ಸಿಂಗಪುರ: ಭಾರತದ ಗ್ರ್ಯಾಂಡ್ಮಾಸ್ಟರ್ ಗುಕೇಶ್ ದೊಮ್ಮರಾಜು ವಿಶ್ವ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು. 18 ವರ್ಷ ವಯಸ್ಸಿನ ಗುಕೇಶ್, ಗುರುವಾರ ನಾಟಕೀಯವಾಗಿ ನಡೆದ ಚಾಂಪಿಯನ್ಷಿಪ್ ಫೈನಲ್ನ 14ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ತಮ್ಮ ಕನಸನ್ನು ಸಾಕಾರಗೊಳಿಸಿದರು.

ಅಂತಿಮ ಪಂದ್ಯದವರೆಗೆ ಬೆಳೆದ ಫೈನಲ್ ಅನ್ನು ಗುಕೇಶ್ 7.5–6.5 ರಿಂದ ಗೆದ್ದು ಸಂಭ್ರಮಿಸಿದರು. ಹಾಗೆ ನೋಡಿದರೆ, ಚಾಂಪಿಯನ್ಷಿಪ್ಗೆ ಮೊದಲೇ ಗುಕೇಶ್ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಆದರೆ, 32 ವರ್ಷ ವಯಸ್ಸಿನ ಲಿರೆನ್ ಕೊನೆಯವರೆಗೂ ಹೋರಾಟ ನೀಡಿದರು. ₹21 ಕೋಟಿ ಬಹುಮಾನ ಮೊತ್ತದಲ್ಲಿ ಬಹುಪಾಲನ್ನು ಗುಕೇಶ್ ಪಡೆಯಲಿದ್ದಾರೆ.

ಈ ಹಿಂದಿನ ಚಾಂಪಿಯನ್ ಆಗಿದ್ದ ಲಿರೆನ್ 59ನೇ ನಡೆಯಲ್ಲಿ ಸೋಲೊಪ್ಪಿಕೊಂಡರು; ತಕ್ಷಣ ಗುಕೇಶ್ ಭಾವೋದ್ವೇಗಕ್ಕೆ ಒಳಗಾದರು. ಎರಡೂ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಸಾವರಿಸಿಕೊಳ್ಳಲು ಕೆಲಕ್ಷಣಗಳನ್ನು ತೆಗೆದುಕೊಂಡರು. ‘ನಾನು ಗೆಲುವನ್ನು ನಿರೀಕ್ಷಿಸಿರಲಿಲ್ಲ. ಆದರೆ ಕೊನೆಯಲ್ಲಿ ಅಚಾನಕ್ ಆಗಿ ಆ ಅವಕಾಶ ದೊರೆತು ಜಯ ಸಾಧ್ಯವಾಗಿದ್ದರಿಂದ ಒಂದು ಕ್ಷಣ ಭಾವೋದ್ವೇಗಕ್ಕೆ ಒಳಗಾಗಿದ್ದೆ’ ಎಂದು ನಂತರ ಪ್ರತಿಕ್ರಿಯಿಸಿದರು.

ತಮ್ಮ ಆಸನದಿಂದ ಎದ್ದ ಗುಕೇಶ್ ಎರಡೂ ಕೈಗಳನ್ನು ಮೇಲೆತ್ತಿ ಗೆಲುವನ್ನು ಸಂಭ್ರಮಿಸಿದರು. ‘ವಿಶ್ವ ಚಾಂಪಿಯನ್ ಆಗುವ ಕನಸನ್ನು ಹತ್ತು ವರ್ಷಗಳಿಂದ ಕಾಣುತ್ತಿದ್ದೆ. ಅದು ಸಾಕಾರಗೊಂಡಿದ್ದರಿಂದ ಸಂತಸವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂದಸ್ಮಿತರಾಗಿದ್ದ ಗುಕೇಶ್ ಪ್ರತಿಕ್ರಿಯಿಸಿದರು.

ಚೆಸ್ ಲೋಕದ ದಿಗ್ಗಜರಲ್ಲಿ ಒಬ್ಬರಾದ ರಷ್ಯಾದ ಗ್ಯಾರಿ ಕ್ಯಾಸ್ಪರೋವ್ ಅವರು 1985ರ ಫೈನಲ್ನಲ್ಲಿ ಸ್ವದೇಶದ ಅನತೋಲಿ ಕಾರ್ಪೋವ್ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದಾಗ ಅವರ ವಯಸ್ಸು 22 ವರ್ಷ. 39 ವರ್ಷಗಳ ಬಳಿಕ ಗುಕೇಶ್ ಆ ದಾಖಲೆಯನ್ನು ಮುರಿದರು.

ಈ ವರ್ಷದ ಏಪ್ರಿಲ್ನಲ್ಲಿ ಟೊರಾಂಟೊದಲ್ಲಿ (ಕೆನಡಾ) ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದಾಗ ಚೆನ್ನೈನ ಈ ಆಟಗಾರ ವಿಶ್ವ ಚಾಂಪಿಯನ್ ಪಟ್ಟಕ್ಕೆ ಅತಿ ಕಿರಿಯ ಚಾಲೆಂಜರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

ವಿಶ್ವ ಚಾಂಪಿಯನ್ ಕಿರೀಟ ಧರಿಸಿದ ಭಾರತದ ಎರಡನೇ ಆಟಗಾರ ಎಂಬ ಶ್ರೇಯವೂ ಅವರದಾಯಿತು. ಭಾರತದಲ್ಲಿ ಚೆಸ್ ಕ್ರಾಂತಿಗೆ ಮುನ್ನುಡಿ ಬರೆದಿದ್ದ ವಿಶ್ವನಾಥನ್ ಆನಂದ್ 2000 ದಿಂದ 2013ರ ಅವಧಿಯಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.

ನಾಟಕೀಯ ತಿರುವು:

ಗುರುವಾರದ ಪಂದ್ಯವೂ ಡ್ರಾ ಆಗಿದ್ದಲ್ಲಿ ಶುಕ್ರವಾರ ಅಲ್ಪಾವಧಿ ಪಂದ್ಯಗಳ ಟೈಬ್ರೇಕರ್ ಆಡಬೇಕಾಗುತಿತ್ತು. ಗುಕೇಶ್ ಕಪ್ಪು ಕಾಯಿಗಳಲ್ಲಿ ಆಡಿದ್ದು, ಹದಿನಾಲ್ಕನೇ ಪಂದ್ಯವೂ ಬಹುತೇಕ ಡ್ರಾ ಹಾದಿ ಹಿಡಿದಿತ್ತು. ಆದರೆ 55ನೇ ನಡೆಯಲ್ಲಿ ಚೀನಾದ ಆಟಗಾರ ರೂಕ್ (ಆನೆ) ಎಫ್2 ನಡೆ ಇರಿಸಿದ್ದು ಗುಕೇಶ್ಗೆ ಅವಕಾಶದ ಬಾಗಿಲನ್ನು ದೊರೆಯಿತು. ಇದನ್ನೇ ಬಂಡವಾಳ ಮಾಡಿಕೊಂಡು ರೂಕ್ ಎಕ್ಸ್ಚೇಂಜ್ ಮಾಡಿಕೊಂಡ ಗುಕೇಶ್, ಹೆಚ್ಚುವರಿ ಪಾನ್ (ಕಾಲಾಳು) ಸಹಾಯದಿಂದ ಗೆಲುವಿನ ಸ್ಥಿತಿಗೆ ಮುನ್ನಡೆದರು.

ಒಟ್ಟು 14 ಪಂದ್ಯಗಳಲ್ಲಿ ಗುಕೇಶ್ ಮೂರು ಪಂದ್ಯಗಳನ್ನು (3, 11, 14ನೇ) ಗೆದ್ದರೆ, ಲಿರೆನ್ ಎರಡು ಪಂದ್ಯಗಳನ್ನು (1, 12) ಗೆದ್ದಿದ್ದರು. ಉಳಿದ 9 ಪಂದ್ಯಗಳು ‘ಡ್ರಾ’ ಆಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.