ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಜಂಪಿಂಗ್ ಕೂಟ: ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದ ಶ್ರೀಶಂಕರ್

ಒಲಿಂಪಿಕ್ಸ್‌ ನಂತರ ಮೊದಲ ಹೊರಾಂಗಣ ಕೂಟ: ರಾಷ್ಟ್ರೀಯ ದಾಖಲೆ ವೀರನಿಗೆ ಒಲಿದ ಪದಕ
Last Updated 26 ಮೇ 2022, 16:23 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಂತರ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತ ಬಂದಿರುವ ಮುರಳಿ ಶ್ರೀಶಂಕರ್ ಗ್ರೀಸ್‌ನಲ್ಲಿ ಚಿನ್ನದ ಸಂಭ್ರಮದ ಅಲೆ ಎಬ್ಬಿಸಿದರು. ಕಲಿಥಿಯಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಜಂಪಿಂಗ್ ಕೂಟದ ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದ ಅವರು ಕೇರಳದ ಪಾಲಕ್ಕಾಡ್‌ನ ಕುವರ.

ಕಳೆದ ತಿಂಗಳಲ್ಲಿ ಕೇರಳದ ತೇಞಿಪ್ಪಾಲಂನಲ್ಲಿ ನಡೆದ ಕೂಟದಲ್ಲಿ8.36 ಮೀಟರ್ಸ್ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಬರೆದಿದ್ದ ಅವರು ಭಾರತದ ಜಂಪಿಂಗ್ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದರು. ಕಲಿಥಿಯಾದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮುರಿಯಲು ಸಾಧ್ಯವಾಗದೇ ಇದ್ದರೂ ಸ್ವೀಡನ್, ಫ್ರಾನ್ಸ್ ಮುಂತಾದ ದೇಶಗಳ ಪ್ರಮುಖರಿಗಿಂತ ಹೆಚ್ಚಿನ ಸಾಧನೆ ಮಾಡಲು ಅವರಿಗೆ ಸಾಧ್ಯವಾಗಿದೆ.

ಮೊದಲ ಎರಡು ಪ್ರಯತ್ನಗಳಲ್ಲಿ ಕ್ರಮವಾಗಿ 7.88 ಮೀಟರ್ಸ್ ಮತ್ತು 7.71 ಮೀಟರ್ಸ್ ದೂರು ಜಿಗಿದ ಅವರು ಮೂರನೇ ಪ್ರಯತ್ನದಲ್ಲಿ 8.31 ಮೀಟರ್ಸ್ ಸಾಧನೆ ಮಾಡಿದರು. ಹೀಗಾಗಿ ಸ್ವೀಡನ್‌ನ ತೊಬಿಯಾಸ್ ಮಾಂಟ್ಲರ್‌ ಮತ್ತು ಫ್ರಾನ್ಸ್‌ನ ಜೂಲ್ಸ್ ಪೊಮೆರಿಗೆ ನಿರಾಸೆ ಕಾದಿತ್ತು.

10 ಮಂದಿ ಸ್ಪರ್ಧಿಗಳಿದ್ದ ‘ಫೀಲ್ಡ್‌’ನಲ್ಲಿ ಶ್ರೀಶಂಕರ್‌, ತೊಬಿಯಾಸ್ ಮತ್ತು ಜೂಲ್ಸ್ ಮಾತ್ರ 8 ಮೀಟರ್ಸ್‌ಗಿಂತ ದೂರ ಜಿಗಿದರು.

ಒಲಿಂಪಿಕ್ಸ್ ನಂತರ ಅವರು ಪಾಲ್ಗೊಂಡಿರುವ ಮೊದಲ ಅಂತರರಾಷ್ಟ್ರೀಯ ಕೂಟ ಇದಾಗಿದೆ. ಈಚೆಗೆ ಪಾಲ್ಗೊಂಡ ರಾಷ್ಟ್ರೀಯ ಕೂಟಗಳಲ್ಲಿ ಅವರು ಸತತವಾಗಿ 8 ಮೀಟರ್‌ಗೂ ಹೆಚ್ಚಿನ ಸಾಧನೆ ಮಾಡಿದ್ದಾರೆ. ತಿರುವನಂತಪುರದಲ್ಲಿ ನಡೆದ ವರ್ಷದ ಮೊದಲ ಎರಡು ಗ್ರ್ಯಾನ್‌ಪ್ರಿಗಳಲ್ಲಿ ಕ್ರಮವಾಗಿ 8.14 ಮೀ ಮತ್ತು 8.17 ಮೀ ಸಾಧನೆ ಮಾಡಿದ್ದರು. ನಂತರ ಕೋಯಿಕ್ಕೋಡ್‌ನಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದರು.

ಜೆಸ್ವಿನ್ ಆಲ್ಡ್ರಿನ್‌ಗೆ 5ನೇ ಸ್ಥಾನ
ಕೋಯಿಕ್ಕೋಡ್‌ನಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್‌ಪ್ರಿಯಲ್ಲಿ ಮುರಳಿ ಶ್ರೀಶಂಕರ್‌ಗೆ ಪ್ರಬಲ ಪೈಪೋಟಿ ನೀಡಿದ್ದ ತಮಿಳುನಾಡಿನ ಜೆಸ್ವಿನ್ ಆಲ್ಡ್ರಿನ್ ಅವರು ಸ್ಪೇನ್‌ನಲ್ಲಿ ನಡೆದ ಇಬೆರೊಅಮೆರಿಕನ್ ಕೂಟದಲ್ಲಿ ಐದನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಅವರು 7.69 ಮೀ ದೂರ ಜಿಗಿದರು. ಕ್ರೊವೇಷ್ಯಾದ ಫಿಲಿಪ್ ಪ್ರಾವ್ಡಿವಾ (7.91 ಮೀ), ಉರುಗ್ವೆಯ ಎಮಿಲಿಯಾನೊ ಲಾಸ (7.82 ಮೀ) ಮತ್ತು ಪೆರುವಿನ ಜೋಸ್ ಲೂಯಿಸ್ ಮಂಡ್ರೋಜ್‌ (7.77 ಮೀ) ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT