ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನಿ ಕಪ್‌ | ರಹಾನೆ, ಶ್ರೇಯಸ್‌, ಸರ್ಫರಾಜ್‌ ಅರ್ಧಶತಕ: ಉತ್ತಮ ಮೊತ್ತದತ್ತ ಮುಂಬೈ

Published : 1 ಅಕ್ಟೋಬರ್ 2024, 15:31 IST
Last Updated : 1 ಅಕ್ಟೋಬರ್ 2024, 15:31 IST
ಫಾಲೋ ಮಾಡಿ
Comments

ಲಖನೌ: ಆರಂಭಿಕ ಕುಸಿತದ ಬಳಿಕ ನಾಯಕ ಅಜಿಂಕ್ಯಾ ರಹಾನೆ, ಶ್ರೇಯಸ್‌ ಅಯ್ಯರ್‌ ಮತ್ತು ಸರ್ಫರಾಜ್‌ ಖಾನ್‌ ಅವರ ಅರ್ಧಶತಕಗಳ ಬಲದಿಂದ ಮುಂಬೈ ತಂಡವು ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿಯ ಮೊದಲ ದಿನವಾದ ಮಂಗಳವಾರ ಭಾರತ ಇತರರ ತಂಡದ ವಿರುದ್ಧ ಉತ್ತಮ ಮೊತ್ತದತ್ತ ಸಾಗಿದೆ.

ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ಇತರರ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ನಾಯಕ ಋತುರಾಜ್‌ ಗಾಯಕವಾಡ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ನಡೆಸಿದ ವೇಗಿ ಮುಕೇಶ್‌ ಕುಮಾರ್‌, ರಣಜಿ ಚಾಂಪಿಯನ್‌ ಮುಂಬೈ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು. ಪೃಥ್ವಿ ಶಾ (4), ಆಯುಷ್ ಮ್ಹಾತ್ರೆ (19) ಮತ್ತು ಹಾರ್ದಿಕ್ ತಮೋರ್ (0) ಅವರ ವಿಕೆಟ್‌ ಪಡೆದರು.

ಕೇವಲ 37 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ರಹಾನೆ (ಔಟಾಗದೇ 86; 197ಎ, 4x6, 6x1) ಮತ್ತು ಶ್ರೇಯಸ್‌ ಅಯ್ಯರ್‌ (57;84ಎ, 4x6, 6x2) ಚೇತರಿಕೆ ನೀಡಿದರು. ಭಾರತ ತಂಡಕ್ಕಾಗಿ 85 ಟೆಸ್ಟ್‌ ಪಂದ್ಯಗಳನ್ನು ಆಡಿ 5000ಕ್ಕೂ ಅಧಿಕ ರನ್‌ ಗಳಿಸಿರುವ ಅನುಭವಿ ಬ್ಯಾಟರ್‌ ರಹಾನೆ ಎಚ್ಚರಿಕೆಯ ಆಟ ಪ್ರದರ್ಶಿಸಿದರು.

ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ರಹಾನೆ– ಶ್ರೇಯಸ್‌ ಜೋಡಿಯು 102 ರನ್‌ (170ಎ) ಸೇರಿಸಿತು. ಶ್ರೇಯಸ್‌ ಔಟಾದ ಬಳಿಕ ರಹಾನೆ ಅವರನ್ನು ಸೇರಿಕೊಂಡ ಸರ್ಫರಾಜ್‌ (ಔಟಾಗದೇ 54; 88ಎ, 4x6) ಅವರು ಐದನೇ ವಿಕೆಟ್‌ಗೆ ಮುರಿಯದ 98 ರನ್ (176ಎ) ಸೇರಿಸಿದ್ದು ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. ಮುಂಬೈ ತಂಡವು 68 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 237 ರನ್‌ ಗಳಿಸಿದೆ. ಯಶ್‌ ದಯಾಳ್‌ ಒಂದು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಮುಂಬೈ: 68 ಓವರ್‌ಗಳಲ್ಲಿ 4ಕ್ಕೆ 237 (ಅಜಿಂಕ್ಯಾ ರಹಾನೆ ಔಟಾಗದೇ 86, ಸರ್ಫರಾಜ್‌ ಖಾನ್‌ ಔಟಾಗದೇ 54, ಶ್ರೇಯಸ್‌ ಅಯ್ಯರ್‌ 57; ಮುಕೇಶ್‌ ಕುಮಾರ್ 60ಕ್ಕೆ 3, ಯಶ್‌ ದಯಾಳ್‌ 46ಕ್ಕೆ 1)– ಭಾರತ ಇತರರ ವಿರುದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT