ಬೆಂಗಳೂರು: 'ಇದೀಗ ಭಾರತದಲ್ಲಿಯೂ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಕ್ರೀಡಾಪಟುಗಳ ಬಗ್ಗೆ ಸಹಾನುಭೂತಿ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಉತ್ತಮ ಬೆಳವಣಿಗೆ. ಇದು ಆ ಕ್ರೀಡಾಪಟುವಿನ ಪರಿಶ್ರಮವನ್ನು ಗೌರವಿಸಿ, ಮನೋಬಲವನ್ನು ಹೆಚ್ಚಿಸುವ ಕಾರ್ಯವಾಗಿದೆ’–
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಸೂರಿನ ಕ್ರೀಡಾ ಮನಃಶಾಸ್ತ್ರಜ್ಞರಾದ ಡಾ. ಸಂಜನಾ ಕಿರಣ್ ಅವರ ಮಾತುಗಳು ಇವು. ಎರಡು ದಶಕಗಳಿಗಿಂತ ಹೆಚ್ಚಿನ ಅನುಭವ ಅವರಿಗೆ ಇದೆ. 17 ಕ್ರೀಡೆಗಳಲ್ಲಿ ಭಾರತವೂ ಸೇರಿದಂತೆ 11 ದೇಶಗಳ 51 ಮಂದಿ ಒಲಿಂಪಿಯನ್ ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2020–21ರಲ್ಲಿ ಐಪಿಎಲ್‌ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದಲ್ಲಿಯೂ ಕಾರ್ಯನಿರ್ವಹಿಸಿದ್ದರು. ಹಲವು ವರ್ಷಗಳಿಂದ ಅವರು ತಮ್ಮ ಪತಿ, ಟೆನಿಸ್ ಕೋಚ್ ಕಿರಣ್ ನಮಶಿವಾಯ ಅವರೊಂದಿಗೆ ಸಿಂಗಪುರದಲ್ಲಿ ನೆಲೆಸಿದ್ದಾರೆ. 2004ರ ಅಥೆನ್ಸ್ ಒಲಿಂಪಿಕ್ಸ್‌ನಿಂದಲೂ ಅವರು ಒಲಿಂಪಿಯನ್ ಅಥ್ಲೀಟ್‌ಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿ ಅನುಭವದ ಕುರಿತು ‘ಪ್ರಜಾವಾಣಿ’ಗೆ ಪ್ಯಾರಿಸ್‌ನಿಂದ ದೂರವಾಣಿ ಮೂಲಕ ನೀಡಿದ ಸಂದರ್ಶನ ಇಲ್ಲಿದೆ.
ಕ್ರೀಡೆಯಲ್ಲಿ ಮನೋವಿಜ್ಞಾನದ ಪಾತ್ರ ಏನು?
– ಇವತ್ತಿನ ಯುಗದಲ್ಲಿ ಕ್ರೀಡೆ ಕೇವಲ ದೈಹಿಕ ಚಟುವಟಿಕೆಯಾಗಿ ಉಳಿದಿಲ್ಲ. ವಾಣಿಜ್ಯಕ ಅಂಶಗಳೂ ಒಳಗೊಂಡಿರುವುದರಿಂದ ಸ್ಪರ್ಧೆಯ ಮಟ್ಟ ಹೆಚ್ಚಾಗಿದೆ. ಪೈಪೋಟಿಯ ಒತ್ತಡ ತಡೆದುಕೊಳ್ಳುವುದು ಸುಲಭವಲ್ಲ. ಇಂದಿನ ಮಕ್ಕಳಲ್ಲಿ ಆಟದ ಕುರಿತ ಜ್ಞಾನ ಮತ್ತು ತರಬೇತಿಯ ಕುರಿತ ಅರಿವು ಸಾಕಷ್ಟಿದೆ. ಆದರೆ ಪ್ರಮುಖ ಹಂತಗಳಲ್ಲಿ 'ಸ್ವಯಂ ವಿಶ್ವಾಸ’ದ ಕೊರತೆ ಅನುಭವಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಮನೋವಿಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾಪಟುವಿಗೆ ತನ್ನ ಸ್ವಸಾಮರ್ಥ್ಯದ ಕುರಿತು ಸ್ಪಷ್ಟತೆ ಇರಬೇಕು. ಅದರ ಅರಿವು ಮೂಡಿಸುವುದು ನಮ್ಮ ಕೆಲಸ. ಭಾವನಾತ್ಮಕವಾದ ಬೆಂಬಲ ನೀಡುವುದು ಮುಖ್ಯವಾಗುತ್ತದೆ. ಉತ್ತಮ ಸಾಮರ್ಥ್ಯ ಅಥವಾ ಕೊರತೆ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಮನೋಭಾವ ಬೆಳೆಸಬೇಕು.
ಇವತ್ತಿನ ಕಾಲಘಟ್ಟದಲ್ಲಿ ಹದಿಹರೆಯದ (20 ವರ್ಷದೊಳಗಿನವರು) ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಯಶಸ್ಸು ಸಾಧಿಸುತ್ತಿದ್ದಾರೆ. ಅವರು ತಮ್ಮ ಜೀವನದಲ್ಲಿ ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ?
– 12 ರಿಂದ 19 ವರ್ಷದೊಳಗಿನ ಬಾಲಕ, ಬಾಲಕಿಯ ಪ್ರೌಢಾವಸ್ಥೆಗೆ ಬರುತ್ತಾರೆ. ಈ ಹಂತದಲ್ಲಿ ಹಾರ್ಮೋನುಗಳ ಬದಲಾವಣೆಯಾಗುವುದು ಸಹಜ ಪ್ರಕ್ರಿಯೆ. ಇದು ಭಾವನಾತ್ಮಕವಾದ ಕಾಲಘಟ್ಟ. ಇದೇ ಹಂತದಲ್ಲಿ ಲಭಿಸುವ ಉನ್ನತ ಯಶಸ್ಸು ನಿಭಾಯಿಸುವುದು ಬಹಳ ಸೂಕ್ಷ್ಮವಾದ ಕಾರ್ಯ. ಸಾಧನೆಯೆಂದರೆ ಇದಷ್ಟೇ ಅಲ್ಲ. ಇನ್ನೂ ಬಹಳಷ್ಟಿದೆ. ಅದಕ್ಕಾಗಿ ಮುನ್ನಡೆಯಬೇಕು ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಬೇಕು.
ಭಾರತದ ಕ್ರೀಡಾಪಟುಗಳೂ ಸಾಮಾನ್ಯವಾಗಿ ಎದುರಿಸುವ ತೊಂದರೆಗಳು ಯಾವುವು?
ತೊಂದರೆಗಳು ಎನ್ನುವುದಕ್ಕಿಂತ ಸವಾಲುಗಳು ಎಂದು ಹೇಳಬಹುದು. ನಮ್ಮ ದೇಶದಲ್ಲಿ ಗ್ರಾಮೀಣ ಭಾಗದಿಂದ ಕ್ರೀಡೆಗೆ ಬರುವವರ ಸಂಖ್ಯೆ ಹೆಚ್ಚು. ಶಿಕ್ಷಣ, ಉದ್ಯೋಗ ಪಡೆಯುವುದಕ್ಕೂ ಒತ್ತು ಕೊಡಬೇಕು. ಆದರೆ ಶಿಕ್ಷಣ ಮತ್ತು ಕ್ರೀಡೆಗಳೆರಡರ ಮಧ್ಯೆ ಸಮತೋಲನ ಸಾಧಿಸುವ ವ್ಯವಸ್ಥೆ ನಮ್ಮಲ್ಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಇಲ್ಲ. ಇನ್ನೊಂದೆಡೆ ಇಂದಿನ ಮಕ್ಕಳು ಮೊಬೈಲ್ ಫೋನ್ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಜೀವನಶೈಲಿ ಬದಲಾಗಿದೆ. ಮಕ್ಕಳಲ್ಲಿ ಸಹಜವಾದ ಸೃಜನಶೀಲತೆ ಮತ್ತು ಸಹನಶೀಲತೆ ಗುಣಗಳ ಬೆಳವಣಿಗೆಗೆ ಇದು ಅಡ್ಡಿಯಾಗಿದೆ. ಮಕ್ಕಳಲ್ಲಿ ಆತುರ ಭಾವ ಹೆಚ್ಚಾಗಿದೆ. ನಮ್ಮ ಕಾಲದಲ್ಲಿದ್ದ ಜೀವನಶೈಲಿಯಿಂದ ತಾಳ್ಮೆಯನ್ನು ರೂಢಿಸಿಕೊಳ್ಳುವುದು ಸುಲಭವಾಗಿತ್ತು. ಇವತ್ತಿನ ಕ್ರೀಡಾರಂಗದಲ್ಲಿ ಆಟಗಾರರು ಕೂಡ ಪ್ರಾಯೋಜಕತ್ವ ಪಡೆಯಲು ಕೂಡ ಹೆಚ್ಚು ಶ್ರಮಪಡಬೇಕು. ಒಮ್ಮೆ ಸಿಕ್ಕ ಪ್ರಾಯೋಜಕತ್ವ ಉಳಿಸಿಕೊಳ್ಳಬೇಕು. ಅಲ್ಲದೇ ಕ್ರೀಡಾಪಟುಗಳು ಬೆಳೆದ ಪರಿಸರದ ಕ್ರೀಡಾ ಸಂಸ್ಕೃತಿ ಮತ್ತು ಆಡಳಿತ ವ್ಯವಸ್ಥೆಗಳೂ ಪರಿಣಾಮ ಬೀರುತ್ತವೆ. ಅದಕ್ಕೆ ಗಟ್ಟಿ ಮನೋಬಲ ಮತ್ತು ತಾಳ್ಮೆ ಬೇಕು.
ಸಮಾಜದಲ್ಲಿ ಮಾನಸಿಕ ತೊಂದರೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಧೈರ್ಯ ಮಾಡುವವರು ಕಡಿಮೆ. ಕ್ರೀಡಾವಲಯದಲ್ಲಿಯೂ ಇಂತಹದೇ ಹಿಂಜರಿಕೆ ಇದೆಯೇ?
– ದೇಹಕ್ಕೆ ಕಾಯಿಲೆಗಳು ಬಂದಾಗ ವೈದ್ಯರ ಬಳಿ ಹೋಗುತ್ತೇವೆ. ಆದರೆ ಮನಸ್ಸಿಗೆ ತೊಂದರೆಯಾದಾಗ ಹಿಂಜರಿಯುತ್ತೇವೆ. ಮಿದುಳು ಕೂಡ ಒಂದು ಅಂಗ ಎಂದು ನಾವು ಪರಿಗಣಿಸಬೇಕು. ನಮ್ಮನ್ನು ನಿಯಂತ್ರಿಸುವ ಪ್ರಮುಖ ಅಂಗ ಇದು. ಯೋಚನೆಗಳು ಹುಟ್ಟುವುದು ಇಲ್ಲಿಯೇ. ಅವುಗಳನ್ನು ಕಾರ್ಯರೂಪಕ್ಕೆ ತರುವ ನಿರ್ಧಾರ ಕೂಡ ಅಲ್ಲಿಯೇ ರೂಪುಗೊಂಡು ದೇಹ ಅದಕ್ಕೆ ಸ್ಪಂದಿಸುತ್ತದೆ. ಆದ್ದರಿಂದ ದೇಹಕ್ಕೂ ಮನಸ್ಸಿನ ಯೋಚನೆಗಳಿಗೂ ನೇರ ಸಂಬಂಧವಿದೆ. ಯಾವುದೇ ಮಾನಸಿಕ ತುಮುಲಗಳು, ಯೋಚನೆಗಳನ್ನು ಕುಟುಂಬದಲ್ಲಿರುವ ಆಪ್ತರೊಂದಿಗೆ ಹೇಳಿಕೊಳ್ಳಬೇಕು. ಕೇಳುವವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಕ್ರೀಡಾಕ್ಷೇತ್ರದಲ್ಲಿ ಕೋಚ್‌ಗಳು ತಮ್ಮ ಆಟಗಾರರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಅಹವಾಲುಗಳನ್ನು ಕೇಳಿಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗೌಪ್ಯತೆ ಕಾಪಾಡಿಕೊಳ್ಳಬೇಕು. ಸಮಸ್ಯೆ ಗಂಭೀರವೆನಿಸದರೆ ಪರಿಣತರ ನೆರವು ಪಡೆಯಬೇಕು.
ನಿಮ್ಮ ಬಳಿ ನೆರವು ಪಡೆದ ದೊಡ್ಡ ಅಥ್ಲೀಟ್‌ಗಳು ಯಾರು?
– ನನ್ನ ಬಳಿ ಮಾರ್ಗದರ್ಶನ ಪಡೆಯುವವರು ಒಲಿಂಪಿಯನ್ ಮಟ್ಟದ ಕ್ರೀಡಾಪಟುಗಳು. ಅವರು ಮುಕ್ತವಾಗಿರುತ್ತಾರೆ. ತಾವಾಗಿಯೇ ಬಂದು ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇದುವರೆಗೆ ಬಹಳಷ್ಟು ಮಂದಿಯೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಆದರೆ ಅವರ ಹೆಸರುಗಳನ್ನು ಹೇಳುವುದಿಲ್ಲ. ಗೌಪ್ಯತೆ ಕಾಪಾಡುವುದು ನನ್ನ ವೃತ್ತಿಧರ್ಮ. ಮಾರ್ಗದರ್ಶನ ಪಡೆದವರು ಹೇಳಿಕೊಂಡರೆ ಅಭ್ಯಂತರವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.