ಕರಾಚಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದ ಅರ್ಷದ್ ನದೀಮ್ ಅವರಿಗೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಅವರು ₹10 ಕೋಟಿ ಬಹುಮಾನ ಪ್ರಕಟಿಸಿದ್ದಾರೆ. ಸ್ವರ್ಣ ಗೆಲ್ಲುವ ಹಾದಿಯಲ್ಲಿ ಅವರು ಒಲಿಂಪಿಕ್ ದಾಖಲೆ ಸ್ಥಾಪಿಸಿದ್ದರು.
ಕ್ರೀಡೆಗಳ ಆರಂಭಕ್ಕೆ ಕೆಲವೇ ತಿಂಗಳ ಮೊದಲು ಅವರು ದೇಣಿಗೆ ಸಂಗ್ರಹಿಸಿ ನೂತನ ಜಾವೆಲಿನ್ ಖರೀದಿಸಿದ್ದರು. ನದೀಮ್ ಅವರ ತವರೂರಾದ ಖಾನೆವಾಲ್‌ನಲ್ಲಿ ನಿರ್ಮಿಸಲಾಗುವ ಕ್ರೀಡಾನಗರಿಗೆ ಅವರ ಹೆಸರನ್ನೇ ಇಡುವುದಾಗಿಯೂ ನವಾಜ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಕ್ರಿಕೆಟ್ ಬಿಟ್ಟು ಇತರೆ ಕ್ರೀಡೆಗಳ ಆಟಗಾರರು ಹಣಕಾಸಿನ ಬಿಕ್ಕಟ್ಟು ಎದುರಿಸುವುದು ಸಾಮಾನ್ಯ.
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (2022) ಚಿನ್ನ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅರ್ಷದ್ ನದೀಮ್ ಅವರು ತಮ್ಮ ಜಾವೆಲಿನ್ ಹಳೆಯದಾಗಿದ್ದು ಬಳಕೆಯೋಗ್ಯವಾಗಿಲ್ಲದ ಕಾರಣ ಹೊಸ ಜಾವೆಲಿನ್ ಖರೀದಿಗೆ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ತಾವು ಹುಟ್ಟಿ ಬೆಳೆದ ಗ್ರಾಮದ ಸುತ್ತಮುತ್ತಲ ಅಥ್ಲೀಟುಗಳಿಗೆ ನೆರವಾಗಲು ತಾವು ಅಕಾಡೆಮಿಯೊಂದನ್ನು ಸ್ಥಾಪಿಸಲು ತಾವು ದೃಢನಿಶ್ಚಯ ಮಾಡುವುದಾಗಿ ಚಿನ್ನ ಗೆದ್ದ ನಂತರ ಮೊದಲ ಸಂದೇಶದಲ್ಲಿ ನದೀಮ್ ಪ್ರಕಟಿಸಿದ್ದರು.
‘ಈಗ ಮೊದಲ ಒಲಿಂಪಿಕ್ ಸ್ವರ್ಣ ಗೆದ್ದಿರುವ ಕಾರಣ ಗ್ರಾಮೀಣ ಭಾಗದ ಅಥ್ಲೀಟುಗಳಿಗೆ ಕ್ರೀಡಾ ಅಕಾಡೆಮಿ ಮಾಡುವ ವಿಶ್ವಾಸ ಹೊಂದಿರುವುದಾಗಿ ನದೀಮ್ ಹೇಳಿದ್ದಾರೆ’ ಎಂದು ಅವರ ತಂದೆ ಮುಹಮ್ಮದ್ ಅರ್ಷದ್ ಪಿಟಿಐಗೆ ತಿಳಿಸಿದ್ದಾರೆ.
ನೀರಜ್ ಚೋಪ್ರಾ ಚಿನ್ನ ಗೆದ್ದಾಗ ಭಾರತದಲ್ಲಿ ಕ್ರಿಕೆಟೇತರ ಕ್ರೀಡೆಗಳ ಮೇಲೂ ಅದು ಪ್ರಭಾವ ಬೀರಿತು. ಪಾಕಿಸ್ತಾನದಲ್ಲೂ ಇಂಥದ್ದೇ ನಡೆಯಬಹುದು ಎಂದು ಅವರ ಸೋದರ ಮುಹಮ್ಮದ್ ಅಶ್ರಫ್ ಹೇಳಿದರು.
ಅರ್ಷದ್ ನದೀಮ್ ಅವರಿಗೆ ಇನ್ನೂ ಕೆಲವರು ನಗದು ಬಹುಮಾನ ಘೋಷಿಸಿದ್ದಾರೆ.
‘ದಾಖಲೆಗೆ ಪಾತ್ರರಾದ ಅವರ ಥ್ರೊ ನಂಬಲಸಾಧ್ಯವಾದುದು. ಇದು ಸಿಲೆಬಸ್‌ನಿಂದ ಹೊರತಾದುದು’ ಎಂದು ಅವರ ಕೋಚ್ ಸಲ್ಮಾನ್ ಬಟ್ಟ ಬಣ್ಣಿಸಿದ್ದಾರೆ.