ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದಲ್ಲಿ ಮಹಿಳೆಯರ ಚೆಸ್‌ ಸಾಕಷ್ಟು ಪ್ರಗತಿ ಕಾಣಬೇಕಿದೆ: ವಿಶ್ವನಾಥನ್ ಆನಂದ್

ಒಲಿಂಪಿಯಾಡ್‌ ಯಶಸ್ಸನ್ನು ಸಂಭ್ರಮಿಸಿದ ಆನಂದ್
Published : 26 ಸೆಪ್ಟೆಂಬರ್ 2024, 13:41 IST
Last Updated : 26 ಸೆಪ್ಟೆಂಬರ್ 2024, 13:41 IST
ಫಾಲೋ ಮಾಡಿ
Comments

ಮುಂಬೈ: ಒಲಿಂಪಿಯಾಡ್‌ನಲ್ಲಿ ಭಾರತದ ಅಸಾಧಾರಣ ಸಾಧನೆಯಿಂದ ಸಂಭ್ರಮದಲ್ಲಿರುವ ಚೆಸ್‌ ದಿಗ್ಗಜ ವಿಶ್ವನಾಥನ್ ಆನಂದ್ ಅವರು, ‘ಇದು ಭರವಸೆಯನ್ನು ಮೂಡಿಸುವಂಥ ಆರಂಭ‌. ಆದರೆ ದೇಶದಲ್ಲಿ ಮಹಿಳೆಯರ ವಿಭಾಗದಲ್ಲಿ ಚೆಸ್‌ ಸಾಕಷ್ಟು ಪ್ರಗತಿ ಕಾಣಬೇಕಾಗಿದೆ’ ಎಂದೂ ಹೇಳಿದ್ದಾರೆ.

ಬುಡಾಪೆಸ್ಟ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಒಲಿಂಪಿಯಾಡ್‌ನಲ್ಲಿ ಭಾರತ ತಂಡಗಳು ಓಪನ್ ಮತ್ತು ಮಹಿಳೆಯರ ವಿಭಾಗದಲ್ಲಿ ಮೊದಲ ಬಾರಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದವು. ಯುವ ಪ್ರತಿಭೆಗಳಾದ ಆರ್‌.ಪ್ರಜ್ಞಾನಂದ, ಡಿ.ಗುಕೇಶ್ ಅವರು ವಿಶ್ವ ಮಟ್ಟದಲ್ಲಿ ಯಶಸ್ಸಿನ ಅಲೆಗಳನ್ನು ಎಬ್ಬಿಸುತ್ತಿರುವ ಕಾರಣ ದೇಶದಲ್ಲಿ ಪುರುಷರ ವಿಭಾಗದಲ್ಲಿ ಚೆಸ್‌ ಜನಪ್ರಿಯತೆ ಪಡೆದಿದೆ. ಆದರೆ ಮಹಿಳೆಯ ವಿಭಾಗದಲ್ಲಿ ಇದೇ ಸ್ಥಿತಿಯಿಲ್ಲ.

‘ಇದು ಉತ್ತಮ ಆರಂಭ. ಆದರೆ ನಾವು ನಿರಂತರವಾಗಿ ಪ್ರಗತಿ ಸಾಧಿಸಬೇಕಾದ ಕಾರಣ ಸಾಗಬೇಕಾದ ದೂರ ಬಹಳಷ್ಟು ಇದೆ’ ಎಂದು ಅವರು ಟೆಕ್‌ ಮಹೀಂದ್ರ ಗ್ಲೋಬಲ್‌ ಚೆಸ್‌ ಲೀಗ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸಂದರ್ಭದಲ್ಲಿ ಪಿಟಿಐಗೆ ತಿಳಿಸಿದರು.

‘ಇನ್ನೂ ಹೆಚ್ಚಿನ ಬಾಲಕಿಯರು ಚೆಸ್‌ನತ್ತ ಆಕರ್ಷಿತರಾಗಬೇಕಾಗಿದೆ. ಈ (ಒಲಿಂಪಿಯಾಡ್‌) ಫಲಿತಾಶ  ಆ ನಿಟ್ಟಿನಲ್ಲಿ ಪ್ರೇರಣೆ ಮೂಡಿಸಬಹುದು’ ಎಂದು 54 ವರ್ಷದ ಚೆಸ್‌ ತಾರೆ ವಿಶ್ವಾಸ ವ್ಯಕ್ತಪಡಿಸಿದರು.

‘ಇಂಥ ಒಂದು ಸಾಧನೆಯಾಗಿದ್ದು ಹೆಮ್ಮೆಯ ವಿಷಯ. ಇದು ನನಗೆ ಅಚ್ಚರಿಗೊಳಿಸಿದ ಫಲಿತಾಂಶವೇನಲ್ಲ. ಆದರೆ ಎರಡು ಚಿನ್ನ ಬಂದು ಡಬಲ್‌ ಒಲಿಂಪಿಯಾಡ್‌ ಚಾಂಪಿಯನ್ ಆಗಿದ್ದು ಸಂತಸ ಮೂಡಿಸಿತು’ ಎಂದರು.

‘ನಾನು ವೈಯಕ್ತಿಕವಾಗಿ ಸ್ಥಳದಲ್ಲಿದ್ದುದ್ದು ಆ ಸಂಸತ ಅನುಭವಿಸಿದೆ. ಎರಡು ಬಾರಿ ರಾಷ್ಟ್ರಗೀತೆ ನುಡಿಸಿದಾಗ ಆನಂದಿಸಿದೆ. ಭಾರತದ ಪ್ರದರ್ಶನದ ಇಡೀ ವಿಶ್ವ ಒಮ್ಮೆ ನಮ್ಮ ಕಡೆ ನೋಡುವಂತೆ ಮಾಡಿತು’ ಎಂದು ಆನಂದ್ ಸಂತಸ ಹಂಚಿಕೊಂಡರು.

‘ಭಾರತದ ಪ್ರದರ್ಶನ ಮೆಚ್ಚುವಂಥದ್ದೇ. ಆದರೆ ಇತರ ತಂಡಗಳು ತಮ್ಮ ಫಲಿತಾಂಶಗಳ ಮೌಲ್ಯಮಾಪನ, ವಿಶ್ಲೇಷಣೆ ನಡೆಸಿ ಮತ್ತಷ್ಟು ಪ್ರಬಲವಾಗಿ ಹಿಂತಿರುಗಬಹುದು’ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.

ಈ ಬಾರಿಯ ಗ್ಲೋಬಲ್ ಚೆಸ್‌ ಲೀಗ್‌ (ಜಿಸಿಎಲ್‌) ಲಂಡನ್‌ನಲ್ಲಿ ಅಕ್ಟೋಬರ್ 3 ರಿಂದ 12ರವರೆಗೆ ನಡೆಯಲಿದ್ದು, ಆನಂದ್ ಅವರೂ (ಗ್ಯಾಂಜೆಸ್‌ ಗ್ರ್ಯಾಂಡ್‌ಮಾಸ್ಟರ್ಸ್‌ ತಂಡದ ಪರ) ಇದರಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT