ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ: ಬೆಲ್ಜಿಯಮ್‌ಗೆ ಮಣಿದ ಭಾರತ

Published 24 ಮೇ 2024, 13:14 IST
Last Updated 24 ಮೇ 2024, 13:14 IST
ಅಕ್ಷರ ಗಾತ್ರ

ಆ್ಯಂಟ್‌ವರ್ಪ್‌ (ಬೆಲ್ಜಿಯಂ): ರಕ್ಷಣಾ ವಿಭಾಗದಲ್ಲಿ ಆದ ಲೋಪಗಳಿಂದ ಭಾರತ ತಂಡ, ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಗುರುವಾರ ಆತಿಥೇಯ ಹಾಗೂ ವಿಶ್ವದ ಮೂರನೇ ಕ್ರಮಾಂಕದ ಬೆಲ್ಜಿಯಂ ತಂಡದ ಎದುರು 1–4 ಗೋಲುಗಳಿಂದ ಸೋಲು ಅನುಭವಿಸಿತು.

ಹರ್ಮನ್‌ಪ್ರೀತ್‌ ಬಳಗ ಬುಧವಾರ ನಡೆದ ಪ್ರವಾಸದ ಮೊದಲ ಪಂದ್ಯದಲ್ಲಿ ಶೂಟೌಟ್‌ ಬಳಿಕ 5–4 ಗೋಲುಗಳಿಂದ ಆರ್ಜೆಂಟೀನಾ ತಂಡವನ್ನು ಸೋಲಿಸಿತ್ತು. ಭಾರತ ತನ್ನ ಮುಂದಿನ ಪಂದ್ಯವನ್ನು ಮೇ 25ರಂದು ಮತ್ತೆ ಬೆಲ್ಜಿಯಂ ವಿರುದ್ಧ ಆಡಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲ ಕ್ವಾರ್ಟರ್‌ ಗೋಲುರಹಿತವಾಗಿತ್ತು. 22ನೇ ನಿಮಿಷ ಬೆಲ್ಜಿಯಂ ತಂಡವು ನಾಯಕ ಫೆಲಿಕ್ಸ್ ಡೆನಯರ್‌ ಗಳಿಸಿದ ಫೀಲ್ಡ್‌ ಗೋಲಿನ ಮೂಲಕ ಮುನ್ನಡೆ ಸಾಧಿಸಿತು. ಫ್ಲೊರೆಂಟ್ ವಾನ್ ಅಬೆನ್ ಅವರ ಮೊದಲ ಯತ್ನವನ್ನು ಗೋಲ್‌ಕೀಪರ್ ಪಿ.ಆರ್‌.ಶ್ರೀಜೇಶ್ ತಡೆದರೂ ಮರಳಿ ಬಂದ ಚೆಂಡನ್ನು ಫೆಲಿಕ್ಸ್‌ ಗೋಲಿನೊಳಗೆ ತಳ್ಳಿದರು.

ವಿರಾಮದ ನಾಲ್ಕು ನಿಮಿಷಗಳ ಬಳಿಕ ಅಲೆಕ್ಸಾಂಡರ್‌ ಹೆಂಡ್ರಿಕ್ಸ್‌ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಆತಿಥೇಯ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.

ವೇಗದ ಪಾಸಿಂಗ್ ಮತ್ತು ಕೌಶಲದ ಆಟದಿಂದ ಬೆಲ್ಜಿಯಂ, ಭಾರತ ತಂಡದ ರಕ್ಷಣಾ ವಿಭಾಗವನ್ನು ಗಲಿಬಿಲಿಗೊಳಿಸಿತು. ಸೆಡ್ರಿಕ್‌ ಚಾರ್ಲಿಯರ್‌ ಅಮೋಘ ರೀತಿ ಫೀಲ್ಡ್‌ ಗೋಲು ಗಳಿಸಿ ತಂಡದ ಮುನ್ನಡೆಯನ್ನು 3–0ಗೆ ವಿಸ್ತರಿಸಿದರು.

ಯುವ ಆಟಗಾರ ಅಭಿಷೇಕ್‌ ಭಾರತ ಪರ ಒಂದು ಗೋಲು ಗಳಿಸಿ ಹಿನ್ನಡೆಯನ್ನು ಕಡಿಮೆ ಮಾಡಿದರು. ಆದರೆ ಒಟ್ಟಾರೆಯಾಗಿ ಆತಿಥೇಯರ ಪ್ರಾಬಲ್ಯಕ್ಕೆ ಅಡ್ಡಿಯಾಗಲಿಲ್ಲ. ಅಂತಿಮ ನಿಮಿಷದಲ್ಲಿ ಹೆಂಡ್ರಿಕ್ಸ್‌ ‘ಪೆನಾಲ್ಟಿ ಸ್ಟ್ರೋಕ್‌’ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ಆರಂಭದಿಂದಲೇ ಭಾರತದ ರಕ್ಷಣಾ ವಿಭಾಗ ಎದುರಾಳಿ ಫಾರ್ವರ್ಡ್‌ಗಳಿಗೆ ವ್ಯೂಹ ರಚಿಸಲು ಭಾರತ ವಿಫಲವಾಯಿತು. ಹಲವು ಬಾರಿ ಬೆಲ್ಜಿಯಂ ಆಟಗಾರರು ರಕ್ಷಣಾ ಗೋಡೆ ಭೇದಿಸಿದರು. ಅನುಭವಿ ಗೋಲ್‌ಕೀಪರ್‌ ಪಿ.ಆರ್.ಶ್ರೀಜೇಶ್‌ ಕೆಲವು ತಡೆಗಳನ್ನು ಮಾಡಲಷ್ಟೇ ಶಕ್ತರಾದರು.

ಭಾರತಕ್ಕೂ ಅವಕಾಶಗಳು ದೊರಕಿದ್ದವು. 18ನೇ ನಿಮಿಷ ಹರ್ಮನ್‌ಪ್ರೀತ್ ಅವರು ಗೋಲಿನತ್ತ ಮಾಡಿದ ಫ್ಲಿಕ್‌ ಯತ್ನವನ್ನು ಬೆಲ್ಜಿಯಂ ಗೋಲ್‌ ಕೀಪರ್ ಲೊಯಿಕ್ ವಾನ್ ಡೊರೆನ್ ತಡೆದರು. ಎರಡು ನಿಮಿಷಗಳ ನಂತರ ಬೆನ್ನುಬೆನ್ನಿಗೆ ಪೆನಾಲ್ಟಿ ಕಾರ್ನರ್‌ ಅವಕಾಶಗಳು ಬಂದರೂ ಹರ್ಮನ್‌ಪ್ರೀತ್ ಅವುಗಳನ್ನು ಪರಿವರ್ತಿಸಲು ಸಾಧ್ಯವಾಗಲಿಲ್ಲ. ಹರ್ಮನ್‌ಪ್ರೀತ್ ಎಂದಿನ ಲಯದಲ್ಲಿರಲಿಲ್ಲ.

ಹರ್ಮನ್‌ಪ್ರೀತ್‌ ಅವರಿಗೆ ನಿರಾಶೆಯಾಗಿದ್ದು ಮಾತುಗಳಲ್ಲಿ ಧ್ವನಿಸಿತು. ‘ನಾವು ಕೆಲವು ಒಳ್ಳೆಯ ಗೋಲು ಯತ್ನಗಳನ್ನು ಮಾಡಿದೆವು. ಆದರೆ ಫಿನಿಷಿಂಗ್ ಇರಲಿಲ್ಲ. ರಕ್ಷಣೆಯಲ್ಲಿ ನಾವು ಸುಧಾರಿಸಬೇಕಾಗಿದೆ. ಶನಿವಾರ ಮತ್ತೆ ಇದೇ ಎದುರಾಳಿಗಳ ವಿರುದ್ಧ ಆಡಲು ತವಕದಿಂದ ಇದ್ದೇವೆ’ ಎಂದು ಅವರು ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT