ್ಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಅವರು ಮೊಹಾಲಿಯಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

‘ಒಂದೊಮ್ಮೆ ಕ್ರೀಡೆಯಿಂದ ವಿಮುಖವಾದರೆ  ಮಾಡೆಲಿಂಗ್‌ ವೃತ್ತಿಗೆ ತೆರಳುವ ಕುರಿತು ಯೋಚಿಸುತ್ತಿರುವೆ. ಈ ಬಗ್ಗೆ ಈಗಲೇ ಹೆಚ್ಚು ಹೇಳಲಾಗದು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT