ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್‌ ಗಮನ ಸೆಳೆದ ಅಂಜಲಿ ದೇವಿ ಸಾಧನೆ

Published 16 ಜೂನ್ 2023, 18:23 IST
Last Updated 16 ಜೂನ್ 2023, 18:23 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಗಾಯಾಳಾಗಿ ಸುಮಾರು ನಾಲ್ಕು ವರ್ಷ ಟ್ರ್ಯಾಕ್‌ನಿಂದ ದೂರವಿದ್ದ ನ ಎರಡನೇ ದಿನವಾದ ಶುಕ್ರವಾರ 400 ಮೀ. ಚಿನ್ನ ಗೆಲ್ಲುವ ಹಾದಿಯಲ್ಲಿ ವೈಯಕ್ತಿಕ ಶ್ರೇಷ್ಠ ಕಾಲಾವಧಿ ದಾಖಲಿಸಿ, ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದರು.

24 ವರ್ಷದ ಅಂಜಲಿ ಫೈನಲ್‌ನಲ್ಲಿ ಈ ಓಟವನ್ನು 51.58 ಸೆಕೆಂಡುಗಳಲ್ಲಿ ಪೂರೈಸಿ, ತಮ್ಮದೇ ರಾಜ್ಯದ ಉದಯೋನ್ಮುಖ ಓಟಗಾರ್ತಿ ಹಿಮಾನ್ಶಿ ಮಲಿಕ್‌ ಅವರನ್ನು (51.76 ಸೆ.) ಹಿಂದಕ್ಕೆ ಹಾಕಿ ಚಿನ್ನದ ಪದಕಕ್ಕೆ ಒಡತಿಯಾದರು. ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯಲು ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ ನಿಗದಿ ಮಾಡಿದ್ದ ಕಾಲ 52.96 ಸೆ.ಗಳಾಗಿತ್ತು.

21 ವರ್ಷದ ಹಿಮಾನ್ಶಿ ಮತ್ತು ಕಂಚಿನ ಪದಕ ಪಡೆದ ತಮಿಳುನಾಡಿನ ಆರ್‌.ವಿದ್ಯಾ ರಾಮರಾಜ್ (52.49 ಸೆ) ಮತ್ತು ನಾಲ್ಕನೇ ಸ್ಥಾನ ಪಡೆದ ಮಹಾರಾಷ್ಟ್ರದ ಐಶ್ವರ್ಯಾ ಕೈಲಾಸ್ ಮಿಶ್ರಾ (52.79) ಕೂಡ ಏಷ್ಯನ್‌ ಗೇಮ್ಸ್‌ ಅರ್ಹತಾ ಅವಧಿಯೊಳಗೇ ಗುರಿಮುಟ್ಟಿದ್ದು ಕಡಿಮೆ ಸಾಧನೆಯೇನಾಗಿರಲಿಲ್ಲ. ಆದರೆ ನಿಯಮದಂತೆ ಒಂದು ಸ್ಪರ್ಧೆಗೆ ದೇಶದಿಂದ ಇಬ್ಬರನ್ನು ಮಾತ್ರ ಆಯ್ಕೆ ಮಾಡಬೇಕಾಗುತ್ತದೆ.

2019ರ ಅಕ್ಟೋಬರ್‌ನಲ್ಲಿ ರಾಂಚಿಯಲ್ಲಿ ನಡೆದ ಇಂಡಿಯನ್‌ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಅಂಜಲಿ ಕೊನೆಯ ಸಲ ಈ ಓಟದಲ್ಲಿ ಭಾಗವಹಿಸಿದ್ದರು. ಅವರ ಈ ಹಿಂದಿನ ವೈಯಕ್ತಿಕ ಉತ್ತಮ ಸಾಧನೆ (51.53 ಸೆ.) ಲಖನೌದ ಕೂಟದಲ್ಲಿ ದಾಖಲಾಗಿತ್ತು.

ಗಂಭೀರ ಗಾಯದಿಂದ ಚೇತರಿಸಿ ಈ ಕೂಟದ ಹೀಟ್ಸ್‌ (52.89), ಸೆಮಿಫೈನಲ್‌ (52.03ಸೆ) ಮತ್ತು ಫೈನಲ್‌ನಲ್ಲಿ ಅಂಜಲಿದೇವಿ ಸುಧಾರಿತ ಸಾಧನೆ ತೋರಿದ್ದು ಗಮನಾರ್ಹ.

ಮಹಿಳೆಯರ 1,500 ಮೀ. ಓಟದಲ್ಲೂ ಮೊದಲ ನಾಲ್ಕು ಸ್ಥಾನ ಪಡೆದ ಓಟಗಾರ್ತಿಯರು ಏಷ್ಯನ್‌ ಗೇಮ್ಸ್‌ ಅರ್ಹತೆ (4ನಿ.15.49 ಸೆ.) ದಾಟಿದರು.

ಪುರುಷರ 400 ಮೀ. ಓಟದಲ್ಲಿ ಶ್ರೀಲಂಕಾ ಕಳಿಂಗ ಕುಮಾರಗೆ (45.64 ಸೆ.) ಚಿನ್ನ ಗೆದ್ದರೆ, ರಾಷ್ಟ್ರೀಯ ದಾಖಲೆ ಹೊಂದಿರುವ ಮುಹಮ್ಮದ್‌ ಅನಾಸ್‌ (45.76 ಸೆ.) ಬೆಳ್ಳಿಯ ಪದಕ ಪಡೆದರು. ಮುಹಮ್ಮದ್ ಅಜ್ಮಲ್‌ (ಕೇರಳ) ಮತ್ತು ಅಮೊಯಿ ಜಾಕೊಬ್‌ (ದೆಹಲಿ) ಕ್ರಮವಾಗಿ 45.90 ಮತ್ತು 45.91 ಸೆ.ಗಳ ಕಾಲ ತೆಗೆದುಕೊಂಡು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರು. ಮೊದಲ ನಾಲ್ಕೂ ಸ್ಥಾನ ಪಡೆದವರು ಏಷ್ಯನ್‌ ಗೇಮ್ಸ್‌ಗೆ ನಿಗದಿಪಡಿಸಿದ ಅರ್ಹತೆಯೊಳಗೇ (46.17 ಸೆ.) ದೂರ ಕ್ರಮಿಸಿದ್ದು ವಿಶೇಷ.

ಶಿವಕುಮಾರ್ ವೇಗದ ಓಟಗಾರ:

ತಮಿಳುನಾಡಿನ ಬಿ.ಶಿವ ಕುಮಾರ್‌ 100 ಮೀ. ಓಟವನ್ನು 10.37 ಸೆ.ಗಳಲ್ಲಿ ಪೂರೈಸಿ ಚಾಂಪಿಯನ್‌ಷಿಪ್‌ನ ವೇಗದ ಓಟಗಾರ ಎನಿಸಿದರು. ಪಂಜಾಬ್‌ ಹರ್ಜಿತ್‌ ಸಿಂಗ್‌ (10.45) ಎರಡನೇ ಸ್ಥಾನ ಮತ್ತು ತಮಿಳುನಾಡಿನ ಇಲಾಕ್ಯದಾಸನ್‌ ಕೆ. ಮೂರನೇ ಸ್ಥಾನ ಪಡೆದರು. ಏಷ್ಯನ್‌ ಗೇಮ್ಸ್‌ಗೆ  ನಿಗದಿಯಾಗಿದ್ದ ಅರ್ಹತಾ ಅವಧಿ 10.19 ಸೆ.

ಆಂಧ್ರ ಪ್ರದೇಶದ ಜ್ಯೋತಿ ಯೆರ‍್ರಾಜಿ ಮಹಿಳೆಯರ ವಿಭಾಗದಲ್ಲಿ ವೇಗದ ರಾಣಿ ಎನಿಸಿದರು. 100 ಮೀ. ಹರ್ಡಲ್ಸ್‌ನಲ್ಲಿ ದಾಖಲೆ ಹೊಂದಿರುವ ಅವರು 100 ಮೀ. ಓಟವನ್ನು 11.46 ಸೆ.ಗಳಲ್ಲಿ ಕ್ರಮಿಸಿದರು. ಏಷ್ಯನ್‌ ಗೇಮ್ಸ್‌ಗೆ ನಿಗದಿಪಡಿಸಿದ ಕಾಲ: 10.46 ಸೆ.

ಹರಿಯಾಣದ ಜುನೇದ್ ಖಾನ್‌ ಪುರುಷರ 35 ಕಿ.ಮೀ. ರೇಸ್‌ ವಾಕ್‌ ಸ್ಪರ್ಧೆಯನ್ನು 3ಗಂಟೆ.00ನಿ. 37 ಸೆ.ಗಳಲ್ಲಿ ಪೂರೈಸಿ ಅಗ್ರಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ರಾಮ್‌ ಬಾಬೂ ಇಲ್ಲಿ ಭಾಗವಹಿಸಿರಲಿಲ್ಲ. ಬಾಬೂ ಅವರು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ರೇಸ್‌ ವಾಕಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ (2ಗಂ.31ನಿ.36 ಸೆ.) ಸ್ಥಾಪಿಸಿದ್ದರು.

ಎರಡನೇ ದಿನದ ಫಲಿತಾಂಶಗಳು

ಪುರುಷರು: 100 ಮೀ. ಓಟ: ಶಿವಕುಮಾರ್‌ ಬಿ. (ತಮಿಳುನಾಡು)–1, ಹರ್ಜಿತ್‌ ಸಿಂಗ್‌ (ಪಂಜಾಬ್‌)–2, ಇಲಾಕ್ಯದಾಸನ್‌ (ತಮಿಳುನಾಡು)–3, ಕಾಲ: 10.37 ಸೆ.; ಡಿಸ್ಕಸ್‌ ಥ್ರೊ: ಕೃಪಾಲ್‌ ಸಿಂಗ್‌ (ಪಂಜಾಬ್‌)–1, ಗಗನ್‌ ದೀಪ್‌ ಸಿಂಗ್‌ (ಪಂಜಾಬ್‌)–2, ನಿರ್ಭಯ್‌ ಸಿಂಗ್‌ (ಹರಿಯಾಣ)–3, ದೂರ: 57.39 ಮೀ.; 800 ಮೀ. ಓಟ: ಕೃಷ್ಣನ್ ಕುಮಾರ್ (ಹರಿಯಾಣ)–1, ಮೊಹಮ್ಮದ್ ಅಫ್ಜಲ್ (ಕೇರಳ)–2, ಪ್ರದೀಪ್ ಸೆಂಥಿಲ್‌ ಕುಮಾರ್ (ತಮಿಳುನಾಡು)–3, ಕಾಲ: 1ನಿ.46.17 ಸೆ.; 3,000 ಮೀ. ಸ್ಟೀಪಲ್‌ ಚೇಸ್‌: ಬಾಲಕಿಶನ್‌ (ಹರಿಯಾಣ)–1, ಸುಮಿತ್‌ ಕುಮಾರ್‌ (ದೆಹಲಿ)–2, ಪ್ರಿನ್ಸ್ ರಾಜ್‌ ಮಿಶ್ರಾ (ಸಿಕ್ಕಿಂ)–3, ಕಾಲ: 8ನಿ.38.98 ಸೆ.; 4x400 ಮೀ. ಮಿಕ್ಸೆಡ್‌ ರಿಲೆ: ತಮಿಳುನಾಡು (ಕಾಲ: 3ನಿ.2140ಸೆ)–1, ಮಹಾರಾಷ್ಟ್ರ (ಕಾಲ: 3ನಿ.21.67 ಸೆ.)–2, ಕರ್ನಾಟಕ (ನಿಹಾಲ್‌ ಜೋಯಲ್‌, ಇಂಚರಾ ಕಾವೇರಮ್ಮ ಟಿ.ಆರ್‌., ಮಿಜೊ ಚಾಕೊ ಕುರಿಯನ್‌, ಕಾಲ: 3ನಿ21.88ಸೆ.) –3

35 ಕಿ.ಮೀ. ರೇಸ್‌ ವಾಕ್‌: ಜುನೇದ್‌ (ಹರಿಯಾಣ, ಕಾಲ: 3ಗಂ.00ನಿ.37 ಸೆ.)–1, ಏಕನಾಥ ಸಂಭಾಜಿ ತುರುಂಬ್ (ಮಹಾರಾಷ್ಟ್ರ, ಕಾಲ: 3ಗಂಟೆ06:06 ಸೆ.)–2, ವಿಕ್ರಮ್ ಕುಮಾರ್ ಯಾದವ್ (ರಾಜಸ್ತಾನ, ಕಾಲ: 3ಗಂ.06ನಿ.06ಸೆ.)–3, ಸುರಿಂದರ್ ಸಿಂಗ್‌ (ಪಂಜಾಬ್‌, ಕಾಲ: 3ಗಂ.08ನಿ.51 ಸೆ.)–4.

ಮಹಿಳೆಯರು:

100 ಮೀ. ಓಟ: ಜ್ಯೋತಿ ಯೆರ‍್ರಾಜಿ (ಆಂಧ್ರ ಪ್ರದೇಶ)–1, ಶ್ರವಣಿ ನಂದಾ (ಒಡಿಶಾ)–3, ಹಿಮಶ್ರೀ ರಾಯ್‌ (ಹರಿಯಾಣ)–3, ಕಾಲ: 11.46 ಸೆ.; 400 ಮೀ. ಓಟ: ಅಂಜಲಿ ದೇವಿ (ಹರಿಯಾಣ)–1, ಹಿಮಾನ್ಶಿ ಮಲಿಕ್‌ (ಹರಿಯಾಣ)–2, ಆರ್‌.ವಿದ್ಯಾ ರಾಮರಾಜ್‌ (ತಮಿಳುನಾಡು)–3, ಕಾಲ: 51.48 ಸೆ.; 1,500 ಮೀ. ಓಟ: ದೀಕ್ಷಾ (ಮಧ್ಯಪ್ರದೇಶ)–1, ಹರ್ಮಿಲನ್‌ ಬೇನ್ಸ್‌ (ಪಂಜಾಬ್‌)–2, ಚಂದಾ (ದೆಹಲಿ)–3, ಕಾಲ: 4ನಿ.06.07 ಸೆ.; 3,000 ಮೀ. ಸ್ಟೀಪಲ್ ಚೇಸ್‌: ಪಾರುಲ್‌ ಚೌಧರಿ (ಉತ್ತರ ಪ್ರದೇಶ)–1, ಪ್ರೀತಿ ಲಂಬಾ (ಹರಿಯಾಣ)–2, ಕೋಮಲ್‌ ಚಂದ್ರಕಾಂತ್ (ಮಹಾರಾಷ್ಟ್ರ)–3, ಕಾಲ: 9ನಿ.34.23 ಸೆ.; ಡಿಸ್ಕಸ್‌ ಥ್ರೊ: ಸೀಮಾ ಪೂನಿಯಾ (ಉತ್ತರ ಪ್ರದೇಶ)–1, ಶಾಲಿನಿ ಚೌಧರಿ (ಮಧ್ಯಪ್ರದೇಶ)–2, ಕಿರಣ್‌ (ರಾಜಸ್ತಾನ)–3, ದೂರ: 56.50 ಮೀ.; ಟ್ರಿಪಲ್‌ ಜಂಪ್‌: ಶೀನಾ ಎನ್‌.ವಿ. (ಕೇರಳ)–1, ನಯನಾ ಜೇಮ್ಸ್‌ (ಕೇರಳ)–2, ಮಲ್ಲಾಳ ಅನುಷಾ (ಆಂಧ್ರ ಪ್ರದೇಶ)–3, ದೂರ: 13.60 ಮೀ.

35 ಕಿ.ಮೀ. ರೇಸ್‌ ವಾಕ್‌: ಮಂಜು ರಾಣಿ (ಪಂಜಾಬ್‌, ಕಾಲ: 3ಗಂ.21ನಿ.31 ಸೆ.)–1, ಮಮತಾ ಪಾಲ್‌ (ಉತ್ತರ ಪ್ರದೇಶ, ಕಾಲ: 3ಗಂ.40ನಿ.26 ಸೆ.)–2, ಕೋಮಲ್‌ (ಹರಿಯಾಣ, ಕಾಲ: 3ಗಂ.42ನಿ.41 ಸೆ.)–3, ಪ್ರಿಯಾಂಕಾ ಪಟೇಲ್‌ (ಉತ್ತರ ಪ್ರದೇಶ, ಕಾಲ: 3ಗಂ.45 ನಿ.04 ಸೆ.)–4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT