ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸದ ಕಡಲು...

Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬಿ.ಕಾಂ ಪದವೀಧರ ಉದ್ಯೋಗದ ಕನಸು ಹೊತ್ತು ಸಂದರ್ಶನಕ್ಕೆ ಹಾಜರಾದರು. ಸಂದರ್ಶಕರು ಇವರನ್ನು ನೋಡಿ, ‘ನಿಮಗೆ ಎರಡೂ ಕೈಗಳಿಲ್ಲ. ಹೇಗೆ ಕೆಲಸ ಮಾಡುತ್ತೀರಿ’ ಎಂದು ಪ್ರಶ್ನಿಸಿದರು. ದುಃಖದಿಂದಲೇ ಹೊರಬಂದ ಆ ಯುವಕ ಖಿನ್ನತೆಗೆ ಜಾರಿದರು. ತಮಗೆ ಎರಡೂ ಕೈಗಳಿಲ್ಲ ಎನ್ನುವುದನ್ನು ಮೊದಲು ತಾವೇ ಒಪ್ಪಿಕೊಳ್ಳಬೇಕು ಎಂದು ನಿರ್ಧರಿಸಿದರು. ಆಮೇಲೆ ನಡೆದಿದ್ದೆಲ್ಲಾ ಪವಾಡ!

ಹೌದು, ಇದು ಅಂತರರಾಷ್ಟ್ರೀಯ ಪ್ಯಾರಾ ಈಜುಪಟು ವಿಶ್ವಾಸ್‌ ಕೆ.ಎಸ್‌. ಅವರ ಬದುಕಿನ ಪ್ರೇರಣಾದಾಯಕ ಕಥನ.

ಉದ್ಯೋಗವೂ ಇಲ್ಲ, ಬದುಕಿನಲ್ಲಿ ವಿಶ್ವಾಸವೂ ಇಲ್ಲದ ಸಮಯದಲ್ಲಿ ಇವರು ಅಚಾನಾಕ್‌ ಆಗಿ ಆಯ್ದುಕೊಂಡಿದ್ದು ಈಜು! ‘ಈಸಬೇಕು ಇದ್ದು ಜಯಿಸಬೇಕು’ ಅಂತಾರಲ್ಲ ಹಾಗೆಯೇ. ಈಜುಕೊಳಕ್ಕೆ ಒಮ್ಮೆ ಧುಮುಕಿದ ಮೇಲೆ ತಮಗೆ ಎರಡೂ ಕೈಗಳಿಲ್ಲ ಎನ್ನುವ ಸಂಗತಿಯನ್ನೇ ಮರೆತುಬಿಟ್ಟರು. ‘ಎರಡೂ ಕೈಯಿಲ್ಲದ ವ್ಯಕ್ತಿಗೆ ಹೇಗಪ್ಪಾ ಈಜು ಕಲಿಸುವುದು’ ಎನ್ನುವ ಪ್ರಶ್ನೆ ಮೊದಲು ತರಬೇತುದಾರರಿಗೂ ಬಂದಿತ್ತು. ಇವರಿಗೂ ಈಜು ಬರುತ್ತಿರಲಿಲ್ಲ. ವಿಜಯನಗರ ಅಕ್ವಾಟಿಕ್‌ ಸೆಂಟರ್‌ನಲ್ಲಿ ಎಸ್‌.ಆರ್. ಸಿಂಧ್ಯಾ ಅವರು ಏಳೆಂಟು ತಿಂಗಳು ನಿರಂತರ ತರಬೇತಿ ನೀಡಿದರು. ಇವರೊಳಗಿನ ಆಸಕ್ತಿ, ಛಲ ಕಂಡು ಬೆಂಬಲಕ್ಕೆ ನಿಂತರು. ಮೀನಿನಂತೆ ಈಜುವುದು ಕಲಿತು, ಪದಕಗಳನ್ನು ಕೊರಳಿಗೇರಿಸಿಕೊಂಡರು.

‘ಮನೆಯಲ್ಲಿ ಟಿ.ವಿ, ಫ್ರಿಡ್ಜು, ವಾಷಿಂಗ್‌ ಮಷಿನ್‌ ಇರ್ತಾವಲ್ಲಾ...ನಾನೂ ಅದೇ ರೀತಿ ಒಂದು ವಸ್ತುವಿನಂತೆ ಆಗಿಹೋಗಿದ್ದೆ. ಕುಳಿತು, ಮಲಗಿ ದಿನ ಕಳೆಯುತ್ತಿದ್ದೆ. ಅಪ್ಪ–ಅಮ್ಮ ಇದ್ದಾಗ ಜೀವನ ಹೇಗೋ ನಡೆಯುತ್ತಿತ್ತು. ಅವರನ್ನು ಕಳೆದುಕೊಂಡು ಒಬ್ಬಂಟಿಯಾದೆ. ಜೀವನದಲ್ಲಿ ಹೊಡೆತಗಳು ಮೇಲಿಂದ ಮೇಲೆ ಬಿದ್ದವು. ಅವುಗಳಿಂದ ಹೊರಬರಲು ಈಜುತ್ತಾ ಸಾಗಿದವನು ಇದೀಗ ಸಪ್ತ ಸಾಗರ ದಾಟಿದ್ದೇನೆ...’ ಎಂದು ವಿಶ್ವಾಸ್‌ ನಕ್ಕರು.

ವಿಶ್ವಾಸ್‌, ಅಂತರರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಒಂಬತ್ತು ಪದಕಗಳನ್ನು ಗೆದ್ದಿದ್ದಾರೆ. ಮಾರ್ಷಲ್‌ ಆರ್ಟ್ಸ್‌ನಲ್ಲಿ ರೆಡ್‌ಬೆಲ್ಟ್‌ ಪಡೆದಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಗೆಸ್ಟ್‌ ಪರ್ಫಾಮೆನ್ಸ್‌ ನೀಡಿದ್ದಾರೆ.  ‘ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌’ನ ಕಳೆದ ಆವೃತ್ತಿಯಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಕಾಲಲ್ಲೇ ಅಡುಗೆ ಮಾಡುತ್ತಾರೆ, ಬರೆಯತ್ತಾರೆ, ಮೊಬೈಲ್‌ ಫೋನ್‌ ಆಪರೇಟ್‌ ಮಾಡುತ್ತಾರೆ, ಬಟ್ಟೆ ಕೂಡ ಒಗೆಯುತ್ತಾರೆ. ಅಲ್ಲದೇ ಜನಪ್ರಿಯ ‘ಟೆಡ್‌ ಟಾಕ್‌’ನಲ್ಲೂ ಸ್ಪೂರ್ತಿದಾಯಕ ಮಾತುಗಳಿಂದ ಮಿಂಚಿದ್ದಾರೆ. 

ವಿಶ್ವಾಸ್‌, ಕೋಲಾರ ಜಿಲ್ಲೆಯ ಕಾಳಹಸ್ತಿಪುರದವರು. ಇವರು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ಮನೆ ಕಟ್ಟಿಸುತ್ತಿದ್ದರು. ಕ್ಯೂರಿಂಗ್‌ಗಾಗಿ ನೀರು ಹಾಕಲು ಮನೆಯ ಮೇಲೆ ಹತ್ತಿದ್ದರು. ಆಯತಪ್ಪಿ ಕೆಳಗೆ ಬೀಳುವಾಗ ವಿದ್ಯುತ್‌ ತಂತಿಗಳನ್ನು ಕೈಗಳಿಂದ ಹಿಡಿದುಕೊಂಡರು. ಇದನ್ನು ಗಮನಿಸಿದ ತಂದೆ ಮರದ ತುಂಡಿನಿಂದ ಬಿಡಿಸಲು ಯತ್ನಿಸಿದರು. ಆಗ ಅವರೂ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಪ್ರಜ್ಜೆ ತಪ್ಪಿಬಿದ್ದಿದ್ದ ವಿಶ್ವಾಸ್‌ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ಕೊಡಿಸಲಾಯಿತು. ಆನಂತರ ಕಣ್ತೆರೆದರು. ಆಗ ಅವರಿಗೆ ತಿಳಿದದ್ದು ತಮ್ಮ ಎರಡೂ ಕೈಗಳು ಇಲ್ಲ ಎನ್ನುವ ಕಟುಸತ್ಯ.

‘ಆರಂಭದಲ್ಲಿ ತಾಯಿ ನನಗೆ ಪ್ಲಾಸ್ಟಿಕ್‌ ಕೈಗಳನ್ನು ಹಾಕಿಸಿದ್ದರು. ಅವು ಸಂಪೂರ್ಣ ನಿಷ್ಪ್ರಯೋಜಕವಾಗಿದ್ದವು. ಪೇಪರ್‌ ತುಂಡನ್ನೂ ಕೂಡ ಎತ್ತಲು ಆಗುತ್ತಿರಲಿಲ್ಲ. ಬೊಂಬೆಗೆ ಕೈಗಳನ್ನು ಜೋಡಿಸಿದಂತೆ ಇತ್ತು. ಅವುಗಳನ್ನು ತೆಗೆದಿಟ್ಟು, ಮೈಗೆ ಶಾಲು ಅಥವಾ ಟವಲ್‌ ಹೊದ್ದು ಓಡಾಡುತ್ತಿದ್ದೆ. ನೋಡುವವರ ಕಣ್ಣಿಗೆ ಜ್ವರವಿರಬೇಕು ಎಂಬ ಭಾವನೆ ಮೂಡಿಸುವ ಉದ್ದೇಶ ಅದರ ಹಿಂದೆ ಇತ್ತು. ಆಗ ಕೈಗಳಿಲ್ಲ ಎನ್ನುವ ಅಳುಕು ಇತ್ತು’ ಎಂದು ವಿಶ್ವಾಸ್‌ ಹಳೆಯದನ್ನು ನೆನಪಿಸಿಕೊಂಡರು.

ಹೊಸ ಹುರುಪು; ಹೊಸ ಗುರಿ

2020ರಲ್ಲಿ ಏಷ್ಯನ್‌ ಗೇಮ್ಸ್‌ ಇತ್ತು. ಅದಕ್ಕೆ ತಯಾರಿ ನಡೆಸುತ್ತಿದ್ದಾಗ ಕೋವಿಡ್‌ನಿಂದ ಲಾಕ್‌ಡೌನ್‌ ಹೇರಲಾಯಿತು. ಮೊದಲು ಈಜುಕೊಳಗಳು, ಜಿಮ್‌ಗಳನ್ನು ಮುಚ್ಚಲಾಯಿತು. ಇದು ಇವರ ತರಬೇತಿ ಹಾಗೂ ತಯಾರಿ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಮನೆಯಲ್ಲೇ ಇದ್ದು ದೇಹದ ಫಿಟ್‌ನೆಸ್‌ ಕೆಟ್ಟಿತು, ಆಹಾರ ಪದ್ಧತಿಯೂ ಬದಲಾಯಿತು. ತೂಕ ಹೆಚ್ಚಾಯಿತು. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಲಕ್ಷ್ಮಿ. ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಪ್ರೀತಿಸಿ ಮದುವೆಯಾದರು. ಈಗ ಎರಡೂವರೆ ವರ್ಷದ ಮಗಳು ಇದ್ದಾಳೆ.

‘ಆರೇಳು ತಿಂಗಳಿಂದ ಬಸವನಗುಡಿ ಸ್ವಿಮ್ಮಿಂಗ್‌ ಸ್ಕೂಲ್‌ನಲ್ಲಿ ತರಬೇತಿ ಆರಂಭಿಸಿದ್ದೇನೆ. ಮೇ ತಿಂಗಳಲ್ಲಿ ಜರ್ಮನಿಯಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಯಿದೆ. ಬಳಿಕ ಒಲಿಂಪಿಕ್ಸ್‌ ಇದೆ. ಹೀಗೆ ಹಲವು ಅಂತರರಾಷ್ಟ್ರೀಯ ಸ್ಪರ್ಧೆಗಳಿವೆ. ಅವುಗಳಲ್ಲಿ ಭಾಗವಹಿಸುವುದು ಅಷ್ಟು ಸುಲಭವಲ್ಲ. ಬಹಳಷ್ಟು ಶ್ರಮಪಡಬೇಕು. ಕನಿಷ್ಠ ಎರಡು ವರ್ಷ ತರಬೇತಿ ಬೇಕು. ಮುಂದಿನ ಮಾರ್ಚ್‌–ಏಪ್ರಿಲ್‌ನಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗೆ ಹೋಗಬೇಕು ಎಂದಿದ್ದೇನೆ’ ಎಂದರು ವಿಶ್ವಾಸ್‌.

ವಿಶ್ವಾಸ ತುಂಬಲು ಸಿನಿಮಾ

ವಿಶ್ವಾಸ್‌ ಜೀವನಗಾಥೆ ‘ಅರಬ್ಬೀ’ ಹೆಸರಿನಲ್ಲಿ ಸಿನಿಮಾವಾಗಿದೆ. ಇವರ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಸಿನಿಮಾಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಭಾವನಾತ್ಮಕವಾಗಿ ಅಂಗವಿಕರಲನ್ನು ತೋರಿಸುತ್ತಾರೆ. ಕೈಹಿಡಿದು ರಸ್ತೆ ದಾಟಿಸುವ ರೀತಿ ಅಥವಾ ನಾಯಕಿಯ ಗಮನಸೆಳೆಯಲು ನಾಯಕನೊಬ್ಬ ಅಂಗವಿಕಲರಿಗೆ ಸಹಾಯ ಮಾಡುವ ರೀತಿಯ ದೃಶ್ಯಗಳು ಅವು ಆಗಿರುತ್ತವೆ. ಬದಲಾಗಿ ಅನುಕಂಪ ಬೇಡ–ಅವಕಾಶ ಕೊಡಿ ಎನ್ನುವ ಸಂದೇಶ ಚಿತ್ರದಲ್ಲಿದೆ. ‘ಅವಕಾಶ ಕೊಟ್ಟರಷ್ಟೇ ಸಾಧಿಸಿ ತೋರಿಸಲು ಸಾಧ್ಯ. ನನ್ನ ಜೀವನದ ಏರಿಳಿತಗಳು, ಸಮಾಜ ನನ್ನನ್ನು ಹೇಗೆ ನೋಡಿತು, ನಮ್ಮಂತಹ ಅಂಗವಿಕಲರ ಜೊತೆ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಹೇಳಲಾಗಿದೆ. ಇಷ್ಟೆಲ್ಲ ಅಡೆತಡೆಗಳಿದ್ದರೂ ಯಾವ ರೀತಿ ಸಾಧನೆ ಮಾಡಬಹುದು ಎನ್ನುವುದು ಚಿತ್ರದ ಕಥೆ’ ಎನ್ನುತ್ತಾರೆ ವಿಶ್ವಾಸ್‌.

ಅವಘಡಗಳು ಯಾವುದೇ ವ್ಯಕ್ತಿಯ ಜೀವನ ಉತ್ಸಾಹವನ್ನೇ ಕೊಂದುಬಿಡಬಲ್ಲವು, ಖಿನ್ನತೆಗೆ ದೂಕಿಬಿಡಬಲ್ಲವು. ಆದರೆ, ಅವುಗಳಿಗೆ ಅಪಾರ ಆತ್ಮವಿಶ್ವಾಸದ ಮೂಲಕ ಸವಾಲು ಎಸೆಯುವವರು ಮಾತ್ರ ಯಶಸ್ವಿ ಆಗುತ್ತಾರೆ.

ವಿಶ್ವಾಸ್‌: 9972530303

ವಿಶ್ವಾಸ್‌ 
ವಿಶ್ವಾಸ್‌ 
ವಿಶ್ವಾಸ್‌ 
ವಿಶ್ವಾಸ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT