ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆನ್ನೈಗೆ ಬಂದಿಳಿದ ಒಲಿಂಪಿಯಾಡ್ ವೀರರು: ಚಿನ್ನ ಗೆದ್ದ ಸದಸ್ಯರಿಗೆ ಆತ್ಮೀಯ ಸ್ವಾಗತ

Published : 24 ಸೆಪ್ಟೆಂಬರ್ 2024, 15:09 IST
Last Updated : 24 ಸೆಪ್ಟೆಂಬರ್ 2024, 15:09 IST
ಫಾಲೋ ಮಾಡಿ
Comments

ಚೆನ್ನೈ: ಬುಡಾಪೆಸ್ಟ್‌ ಚೆಸ್‌ ಒಲಿಂಪಿಯಾಡ್‌ನಲ್ಲಿ ಚಾರಿತ್ರಿಕ ಚಿನ್ನ ಗೆದ್ದ ಭಾರತ ಒಲಿಂಪಿಯಾಡ್ ತಂಡದ ಸದಸ್ಯರು ಮಂಗಳವಾರ ಬೆಳಿಗ್ಗೆ ಇಲ್ಲಿ ಬಂದಿಳಿದಾಗ ಅವರಿಗೆ ಉತ್ಸಾಹಿ ಚೆಸ್‌ ಅಭಿಮಾನಿಗಳು, ಅಧಿಕಾರಿಗಳು, ಕುಟುಂಬ ಸದಸ್ಯರು ಆತ್ಮೀಯವಾಗಿ ಸ್ವಾಗತ ಕೋರಿದರು.

ಡಿ.ಗುಕೇಶ್, ಆರ್‌.ಪ್ರಜ್ಞಾನಂದ, ಆರ್‌.ವೈಶಾಲಿ ಮತ್ತು ಪುರುಷರ ತಂಡದ ನಾಯಕ ಶ್ರೀನಾಥ್ ನಾರಾಯಣನ್‌ ಅವರು ಬೆಳಗಿನ ಜಾವ ವಿಮಾನದಲ್ಲಿ ಇಲ್ಲಿಗೆ ಬಂದಿಳಿದರು. ಬುಡಾಪೆಸ್ಟ್‌ನಲ್ಲಿ ಪುರುಷರ ಮತ್ತು ಮಹಿಳಾ ತಂಡಗಳು ಮೊದಲ ಬಾರಿ ಚಿನ್ನ ಗೆದ್ದಿದ್ದವು.

ಈ ನಾಲ್ವರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಹರ್ಷೋದ್ಗಾರಗಳು ಮೊಳಗಿದವು. ಗುಕೇಶ್ ಅವರು ಓಪನ್ ವಿಭಾಗದಲ್ಲಿ ಅಜೇಯರಾಗಿ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗಾಗಲೇ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದಿರುವ 18 ವರ್ಷ ವಯಸ್ಸಿನ ಈ ಆಟಗಾರ ವಿಶ್ವ ಚಾಂಪಿಯನ್‌ಗೆ ಚಾಲೆಂಜರ್‌ ಆಗಿದ್ದಾರೆ. ಇದೇ ನವೆಂಬರ್‌ 25ರಿಂದ ಸಿಂಗಪುರದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.

‘ಎರಡೂ ತಂಡಗಳು ಚಿನ್ನ ಗೆದ್ದಿರುವುದು ತುಂಬಾ ವಿಶೇಷವಾಗಿದೆ’ ಎಂದು ಗುಕೇಶ್ ಪಿಟಿಐ ವಿಡಿಯೋಗೆ ತಿಳಿಸಿದರು.

ಮೊದಲು ತಲುಪಿದ ಪ್ರಜ್ಞಾನಂದ ಮತ್ತು ವೈಶಾಲಿ, ಶ್ರೀನಾಥ್‌ ನಾರಾಯಣನ್ ಅವರಿಗೂ ಅಭಿಮಾನಿಗಳು, ಕುಟುಂಬವರ್ಗದವರು ಪುಷ್ಪಗುಚ್ಛ, ಹಾರಗಳನ್ನು ಹಾಕಿ ಸ್ವಾಗತಿಸಿದರು. ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡರು.

‘ಮೊದಲ ಬಾರಿ ಒಲಿಂಪಿಯಾಡ್‌ ಗೆದ್ದಿರುವುದು ಸಂತಸ ತಂದಿದೆ. ಇದುವರೆಗೆ ನಾವು ಕಂಚಿನ ಪದಕ ಮಾತ್ರ ಗೆದ್ದಿದ್ದೆವು. ನಾವು ಎರಡೂ ವಿಭಾಗಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಧನ್ಯತಾಭಾವ ಮೂಡಿಸಿದ ಕ್ಷಣ‘ ಎಂದು ಪ್ರಜ್ಞಾನಂದ ಹೇಳಿದರು.

‘ಚೆನ್ನೈನಲ್ಲಿ ಚಿನ್ನದ ಪದಕ ಕೈತಪ್ಪಿದಾಗ ಬೇಸರವಾಗಿತ್ತು. ಈ ಬಾರಿ ಭಾರತದ ಎರಡೂ ತಂಡಗಳು ಗೆದ್ದಿರುವುದು ಸಂತಸ ಮೂಡಿಸಿದೆ. ಇದೊಂದು ಐತಿಹಾಸಿಕ ಸಂದರ್ಭ’ ಎಂದು ವೈಶಾಲಿ ಪ್ರತಿಕ್ರಿಯಿಸಿದರು.

‘ನಾವು ಆರು ಪಂದ್ಯಗಳನ್ನು ಸತತವಾಗಿ ಗೆದ್ದುಕೊಂಡೆವು. ನಂತರ ಪೋಲೆಂಡ್‌ಗೆ ಸೋತರೂ, ಪುನರಾಗಮನ ಮಾಡಿದೆವು. ಅಮೆರಿಕ ವಿರುದ್ಧ ಡ್ರಾ ಮಾಡಿ, ನಿರ್ಣಾಯಕವಾಗಿದ್ದ ಕೊನೆಯ ಎರಡು ಸುತ್ತುಗಳನ್ನು ಗೆದ್ದು ಚಿನ್ನ ನಮ್ಮದಾಗಿಸಿಕೊಂಡೆವು’ ಎಂದರು.

‘ಒಲಿಂಪಿಯಾಡ್‌ ಚಿನ್ನ ಗೆದ್ದ ಅತ್ಯಂತ ಪ್ರಬಲ ತಂಡವೊಂದರ ನಾಯಕನಾಗಿರುವುದು ನನಗೆ ಅತೀವ ಹೆಮ್ಮೆ ಮೂಡಿಸಿದೆ. ತಂಡದ ಇಂಥ ಸಾಧನೆಯ ಹಿಂದೆ ವರ್ಷಗಳ ಶ್ರಮ ಇರುತ್ತದೆ’ ಎಂದು ನಾಯಕ ಶ್ರೀನಾಥ್ ಹೇಳಿದರು.

ಗುಕೇಶ್‌, ಅರ್ಜುನ್‌ ಇರಿಗೇಶಿ ಮತ್ತು ಪ್ರಜ್ಞಾನಂದ ಅವರನ್ನು ಒಳಗೊಂಡಂತೆ ಹೊಸ ತಲೆಮಾರಿನ ಆಟಗಾರಾರು ವಿಶ್ವದ ಯಾವುದೇ ಆಟಗಾರನನ್ನು ಸೋಲಿಸಬಲ್ಲರು ಎಂದು 30 ವರ್ಷ ವಯಸ್ಸಿನ ಶ್ರೀನಾಥ್ ಹೇಳಿದರು.

‘ಈಗಿನ ಆಟಗಾರರು ವಿಶ್ವವಿಜೇತರು. ಅವರು ಅದನ್ನು ಇಲ್ಲಿ ಮಾತ್ರವಲ್ಲ, ಕ್ಯಾಂಡಿಡೇಟ್ಸ್ ಸೇರಿ ವಿವಿಧ ಟೂರ್ನಿಗಳಲ್ಲಿ ಸಾಧಿಸಿ ತೋರಿಸಿದ್ದಾರೆ’ ಎಂದರು. ‘ನಮ್ಮ ಮುಂದಿನ ಗುರಿ ವಿಶ್‌ವ ಚಾಂಪಿಯನ್‌ ಆಟಗಾರನನ್ನು ಹೊಂದುವುದು’ ಎಂದರು. ಗುಕೇಶ್‌ ಈಗ ಆ ಅವಕಾಶ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT