ನವದೆಹಲಿ: ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರು ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಕೂಟದ ಫೈನಲ್‌ಗೆ ಅರ್ಹತೆ ಗಳಿಸಿದ್ದಾರೆ.
14 ಸುತ್ತುಗಳ ಲೀಗ್‌ನಲ್ಲಿ ನೀರಜ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಒಟ್ಟು 14 ಅಂಕಗಳನ್ನೂ ಗಳಿಸಿದ್ದಾರೆ. ದೋಹಾ ಮತ್ತು ಲೂಸಾನ್ ಲೆಗ್‌ಗಳಲ್ಲಿ ಅವರು ಎರಡನೇ ಸ್ಥಾನ ಪಡೆದಿದ್ದರು.
ಗುರುವಾರ ಜ್ಯೂರಿಕ್‌ನಲ್ಲಿ ನಡೆದ ಕೊನೆಯ ಸುತ್ತಿನಲ್ಲಿ ಅವರು ಭಾಗವಹಿಸಲಿಲ್ಲ. ಗ್ರೆನೆಡಾ ಆ್ಯಂಡರ್ಸನ್ ಪೀಟರ್ಸ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಅವರು ಕ್ರಮವಾಗಿ 29 ಮತ್ತು 21 ಅಂಕ ಗಳಿಸಿದ್ದಾರೆ. ಅದರೊಂದಿಗೆ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿದ್ದಾರೆ.
ನೀರಜ್ ಅವರಿಗಿಂತ ಎರಡು ಅಂಕ ಹೆಚ್ಚು ಗಳಿಸಿರುವ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಚ ಮೂರನೇ ಸ್ಥಾನದಲ್ಲಿದ್ದಾರೆ.
ನೀರಜ್ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಡೈಮಂಡ್ ಲೀಗ್‌ನಲ್ಲಿ ಅವರು ಈ ಹಿಂದೆ ಚಿನ್ನ (2022) ಹಾಗೂ ಬೆಳ್ಳಿ (2023) ಜಯಿಸಿದ್ದಾರೆ. ಈ ಬಾರಿಯೂ ಪದಕ ಜಯಿಸುವ ಛಲದಲ್ಲಿದ್ದಾರೆ.
ಈ ಕೂಟದ ನಂತರ ಅವರು ತಮ್ಮ ತೊಡೆಯ ಸ್ನಾಯುವಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತೆರಳುವ ಸಾಧ್ಯತೆ ಇದೆ.