ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀವು ಸೋತಿಲ್ಲ, ಆದರೂ ಸೋಲಿಸಲಾಗಿದೆ: ಕುಸ್ತಿ ಅಖಾಡ ತೊರೆದ ವಿನೇಶ್‌ಗೆ ಬಜರಂಗ್

Published : 8 ಆಗಸ್ಟ್ 2024, 11:18 IST
Last Updated : 8 ಆಗಸ್ಟ್ 2024, 11:18 IST
ಫಾಲೋ ಮಾಡಿ
Comments

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ಸೂಚಿಸಿರುವ ಟೊಕಿಯೊ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ, 'ನೀವು ಸೋತಿಲ್ಲ, ಆದರೂ ಸೋಲಿಸಲಾಗಿದೆ' ಎಂದು ಸಂತೈಸಿದ್ದಾರೆ.

100ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಫೈನಲ್ ಆಡುವ ಅವಕಾಶದಿಂದ ಕುಸ್ತಿಪಟು ವಿನೇಶ್ ವಂಚಿತರಾಗಿದ್ದರು. ಇದರ ಬೆನ್ನಲ್ಲೇ ಕುಸ್ತಿಗೆ ವಿದಾಯ ಸಲ್ಲಿಸಿದ್ದಾರೆ.

ಇದಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಬಜರಂಗ್, 'ನೀವು ಸೋತಿಲ್ಲ, ಆದರೂ ಸೋಲಿಸಲಾಗಿದೆ. ನಮ್ಮ ಪಾಲಿಗೆ ನೀವು ಎಂದೆಂದಿಗೂ ಚಾಂಪಿಯನ್ ಆಗಿದ್ದೀರಿ. ಭಾರತದ ಪುತ್ರಿಯಾಗಿರುವ ನೀವು ನಮ್ಮ ದೇಶದ ಹೆಮ್ಮೆ' ಎಂದು ಹೇಳಿದ್ದಾರೆ.

ಮಗದೊಂದು ಪೋಸ್ಟ್‌ನಲ್ಲಿ ವಿನೇಶ್ ಅವರ ಹೋರಾಟದ ವಿಡಿಯೊವನ್ನು ಹಂಚಿಕೊಂಡಿರುವ ಬಜರಂಗ್, 'ದೇವರು ನಿಮ್ಮಂತಹ ಮಗಳನ್ನು ಪ್ರತಿ ಮನೆಗೂ ನೀಡಲಿ. ನೀವು ಎಂದೆಂದಿಗೂ ಕುಸ್ತಿಯ ದಿಗ್ಗಜೆಯಾಗಿ ಗುರುತಿಸಲ್ಪಡುವಿರಿ' ಎಂದು ಹೇಳಿದ್ದಾರೆ.

ದೇಶದ ಪ್ರತಿಯೊಬ್ಬ ಹೆಣ್ಣು ಮಗಳ ಸೋಲು...

ವಿನೇಶ್ ಫೋಗಟ್ ಅನರ್ಹಗೊಂಡಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಸಾಕ್ಷಿ ಮಲಿಕ್, 'ಇದು ನಿಮ್ಮ ಮಾತ್ರ ಸೋಲು ಅಲ್ಲ. ನೀವು ಹೋರಾಡಿದ ದೇಶದ ಪ್ರತಿಯೊಬ್ಬ ಹೆಣ್ಣು ಮಗಳ ಸೋಲಾಗಿದೆ' ಎಂದು ಹೇಳಿದ್ದಾರೆ.

'ಇದು ಇಡೀ ದೇಶಕ್ಕೆ ಎದುರಾದ ಸೋಲು. ಇಡೀ ದೇಶವೇ ನಿಮ್ಮೊಂದಿಗೆ ಇದೆ. ಓರ್ವ ಕ್ರೀಡಾಪಟುವಾಗಿ ನಿಮ್ಮ ಹೋರಾಟಕ್ಕೆ ಸೆಲ್ಯೂಟ್ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.

ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ಫೋಗಟ್ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಾಗ ಅವರ ವಿರುದ್ಧ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದ ಧರಣಿಯಲ್ಲಿ ವಿನೇಶ್ ಮುಂಚೂಣಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT