ಹಂಪಿ ಉತ್ಸವಕ್ಕಾಗಿ (ಮಾರ್ಚ್ 2–3) ಸಜ್ಜಾಗಿದ್ದ ಹಂಪಿಯ ಐದು ವೇದಿಕೆಗಳತ್ತ ಜನ ಧಾವಿಸಲು ಸಜ್ಜಾಗುತ್ತಿದ್ದಾಗ, ಎದೆ ಗಟ್ಟಿಯುಳ್ಳವರು ಗಾಯತ್ರಿಪೀಠದ ಬಳಿ ಬಿರುಬಿಸಿಲನ್ನು ಲೆಕ್ಕಿಸದೆ, ಬಂಡೆಗಳ ಮೇಲೆ ಸಾಹಸ ಕ್ರೀಡೆಯ ದಾಖಲೆ ಬರೆಯುತ್ತಿದ್ದರು.

ಹಗ್ಗ ಹಾಗೂ ಹಗ್ಗದ ಏಣಿಯ ನೆರವಿನಿಂದ ಬಂಡೆಗಳನ್ನು ಹತ್ತುತ್ತಿದ್ದರು, (ರಾಕ್ ಕ್ಲೈಂಬಿಂಗ್/ ಲ್ಯಾಡರ್ ಕ್ಲೈಂಬಿಂಗ್), ಬಂಡೆಯಿಂದ ಇಳಿಯುತ್ತಿದ್ದರು (ರ್‍ಯಾಪ್ಲಿಂಗ್), ಬಂಡೆಗಳೂ ಹೀಗೆ ಉತ್ಸವದ ಭಾಗವಾಗುವುದು ಪ್ರತಿ ವರ್ಷದ ವಿಶೇಷ. ಕೃತಕ ಗೋಡೆ ಹತ್ತುವ ಸಾಹಸವೂ ಅಲ್ಲಿತ್ತು. ನೂರಾರು ಯುವಕ ಯುವತಿಯರು, ಚಿಣ್ಣರು ಸಾಹಸ ಕ್ರೀಡೆಯ ಸೊಬಗು ಕಣ್ತುಂಬಿಕೊಂಡರು.

ಇಂಥ ಸಾಹಸ ನಡೆಯುತ್ತಿರುವಾಗಲೇ, ಹೊಸಪೇಟೆಸಮೀಪದ ಕಮಲಾಪುರದ ಕೆರೆಯಲ್ಲಿ ನಡೆದ ತೆಪ್ಪದ ಸ್ಪರ್ಧೆಯಲ್ಲಿ ಮೀನುಗಾರ ಮಹಿಳೆಯರು, ಪುರುಷರು ತಮ್ಮ ತೋಳ್ಬಲವನ್ನು ಪಣಕ್ಕಿಟ್ಟು ಹುಟ್ಟು ಹಾಕುತ್ತಾ ಮುಂದೆ ನುಗ್ಗುತ್ತಿದ್ದರು.

ಇಳಿ ಸಂಜೆಯಲ್ಲಿ ಸೂರ್ಯ ಬೆಳಕಿನಲ್ಲಿ ಮಿಂಚುತ್ತಿದ್ದ ಕೆರೆಯ ನೀರನ್ನು ಸೀಳಿ ತೆಪ್ಪಗಳು ಮುನ್ನುಗ್ಗುತ್ತಿದ್ದರೆ ದಡದಲ್ಲಿ ನಿಂತವರ ಉತ್ತೇಜನದ ಕೂಗು ಕೆರೆಯ ಇನ್ನೊಂದು ತುದಿಯನ್ನೂ ಮುಟ್ಟಿತ್ತು. ಪುರುಷರ 23 ಮತ್ತು ಮಹಿಳೆಯರ ಆರು ತಂಡಗಳು ಸ್ಪರ್ಧೆಯ ಮೆರುಗನ್ನು ಹೆಚ್ಚಿಸಿದ್ದವು. ಗೆದ್ದವರು ₹ 5000, ₹ 3000 ಹಾಗೂ ₹ 2 000 ನಗದು ಬಹುಮಾನ ಗಳಿಸಿದರು.

ಈ ಕೆರೆಗಿಂತಲೂ ಮುಂಚೆ ಸಿಗುವ ವಿದ್ಯಾರಣ್ಯಪೀಠ ಹೈಸ್ಕೂಲ್ ಮೈದಾನ ಗ್ರಾಮೀಣ ಕ್ರೀಡಾ ಸ್ಪರ್ಧೆಯ ಮತ್ತೊಂದು ರೋಚಕ ಆಯಾಮಕ್ಕೆ ಸಾಕ್ಷಿಯಾಗಿತ್ತು. ಕಬಡ್ಡಿ, ವಾಲಿಬಾಲ್ ಸ್ಪರ್ಧೆಗಳಿಗಿಂತಲೂ ಕುಸ್ತಿ ಮತ್ತು ಕಲ್ಲು ಗುಂಡು ಎತ್ತುವ ಸ್ಪರ್ಧೆಗಳಲ್ಲಿ ಹೆಚ್ಚು ಚಪ್ಪಾಳೆಗಳು ಬಿದ್ದವು.ಗುಂಡು ಎತ್ತುವ ಸ್ಪರ್ಧೆಯ ಮೊದಲ ಹಂತದಲ್ಲಿ 100 ಕೆ.ಜಿ. ಗುಂಡನ್ನು ಎತ್ತಿದವರು ಕೇವಲ ಮೂವರು. ಜಮಖಂಡಿಯ ಇಬ್ರಾಹಿಂ ಸಾಬ್, ರಾಯಚೂರಿನ ಈಶ್ವರ್ ಕಲ್ಲೂರು ಹಾಗೂ ತಿಪ್ಪಣ್ಣ ಜಾವಳೇಕರ.

ಎರಡನೇ ಹಂತದಲ್ಲಿ 150 ಕೆಜಿ ತೂಕದ ಗುಂಡನ್ನು ಮೂರು ನಿಮಿಷ10 ಸೆಕೆಂಡುಗಳಲ್ಲಿ ಎತ್ತಿ ಬಿಸಾಕಿದ ಜಮಖಂಡಿಯ ಇಬ್ರಾಹಿಂ ಸಾಬ್, ಮೂರನೇ ಹಂತದ 175 ಕೆ.ಜಿ. ತೂಕದ ಗುಂಡನ್ನು ಎತ್ತುವ ಸ್ಪರ್ಧೆಯಿಂದ ಹಿಂದೆ ಸರಿದರೂ ’ತಾಂತ್ರಿಕ‘ವಾಗಿ ಗೆಲುವು ಪಡೆದುಮೊದಲ ಬಹುಮಾನವನ್ನೇ ಗಿಟ್ಟಿಸಿದರು!

ಎದುರಾಳಿಯಾಗಿದ್ದ ರಾಯಚೂರಿನ ಈಶ್ವರ್ ಕಲ್ಲೂರು, ಎರಡನೇ ಹಂತದಲ್ಲಿ 150 ಕೆ.ಜಿ. ತೂಕದ ಗುಂಡನ್ನು ಎತ್ತಲು ಅವರಿಗಿಂತಲೂ ಹೆಚ್ಚು ಕಾಲಾವಕಾಶ (4ನಿಮಿಷ 76 ಸೆಕೆಂಡ್) ಪಡೆದಿದ್ದೇ ಇದಕ್ಕೆ ಕಾರಣವಾಯಿತು. ಕಣದಲ್ಲಿ ಉಳಿದಿದ್ದ ಏಕೈಕ ಸ್ಪರ್ಧಿಯಾಗಿದ್ದ ಈಶ್ವರ್ ಅವರಿಗೆ 175 ಕೆ.ಜಿ. ತೂಕದ ಗುಂಡನ್ನು ಎತ್ತಲು ಆಗಲಿಲ್ಲ. ಈ ರೋಚಕ ಸ್ಪರ್ಧೆಯಲ್ಲಿ ಕ್ರೀಡಾಪ್ರೇಮಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.

ಪುರುಷರಿಗೆ 50 ಕೆ.ಜಿ., 57 ಕೆ.ಜಿ., 61 ಕೆ.ಜಿ. ಮತ್ತು 70 ಕೆ.ಜಿ. ಹಾಗೂ 74 ಕೆ.ಜಿ. ವಿಭಾಗದಲ್ಲಿ ಮಹಿಳೆಯರಿಗೆ 50 ಕೆ.ಜಿ. ಹಾಗೂ 55 ಕೆ.ಜಿ. ಒಳಗಿನವರ ವಿಭಾಗದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯೂ ರೋಚಕವಾಗಿತ್ತು.

ದೇಹದ ತೂಕದ ಆಧಾರದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಪಂದ್ಯಾವಳಿಗೆ ನಾಕೌಟ್ ಮೂಲಕ ಮಹಿಳೆಯರ ಮೂರು ಹಾಗೂ ಪುರುಷರ ಐದು ಜೋಡಿಯನ್ನು ಆಯ್ಕೆ ಮಾಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಗಂಗಾವತಿ, ದಾವಣಗೆರೆ, ವಿಜಯಪುರ, ಬಳ್ಳಾರಿಯ ಕುಸ್ತಿಪಟುಗಳು ಸೆಣೆಸಾಡಿ ಗಮನ ಸೆಳೆದಿದ್ದರು.

ಮೂರು ಗಂಟೆಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಪೈಲ್ವಾನರು ಪ್ರದರ್ಶಿಸಿದ ದಾಕ್, ದೋಬಿ, ನಿಕಾಲಿ, ಏಕ್‍ಲಂಗಿ, ಮೌಳು, ಲೆಗ್ ಅಟ್ಯಾಕ್, ಬಾರಂದಾಜ್, ಸಾಲ್ತೋಟ್ ಪಟ್ಟುಗಳಿಗೆ ಕುಸ್ತಿ ಅಖಾಡವನ್ನು ಅಲಂಕರಿಸಿದ್ದ ಬಾಳೆಗಿಡಗಳೂ ಬಾಗಿದ್ದವು.

ಏಳು ತೂಕದ ವಿಭಾಗಗಳಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆ (ಬೆಂಚ್ ಪ್ರೆಸ್) ಪೈಕಿ 105 ಕೆ.ಜಿ, 74 ಕೆ.ಜಿ ಹಾಗೂ 66 ಕೆ.ಜಿ ವಿಭಾಗದಲ್ಲಿ ದಾವಣಗೆರೆಯ ಸ್ಪರ್ಧಾಳುಗಳೇ ಪ್ರಥಮ ಸ್ಥಾನ ಗಳಿಸಿ ಮಿಂಚಿದರು.

ಉತ್ಸವದ ಮೊದಲ ದಿನ ನಡೆದ ಕಬಡ್ಡಿ ಫೈನಲ್ ಪಂದ್ಯದಲ್ಲಿ ದಾವಣಗೆರೆ ತಂಡ, ಮರ್ಲಾನಹಳ್ಳಿ ತಂಡವನ್ನು ಮಣಿಸಿ. ಎಲ್ಲ ವಿಭಾಗಗಳಲ್ಲೂ ಉತ್ತಮ ಆಟವಾಡಿ ಪ್ರಶಸ್ತಿ ಗೆದ್ದಿತು.

ವಾಲಿಬಾಲ್ ಟೂರ್ನಿಯಲ್ಲಿಪುರುಷರ 12 ತಂಡಗಳು ಪಾಲ್ಗೊಂಡರೆ, ಮಹಿಳೆಯರ ಒಂದೇ ಒಂದು ತಂಡವೂ ಪಾಲ್ಗೊಳ್ಳಲಿಲ್ಲ. ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾರದೇ ಇದ್ದುದರಿಂದ ವಾಲಿಬಾಲ್ ಪಂದ್ಯಾವಳಿ ನೀರಸವಾಗಿ ನಡೆಯಿತು.

ಕಲ್ಲುಗುಂಡು ಎತ್ತುವ ಸಾಂಪ್ರದಾಯಿಕ ಕ್ರೀಡೆಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು. ಉತ್ಸವದಲ್ಲಿ ಪ್ರತಿ ವರ್ಷ ಈ ಸ್ಪರ್ಧೆ ನಡೆಯುತ್ತಿರುವುದು ಸಂತಸ ತಂದಿದೆ.
–ಇಬ್ರಾಹಿಂ ಸಾಬ್, ಜಮಖಂಡಿ, ಗುಂಡು ಎತ್ತುವ ಸ್ಪರ್ಧೆ ವಿಜೇತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.