ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್ ವಿಶ್ವಕಪ್‌ ಟೂರ್ನಿ: ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೋನಾ

Published 9 ಮಾರ್ಚ್ 2024, 14:02 IST
Last Updated 9 ಮಾರ್ಚ್ 2024, 14:02 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮೋನಾ ಅಗರವಲ್, ಡಬ್ಲ್ಯುಎಸ್‌ಪಿಎಸ್‌ ಪ್ಯಾರಾ ಶೂಟಿಂಗ್ ವಿಶ್ವಕಪ್‌ ಟೂರ್ನಿಯಲ್ಲಿ ಮಹಿಳೆಯರ 10 ಮೀ. ಏರ್‌ ರೈಫಲ್‌ (ಎಸ್‌ಎಚ್‌1 ಕೆಟಗರಿ) ಸ್ಪರ್ಧೆಯಲ್ಲಿ ಶನಿವಾರ ಚಿನ್ನ ಗೆದ್ದರು; ಜೊತೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ಕೋಟಾ ಪಡೆದರು.

ಇದು, 37 ವರ್ಷದ ಮೋನಾ ಅವರಿಗೆ ನಾಲ್ಕನೇ ಅಂತರರಾಷ್ಟ್ರೀಯ ಟೂರ್ನಿ. ರಾಜ್ಯ ಮಟ್ಟದಲ್ಲಿ ಷಾಟ್‌ಪಟ್‌ ಮತ್ತು ಪವರ್‌ಲಿಫ್ಟಿಂಗ್‌ನಲ್ಲಿ ಉತ್ತಮ ಸಾಧನೆ ತೋರಿದ್ದ ಅವರು 2021ರ ಡಿಸೆಂಬರ್‌ನಲ್ಲಿ ಶೂಟಿಂಗ್ ಕ್ರೀಡೆಯಲ್ಲಿ ಸ್ಪರ್ಧಿಸಲು ಶುರು ಮಾಡಿದ್ದರು. ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 9ನೇ ಶೂಟರ್ ಅವರು.

2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೇಖರಾ ಇಲ್ಲಿ ಕಂಚಿನ ಪದಕ ಪಡೆದರು.

ಎರಡು ಮಕ್ಕಳ ತಾಯಿಯಾಗಿರುವ ಮೋನಾ, ಕರ್ಣಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ 618ರ ಸ್ಕೋರ್‌ನೊಡನೆ ಎಂಟು ಮಂದಿಯ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಅವರನಿ (623.9) ನಾಲ್ಕನೇ ಸ್ಥಾನ ಪಡೆದು ಫೈನಲ್‌ಗೆ ತೇರ್ಗಡೆ ಆಗಿದ್ದರು.

ಫೈನಲ್‌ನಲ್ಲಿ ಕೌಶಲ ತೋರಿದ ಮೋನಾ 250.7 ಸ್ಕೋರ್‌ನೊಡನೆ, ಚೀನಾದ ಝಾಂಗ್‌ ಕುಯ್ಪಿಂಗ್ (248.8) ಅವರ ಸವಾಲನ್ನು ಬದಿಗೊತ್ತಿ ಮೊದಲಿಗರಾದರು. ಅವನಿ ಗಳಿಸಿದ ಸ್ಕೋರ್‌ 227.

ಭಾರತದಲ್ಲಿ ನಡೆಯುತ್ತಿರುವ ಮೊತ್ತಮೊದಲ ಪ್ಯಾರಾ ವಿಶ್ವಕಪ್ ಇದು. ಇಲ್ಲಿ 46 ರಾಷ್ಟ್ರಗಳಿಂದ ದಾಖಲೆಯ 270 ಮಂದಿ ಸ್ಪರ್ಧಿಸುತ್ತಿದ್ದಾರೆ. ಇಲ್ಲಿಂದ 20 ಮಂದಿಗೆ ಪ್ಯಾರಾಲಿಂಪಿಕ್ಸ್‌ ಕೋಟಾದಡಿ ಅರ್ಹತೆ ಪಡೆಯುವ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT