ಬ್ರಸೆಲ್ಸ್: ಡಬಲ್ ಒಲಿಂಪಿಕ್ ಪದಕವಿಜೇತ ನೀರಜ್ ಚೋಪ್ರಾ ಅವರು ಶನಿವಾರ ತಡರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ ಕೇವಲ ಒಂದು ಸೆಂಟಿಮೀಟರ್ ಅಂತರದಲ್ಲಿ ಪ್ರಶಸ್ತಿ ಕೈತಪ್ಪಿಸಿಕೊಂಡರು. ಆದರೆ, ತಮ್ಮ ಎಡಗೈಗೆ ಆಗಿದ್ದ ಗಾಯದ ನೋವಿನಲ್ಲಿಯೂ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಪುರುಷರ ಜಾವೆಲಿನ್ ಥ್ರೋನಲ್ಲಿ ಅವರ ಪ್ರತಿಸ್ಪರ್ಧಿ ಗ್ರೆನೆಡಾದ ಪೀಟರ್ಸ್ ಆ್ಯಂಡರ್ಸನ್ ಅವರು 87.87 ಮೀಟರ್ಸ್ ಥ್ರೋ ಮಾಡಿದರು. ನೀರಜ್ 87.86 ಮೀ ದೂರ ಜಾವೆಲಿನ್ ಎಸೆದರು. ಕೇವಲ 0.01 ಮೀ ಅಂತರದಲ್ಲಿ ಕಿರೀಟ ಕೈಜಾರಿತು. ತಮ್ಮ ಗಾಯದ ಕುರಿತು ನೀರಜ್ ಅವರೇ ಈಗ ಹೇಳಿಕೊಂಡಿದ್ದಾರೆ.
‘ಕಳೆದ ಸೋಮವಾರ ಅಭ್ಯಾಸ ಮಾಡುವ ಸಂದರ್ಭದಲ್ಲಿ ಗಾಯವಾಯಿತು. ಎಡಗೈ ಅಂಗೈನ ಮೂಳೆ ಮುರಿದಿತ್ತು. ಮತ್ತೊಂದು ಬಾರಿ ನೋವಿನೊಂದಿಗೆ ಸವಾಲು ಎದುರಿಸುವ ಸಂದರ್ಭ ಇದಾಗಿತ್ತು. ಆದರೆ ನನ್ನ ತಂಡದ ನೆರವಿನಿಂದಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು’ ಎಂದು 26 ವರ್ಷದ ನೀರಜ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಸಂದೇಶದೊಂದಿಗೆ ತಮ್ಮ ಎಡಗೈ ಗಾಯದ ಎಕ್ಸ್ ರೇ ಚಿತ್ರವನ್ನೂ ಲಗತ್ತಿಸಿದ್ದಾರೆ.
‘ನನಗೆ ಈ ವರ್ಷದ ಕೊನೆಯ ಸ್ಪರ್ಧೆ ಇದಾಗಿದೆ. ಯಶಸ್ಸಿನೊಂದಿಗೆ ಋತುವನ್ನು ಕೊನೆಗೊಳಿಸುವುದು ನನ್ನ ಉದ್ದೇಶವಾಗಿತ್ತು. ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ. ಪ್ರಸಕ್ತ ಋತುವಿನಲ್ಲಿ ನಾನು ಬಹಳಷ್ಟು ಕಲಿತಿರುವೆ. ಮುಂದಿನ ಋತುವಿನಲ್ಲಿ ಸಂಪೂರ್ಣ ಫಿಟ್ ಆಗಿ ಮರಳುತ್ತೇನೆ’ ಎಂದು ನೀರಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗ ಮುಕ್ತಾಯಗೊಂಡ ಋತುವಿನುದ್ದಕ್ಕೂ ಚೋಪ್ರಾ ತಮ್ಮ ಫಿಟ್‌ನೆಸ್ ನಿರ್ವಹಣೆಗೆ ಬಹಳಷ್ಟು ಕಷ್ಟಪಟ್ಟಿದ್ದಾರೆ. ಈ ಮೊದಲೇ ಅವರು ತೊಡೆ ಸಂಧು ಸ್ನಾಯುವಿನ ನೋವಿನಿಂದ ಬಳಲಿದ್ದಾರೆ. ಆ ನೋವಿನಲ್ಲಿಯೇ ಅವರು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿದ್ದರು. ಅಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಆದರೆ 90 ಮೀಟರ್ಸ್ ಥ್ರೋ ಮಾಡುವ ಅವರ ಗುರಿ ಇದುವರೆಗೂ ಈಡೇರಿಲ್ಲ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಚಿನ್ನ ಜಯಿಸಿದ್ದರು.
ಇದೇ ತಿಂಗಳು ಅವರು ತೊಡೆಸಂಧು ಗಾಯಕ್ಕೆ ಶಸ್ತ್ರಚಿಕಿತ್ಸೆಗೊಳಗಾಗುವ ಸಾಧ್ಯತೆ ಇದೆ.
‘2024ರ ಋತು ಮುಗಿದಿದೆ. ಹಿಂದೆ ಒಮ್ಮೆ ಹೊರಳಿ ನೋಡಿದರೆ ಬಹಳಷ್ಟು ಅನುಭವ, ಸುಧಾರಣೆಗಳನ್ನು ಕಂಡಿದ್ದೇನೆ. ಕೆಲವು ಹಿನ್ನಡೆಗಳನ್ನೂ ಅನುಭವಿಸಿರುವೆ. ಮನೋಬಲ ಮತ್ತಿತರ ಸಂಗತಿಗಳನ್ನೂ ಅರಿತಿರುವೆ. ತಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು. 2024 ರ ವರ್ಷವು ನನ್ನನ್ನು ಉತ್ತಮ ಅಥ್ಲೀಟ್ ಆಗಿ ರೂಪಿಸಿದೆ. 2025ರಲ್ಲಿ ಮತ್ತೆ ನಿಮ್ಮನ್ನು ಕಾಣುವೆ’ ಎಂದು ಬರೆದಿದ್ದಾರೆ.
ನೀರಜ್ ಅವರು ನೀರಜ್ ಅವರು 2022ರಲ್ಲಿ ಜ್ಯೂರಿಚ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಕೂಟದಲ್ಲಿ ಪ್ರಥಮ ಮತ್ತು 2023ರಲ್ಲಿ ಯುಗೇನ್‌ನಲ್ಲಿ ನಡೆದಾಗ ದ್ವಿತೀಯ ಸ್ಥಾನ ಗಳಿಸಿದ್ದರು.
ಅಂಕಿ ಅಂಶ
2024ರ ಋತುವಿನಲ್ಲಿ ನೀರಜ್ ಸಾಧನೆ
ಗಳಿಸಿದ ಸ್ಥಾನ ;ಸ್ಪರ್ಧೆ; ಶ್ರೇಷ್ಠ ಥ್ರೋ (ಮೀ)
2; ದೋಹಾ ಡೈಮಂಡ್ ಲೀಗ್; 88.36
1;ಫೆಡರೇಷನ್ ಕಪ್;82.27
1;ಪಾವೊ ನುರ್ಮಿ ಗೇಮ್ಸ್;85.97
2;ಪ್ಯಾರಿಸ್ ಒಲಿಂಪಿಕ್ಸ್;89.45
2;ಲಾಸೆನ್ ಡೈಮಂಡ್ ಲೀಗ್;89.49
2;ಬ್ರಸೆಲ್ಸ್ ಡೈಮಂಡ್ ಲೀಗ್;87.86
ಬ್ರಸೆಲ್ಸ್ ಫೈನಲ್ ಫಲಿತಾಂಶ
ಸ್ಥಾನ; ಸ್ಪರ್ಧಿ; ಥ್ರೋ (ಮೀ)
1; ಪೀಟರ್ಸ್ ಆ್ಯಂಡರ್ಸನ್ (ಗ್ರೆನೆಡಾ); 87.87
2; ನೀರಜ್ ಚೋಪ್ರಾ (ಭಾರತ); 87.86
3; ಜೂಲಿಯನ್ ವೆಬರ್(ಜರ್ಮನಿ); 85.97
4; ಆ್ಯಂಡ್ರಿಯನ್ ಮರ್ದಾರೆ(ಮಾಲ್ಡೋವಾ); 82.79
5; ಡೀನ್ ರಾಡ್ರಿಕ್ ಜೆಂಕಿ (ಜಪಾನ್); 80.37
6; ಆರ್ಥರ್ ಫೆಲ್ಫ್‌ನರ್ (ಉಕ್ರೇನ್); 79.86
7; ಹರ್ಮನ್ ತಿಮೊತಿ (ಬೆಲ್ಜಿಯಂ); 76.46
ನೀರಜ್ ಚೋಪ್ರಾ ಆರು ಥ್ರೋಗಳು (ಮೀ)
* 86.82
* 83.49
* 87.86
* 82.04
* 83.30
* 86.56
2022ರಲ್ಲಿ ಜಯಿಸಿದ್ದ ಡೈಮಂಡ್ ಟ್ರೋಫಿಯೊಂದಿಗೆ ನೀರಜ್ ಚೋಪ್ರಾ
–ಪಿಟಿಐ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.