ಚೆನ್ನೈ: ಏಷ್ಯನ್ ಕ್ರೀಡಾಕೂಟದಲ್ಲಿ ತಂಡದ ಸಿದ್ಧತೆಗೆ ಅಂತಿಮ ಸ್ಪರ್ಶ ನೀಡಲು ಮತ್ತು ಯಾವ ವಿಭಾಗದಲ್ಲಿ ಸುಧಾರಣೆಯಾಗಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳಲು ಭಾರತವು, ಗುರುವಾರ ಆರಂಭವಾಗುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯನ್ನು ಬಳಸಿಕೊಳ್ಳಲಿದೆ.
ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ತಂಡವು, ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ಚೀನಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ಈ ಟೂರ್ನಿಯಲ್ಲಿ ಮೂರು ಬಾರಿ ಚಾಂಪಿಯನ್ ಆಗಿದ್ದು, ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಭಾರತವು ಟೂರ್ನಿಯಲ್ಲಿ ಅತಿ ಹೆಚ್ಚಿನ ಕ್ರಮಾಂಕ ಪಡೆದ ತಂಡವಾಗಿದೆ.
2011ರಲ್ಲಿ ಟೂರ್ನಿ ಆರಂಭವಾದ ನಂತರ ಭಾರತ ಮೊದಲ ಬಾರಿ ಇದರ ಆತಿಥ್ಯ ವಹಿಸುತ್ತಿದೆ. ಆಟಗಾರರ ಸಾಮರ್ಥ್ಯ ಪರೀಕ್ಷೆಯ ಜೊತೆಗೆ ಏಷ್ಯ ಗೇಮ್ಸ್‌ನಲ್ಲಿ ಆಡಲಿರುವ ಎದುರಾಳಿಗಳ ಶಕ್ತಿ ತಿಳಿಯುವುದು ಭಾರತ ತಂಡದ ಉದ್ದೇಶಗಳಲ್ಲಿ ಒಂದಾಗಿದೆ.
ಏಷ್ಯನ್ ಕ್ರೀಡಾಕೂಟ ಸೆ. 23 ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹಾಂಗ್‌ಝೌನಲ್ಲಿ ನಡೆಯಲಿದೆ. ಹಾಂಗ್ ಝೌ ಕೂಟದಲ್ಲಿ ಗೆದ್ದ ಹಾಕಿ ತಂಡ ಮುಂದಿನ ವರ್ಷದ ಒಲಿಂಪಿಕ್ಸ್‌ಗೆ ನೇರ ಟಿಕೆಟ್ ಪಡೆಯಲಿದೆ. ಹೀಗಾಗಿ ತನ್ನ ಆಟಗಾರರಲ್ಲಿ ಲವಲವಿಕೆ ಉಳಿಸಿಕೊಳ್ಳುವುದರ ಜೊತೆಗೆ ಗಾಯಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ತಂಡಕ್ಕೆ ಇದೆ.
ಏಷ್ಯನ್ ಗೇಮ್ಸ್‌ಗೆ ಕೇವಲ ಐದು ತಿಂಗಳು ಇರುವಾಗ ಈ ಟೂರ್ನಿಯನ್ನು ಆಯೋಜಿಸಿರುವುದು ಕೆಲವು ತಂಡಗಳಿಗೆ ರುಚಿಸಿಲ್ಲ. ‘ಇಂಥದ್ದು ನಡೆಯುತ್ತಿರಬೇಕು. ನಮಗೆ ಹೆಚ್ಚಿನ ಪಂದ್ಯಗಳನ್ನು ಆಡಬೇಕಿದೆ. ಇದು ಭಾರತದಲ್ಲೇ ನಡೆಯುತ್ತಿರುವುದು ಇನ್ನೂ ಒಳ್ಳೆಯ ಅಂಶವಾಗಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಹೇಳಿದ್ದಾರೆ.
‘ತಂಡದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಬಯಸಿದ್ದೇವೆ. ಜೊತೆಗೇ ಹೆಚ್ಚುವರಿ ಆಟಗಾರರನ್ನು ಕಂಡುಕೊಳ್ಳಬೇಕಾಗಿದೆ. ಇದು ನಮಗೆ ಮಹತ್ವದ್ದು. ಆಟಗಾರರು ಗಾಯಾಳಾಗುವುದು ಯಾವುದೇ ತಂಡಕ್ಕೆ ಒಳ್ಳೆಯದಲ್ಲ’ ಎಂದಿದ್ದಾರೆ ಫುಲ್ಟನ್.
ಭಾರತ ಇತ್ತೀಚೆಗೆ ವಿಶ್ವ ಹಾಕಿಯಲ್ಲಿ ರ್‍ಯಾಂಕಿಂಗ್ ಮತ್ತು ಹೆಚ್ಚಿನ ಗೌರವ ಸಂಪಾದಿಸಿದೆ. ಆದರೆ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತರು, ಭುವನೇಶ್ವರದಲ್ಲಿ ನಡೆದ ಎಫ್‌ಐಎಚ್ ವಿಶ್ವಕಪ್‌ನಲ್ಲಿ ಉತ್ತಮ ಸಾಧನೆ ತೋರಿರಲಿಲ್ಲ. ತಂಡ 9ನೇ ಸ್ಥಾನ ಪಡೆದಿತ್ತು. ಆದರೆ ಇದರ ನಂತರ ಹರ್ಮನ್‌ಪ್ರೀತ್ ನೇತೃತ್ವದ ತಂಡ 16 ಪಂದ್ಯಗಳನ್ನು ಆಡಿದ್ದು, 9ರಲ್ಲಿ ಗೆದ್ದಿದ್ದು, ಐದರಲ್ಲಿ ಸೋತಿದೆ. ಎರಡು ಪಂದ್ಯ ಡ್ರಾ ಆಗಿದೆ ಎಂಬುದೂ ಗಮನಾರ್ಹ.
ಭಾರತ ಸುಧಾರಣೆ ಕಾಣಬೇಕಾದ ಒಂದು ಕ್ಷೇತ್ರ ಪೆನಾಲ್ಟಿ ಕಾರ್ನರ್‌ಗಳ ಪರಿವರ್ತನೆಯ ದರ. ಹರ್ಮನ್‌ಪ್ರೀತ್, ವರುಣ್ ಕುಮಾರ್, ಅಮಿತ್ ರೋಹಿದಾಸ್ ಮತ್ತು ಜುಗರಾಜ್ ಸಿಂಗ್ ಅವರಂಥ ಅನುಭವಿಗಳಿದ್ದರೂ, ‘ಪೆನಾಲ್ಟಿ ಕಾರ್ನರ್ ಪರಿವರ್ತನೆ ದರ’ ಚರ್ಚೆಯ ವಿಷಯವಾಗಿದೆ.
ಭಾರತ 2011, 2016 ಮತ್ತು 2018ರಲ್ಲಿ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. 2018ರಲ್ಲಿ ಭಾರತ, ಪಾಕಿಸ್ತಾನದ ಜೊತೆ (ಮಳೆಯಿಂದ ಪಂದ್ಯ ನಡೆಯದ ಕಾರಣ) ಪ್ರಶಸ್ತಿ ಹಂಚಿಕೊಂಡಿತ್ತು. ಭಾರತ 2012 ಬೆಳ್ಳಿಯ ಪದಕ ಗೆದ್ದರೆ, 2021ರಲ್ಲಿ ಕಂಚಿನ ಪದಕ ಜಯಿಸಿತ್ತು.
ವಿಶ್ವಕಪ್ ತಪ್ಪಿಸಿಕೊಂಡಿದ್ದ ಚೀನಾ, ಈ ವರ್ಷ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಆಡುತ್ತಿದೆ.
ಮೊದಲ ದಿನ ನಡೆಯುವ ಇತರ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾವು ಜಪಾನ್ ವಿರುದ್ಧ; ಪಾಕಿಸ್ತಾನವು, ಮಲೇಷ್ಯಾ ವಿರುದ್ಧ ಆಡಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.