ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಚಿನ ಪದಕಕ್ಕೆ ಪೈಪೋಟಿ: ಭಾರತಕ್ಕೆ ಸ್ಪೇನ್‌ ಸವಾಲು

ಜೂನಿಯರ್‌ ಹಾಕಿ:
Published 15 ಡಿಸೆಂಬರ್ 2023, 16:07 IST
Last Updated 15 ಡಿಸೆಂಬರ್ 2023, 16:07 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಎಫ್‌ಐಎಚ್‌ ಪುರುಷರ ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಭಾರತ ತಂಡವು ಶನಿವಾರ ಕಂಚಿನ ಪದಕಕ್ಕಾಗಿ ಬಲಿಷ್ಠ ಸ್ಪೇನ್‌ ತಂಡದ ವಿರುದ್ಧ ಸೆಣಸಲಿದೆ.

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಜರ್ಮನಿ ವಿರುದ್ಧ ದೊರೆತ 12 ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಫಲವಾದ ಉತ್ತಮ್‌ ಸಿಂಗ್‌ ಬಳಗ 1–4ರಿಂದ ಮುಗ್ಗರಿಸಿತ್ತು. ಮತ್ತೊಂದು ಸೆಮಿಫೈನಲ್‌ನಲ್ಲಿ ಸ್ಪೇನ್‌ 1–3ರಿಂದ ಫ್ರಾನ್ಸ್‌ ವಿರುದ್ಧ ಸೋತಿತ್ತು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಸೋತಿರುವ ಉಭಯ ತಂಡಗಳು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಗುಂಪು ಹಂತದ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ 1–4 ರಿಂದ ಸೋತಿರುವ ಭಾರತ ತಂಡವು ಉತ್ತಮ ಪ್ರದರ್ಶನ ತೋರಿ, ಮುಯ್ಯಿ ತೀರಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ.

‘ಸೆಮಿಫೈನಲ್‌ನಲ್ಲಿ ನಮಗೆ ಸಿಕ್ಕ ಸಾಕಷ್ಟು ಪೆನಾಲ್ಟಿ ಅವಕಾಶಗಳನ್ನು ಸದುಪಯೋಗ ಪಡಿಸುವಲ್ಲಿ ವಿಫಲವಾದೆವು. ಆದರೆ, ನಾವು ಟೂರ್ನಿಯಿಂದ ಇನ್ನೂ ಹೊರಬಿದ್ದಿಲ್ಲ. ಕಂಚಿನ ಪದಕದ ಪಂದ್ಯದಲ್ಲಿ ಸಾಮರ್ಥ್ಯ ಪ್ರದರ್ಶಿಸುತ್ತೇವೆ’ ಎಂದು ಉತ್ತಮ್‌ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪುರುಷರ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಗಳಲ್ಲಿ ಈತನಕ ಭಾರತ ಮತ್ತು ಸ್ಪೇನ್ ಎಂಟು ಬಾರಿ ಮುಖಾಮುಖಿಯಾಗಿದ್ದು, ಐದು ಪಂದ್ಯಗಳಲ್ಲಿ ಸ್ಪೇನ್ ಗೆದ್ದಿದೆ. 

2005ರ ಆವೃತ್ತಿಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮತ್ತು ಸ್ಪೇನ್‌ ತಂಡಗಳು 1–1 ಗೋಲುಗಳ ಸಮಬಲ ಸಾಧಿಸಿದ್ದವು. ನಂತರ ಪೆನಾಲ್ಟಿಯಲ್ಲಿ 5– 6ರಿಂದ ಸ್ಪೇನ್‌ ತಂಡ ಜಯ ಗಳಿಸಿದ್ದು, ಅದೇ ತಂಡದ ಈವರೆಗಿನ ಉತ್ತಮ ಸಾಧನೆಯಾಗಿದೆ. ಭಾರತ ತಂಡವು 2001, 2016ರಲ್ಲಿ ಚಾಂಪಿಯನ್‌ ಆಗಿದ್ದರೆ, 1997ರಲ್ಲಿ ರನ್ನರ್‌ ಅಪ್‌ ಆಗಿತ್ತು.

ಫೈನಲ್‌ ಇಂದು: ಭುವನೇಶ್ವರದಲ್ಲಿ (2021) ನಡೆದ ಕೊನೆಯ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಜರ್ಮನಿಯು ಅದೇ ಕೂಟದಲ್ಲಿ ಕಂಚಿನ ಪದಕ ವಿಜೇತ ಫ್ರಾನ್ಸ್‌ನೊಂದಿಗೆ ಚಾಂಪಿಯನ್‌ ಕಿರೀಟಕ್ಕಾಗಿ ಶನಿವಾರ ಸೆಣಸಲಿದೆ.

ಭಾರತ ಜೂನಿಯರ್ ಹಾಕಿ ತಂಡದ ಆಟಗಾರರ ಸಂಭ್ರಮ  –ಹಾಕಿಮಲೇಷ್ಯಾ ಟ್ವಿಟರ್ ಚಿತ್ರ
ಭಾರತ ಜೂನಿಯರ್ ಹಾಕಿ ತಂಡದ ಆಟಗಾರರ ಸಂಭ್ರಮ  –ಹಾಕಿಮಲೇಷ್ಯಾ ಟ್ವಿಟರ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT