ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನದೀಮ್ ಜಯದಲ್ಲಿ ಚೋಪ್ರಾ ‘ಪ್ರಭಾವಳಿ’

ಒಲಿಂಪಿಕ್ಸ್‌ ದಾಖಲೆಯೊಡನೆ ಚಿನ್ನ ಗೆದ್ದ ಪಾಕಿಸ್ತಾನದ ಅಥ್ಲೀಟ್‌ l ಭಾರತದ ಜಾವೆಲಿನ್‌ ತಾರೆ ನೀರಜ್‌ಗೆ ಬೆಳ್ಳಿ
ಸಿಡ್ನಿ ಕಿರಣ್
Published : 9 ಆಗಸ್ಟ್ 2024, 23:30 IST
Last Updated : 9 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಪ್ಯಾರಿಸ್‌: ಕೆಲವು ವರ್ಷಗಳಿಂದ ಅರ್ಷದ್ ನದೀಮ್ ಅವರು ನೀರಜ್‌ ಚೋಪ್ರಾ ಅವರ ಪ್ರಸಿದ್ಧಿಯ ಪ್ರಭಾವಳಿಯ ನೆರಳಿನಲ್ಲೇ ಬೆಳೆದವರು. ಅವರಿಬ್ಬರೂ ಆತ್ಮೀಯ ಸ್ನೇಹಿತರು. ನೀರಜ್ ಅವರನ್ನು ತಮ್ಮ ಸ್ಫೂರ್ತಿಯೆಂದು ನದೀಮ್‌ ಪರಿಗಣಿಸಿದವರು ಕೂಡ. 2022ರ ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌  ಆಗಿರಲಿ, ಕಳೆದವರ್ಷ ನಡೆದ ಹಾಂಗ್‌ಝೌ ‌ಏಷ್ಯನ್‌ ಗೇಮ್ಸ್‌ ಆಗಿರಲಿ, ನೀರಜ್‌ ಚಿನ್ನ ಗೆದ್ದರೆ, ಅರ್ಷದ್‌ ಬೆಳ್ಳಿಗೆ ತೃಪ್ತರಾಗುವುದು ಅನಿವಾರ್ಯ ಎಂಬಂತೆ ಇತ್ತು.

ಮಿಂಚುವ ಒಂದು ಒಳ್ಳೆಯ ಸುಸಂದರ್ಭಕ್ಕಾಗಿ 27 ವರ್ಷದ ನದೀಮ್‌ ಹಾತೊರೆಯುತ್ತಿದ್ದರು. ಅದಕ್ಕೆ ಅವರಿಗೆ ದೊರೆತ ವೇದಿಕೆ ಮಾತ್ರ ಕ್ರೀಡಾಲೋಕದಲ್ಲೇ ದೊಡ್ಡದೆನಿಸಿದ ಒಲಿಂಪಿಕ್ಸ್‌. ಸ್ಟೇಡ್‌ ಡಿ ಫ್ರಾನ್ಸ್‌ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿ, ಹಾಲಿ ಚಾಂಪಿಯನ್‌ ಚೋಪ್ರಾ ಅವರಿಂದ ಮೊದಲ ಬಾರಿ ಕ್ರೀಡಾಪ್ರೇಮಿಗಳ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡರು. ದಾಖಲೆ ಸ್ಥಾಪಿಸಿದ ಅವರ ಅಮೋಘ ಎಸೆತಕ್ಕೆ ಉಳಿದ ಸ್ಪರ್ಧಿಗಳು ಬೆಕ್ಕಸಬೆರಗಾದರು.

ತಮ್ಮ ಮೊದಲ ಯತ್ನ ಫೌಲ್‌ ಆದ ಮೇಲೆ ಅರ್ಷದ್‌ ಮರು ಯತ್ನದಲ್ಲಿ ಅಮೋಘವಾಗಿ ಬೀಸಿದ ಜಾವೆಲಿನ್‌ 92.97 ಮೀ.ಗಳಷ್ಟು ದೂರಹಾರಿಬಿತ್ತು. ಆ ಮೂಲಕ ಚಿನ್ನದ ಪದಕದ ಪೈಪೋಟಿಗೆ ನದೀಮ್‌ ಬಹುಬೇಗ ತೆರೆಯೆಳೆದರು. ಅದನ್ನು ದಾಟಬೇಕಾದರೆ ಬಲುದೊಡ್ಡ ಸಾಹಸವನ್ನೇ ನಡೆಸಬೇಕಾಗಿತ್ತು. ನೀರಜ್ ತಮ್ಮೆಲ್ಲಾ ಯತ್ನ ನಡೆಸಿದರು. ಆದರೆ ಎರಡನೇ ಯತ್ನದಲ್ಲಿ ಶ್ರೇಷ್ಠ ಎಸೆತ, 89.45 ಮೀ. ದಾಖಲಾಗಿ, ಅಂತಿಮವಾಗಿ ಬೆಳ್ಳಿಯ ಪದಕ ಗೆದ್ದುಕೊಂಡರು.

ಕ್ವಾಲಿಫಿಕೇಷನ್ ಸುತ್ತಿನ ಮೊದಲ ಎಸೆತದಲ್ಲೇ 89.34 ಮೀ. ಎಸೆದು ಅಮೋಘ ಫಾರ್ಮ್ ಪ್ರದರ್ಶಿಸಿದ್ದ ಚೋಪ್ರಾ, ಸತತ ಎರಡನೇ ಚಿನ್ನ ಗೆಲ್ಲುವ ನಿರೀಕ್ಷೆಗಳು ಇಲ್ಲಿಯೂ ಗರಿಗೆದರಿದ್ದವು. ಆದರೆ ಈ ಬಾರಿ ಮೊದಲ ಯತ್ನದಲ್ಲೇ ‘ಲಕ್ಷ್ಮಣರೇಖೆ’ ದಾಟಿ ಫೌಲ್‌ ಆದರು. ಎಸೆತದ ನಂತರ ತಮ್ಮನ್ನು ನಿಯಂತ್ರಿಸಿಕೊಳ್ಳಲು ಯತ್ನಿಸಿದರೂ ಆಗಲಿಲ್ಲ.

ಅಸಾಧಾರಣ ಪ್ರಯತ್ನವೊಂದರ ಮುಂದೆ 26 ವರ್ಷದ ನೀರಜ್‌ ಕೊನೆಯ ನಾಲ್ಕು ಯತ್ನಗಳಲ್ಲಿ ಫೌಲ್‌ ಆದರು. ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರತ್ತ ತಲೆಬಾಗಿ, ರಜತಕ್ಕೆ ಸಂತುಷ್ಟರಾಗಿರುವುದನ್ನು ಸೂಚಿಸಿದರು.

ಸಿಡ್ನಿ ಮೆಕ್‌ಲಾಗ್ಲಿನ್‌ ಮಿಂಚು:

ದೀಪಗಳ ನಗರಿಯಲ್ಲಿ ಗುರುವಾರ ನದೀಮ್‌ ಮಾತ್ರ ಮಿಂಚಲಿಲ್ಲ. ಮಹಿಳೆಯರ 400 ಮೀ. ಹರ್ಡಲ್ಸ್‌ ಗೆಲ್ಲುವ ನೆಚ್ಚಿನ ಓಟಗಾರ್ತಿಯಾಗಿದ್ದ ಸಿಡ್ನಿ ಮೆಕ್‌ಲಾಗ್ಲಿನ್‌– ಲೆವ್ರೊನ್‌ ಅದಕ್ಕೆ ತಕ್ಕಂತೆ ಈ ಬಾರಿ ಚಿನ್ನ ಗೆದ್ದರು– ಅದೂ ತಮ್ಮದೇ ವಿಶ್ವದಾಖಲೆ ಸುಧಾರಿಸುವ ಮೂಲಕ. ಮೊದಲ 200 ಮೀ. ಮುಗಿಯುವಷ್ಟರಲ್ಲಿ ಅವರು ಸ್ಪಷ್ಟ ಮುನ್ನಡೆ ಪಡೆದಿದ್ದರು. 50.37 ಸೆಕೆಂಡುಗಳಲ್ಲಿ ದೂರ ಕ್ರಮಿಸಿ, ಅನ್ನಾ ಕಾಕ್ರೆಲ್‌ ಮತ್ತು ನಿಕಟ ಸ್ಪರ್ಧಿಯೆನಿಸಿದ್ದ ಫೆಮ್ಕೆ ಬೊಲ್‌ (ನೆದರ್ಲೆಂಡ್ಸ್) ಅವರನ್ನು ಸುಲಭವಾಗಿ ಹಿಂದೆಹಾಕಿದರು.

ಫಲಿತಾಂಶಗಳು:

ಪುರುಷರು: 200 ಮೀ. ಓಟ: ಲೆಸ್ಟಿಲೆ ಟೆಬಾಗೊ (ಬೋಟ್ಸ್‌ವಾನಾ, 19.46 ಸೆ.)–1, ಕೆನೆತ್‌ ಬೆಡ್ನಾರೆಕ್‌ (ಅಮೆರಿಕ, 19.62 ಸೆ.)–2, ನೋವಾ ಲೈಲ್ಸ್‌ (ಅಮೆರಿಕ, 19.70 ಸೆ.)–3.; ಜಾವೆಲಿನ್‌ ಥ್ರೊ: ಅರ್ಷದ್ ನದೀಮ್‌ (ಪಾಕಿಸ್ತಾನ, 92.97 ಮೀ.)–1, ನೀರಜ್‌ ಚೋಪ್ರಾ (ಭಾರತ, 89.45 ಮೀ.)–2, ಆ್ಯಂಡರ್ಸನ್‌ ಪೀಟರ್ಸ್‌ (ಗ್ರೆನೆಡಾ, 88.54 ಮೀ.)–3.

ಮಹಿಳೆಯರು: 400 ಮೀ. ಹರ್ಡಲ್ಸ್‌: ಸಿಡ್ನಿ ಮೆಕ್‌ಲಾಫ್ಲಿನ್‌ ಲೆವ್ರೊನ್ (ಅಮೆರಿಕ, 50.37 ಸೆ., ವಿಶ್ವದಾಖಲೆ, ಹಳೆಯದು, 50.65, 2024ರ ಜೂನ್‌ನಲ್ಲಿ)–1, ಅನ್ನಾ ಕಾಕ್ರೆಲ್‌ (ಅಮೆರಿಕ, 51.87 ಸೆ.)–2, ಫೆಮ್ಕೆ ಬೊಲ್ (ನೆದರ್ಲೆಂಡ್ಸ್, 52.15 ಸೆ.).

ಲಾಂಗ್‌ಜಂಪ್‌: ತಾರಾ ಡೇವಿಸ್‌ ವುಡ್‌ಹಾಲ್ (ಅಮೆರಿಕ, 7.10 ಮೀ.)–1, ಮಲೈಕಾ ಮಿನಾಂಬೊ (ಜರ್ಮನಿ, 6.98 ಮೀ.)–2, ಜಾಸ್ಮಿನ್ ಮೂರ್ (ಅಮೆರಿಕ, 6.96 ಮೀ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT