ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಒಲಿಂಪಿಯಾಡ್‌ | ಚಿನ್ನದ ಪದಕ ಗೆದ್ದ ತಂಡಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

Published : 23 ಸೆಪ್ಟೆಂಬರ್ 2024, 2:48 IST
Last Updated : 23 ಸೆಪ್ಟೆಂಬರ್ 2024, 2:48 IST
ಫಾಲೋ ಮಾಡಿ
Comments

ನವದೆಹಲಿ: ಚೆಸ್‌ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಗಮನಾರ್ಹ ಸಾಧನೆಯು ಭಾರತದ ಕ್ರೀಡಾ ಪಥದಲ್ಲಿ ಹೊಸ ಅಧ್ಯಾಯವನ್ನು ನಿರ್ಮಿಸಿದೆ ಎಂದು ಶ್ಲಾಘಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನಮ್ಮ ಚೆಸ್‌ ತಂಡಗಳು 45ನೇ ಚೆಸ್‌ ಒಲಿಂಪಿಯಾಡ್‌ ಅನ್ನು ಗೆಲ್ಲುವ ಮೂಲಕ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿವೆ. ಭಾರತ ಚೆಸ್‌ ಒಲಿಂಪಿಯಾಡ್‌ನ ಓಪನ್ ಮತ್ತು ಮಹಿಳೆಯರ ವಿಭಾಗ ಎರಡರಲ್ಲೂ ಚಿನ್ನ ಗೆದ್ದಿದೆ. ಪುರುಷರ ಮತ್ತು ಮಹಿಳೆಯರ ಚೆಸ್‌ ತಂಡಗಳಿಗೆ ಅಭಿನಂದನೆಗಳು. ಈ ಗಮನಾರ್ಹ ಸಾಧನೆಯು ಭಾರತದ ಕ್ರೀಡಾ ಪಥದಲ್ಲಿ ಹೊಸ ಅಧ್ಯಾಯವನ್ನು ನಿರ್ಮಿಸಿದೆ. ಈ ಯಶಸ್ಸು ಚೆಸ್‌ ಉತ್ಸಾಹಿಗಳಿಗೆ ಆಟದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸಲಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನ ಅಂತಿಮ ಸುತ್ತಿನಲ್ಲಿ ಎದುರಾಳಿಗಳನ್ನು ಸೋಲಿಸಿ ಪುರುಷರ ಮತ್ತು ಮಹಿಳೆಯರ ತಂಡಗಳು ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದು, ತಮ್ಮ ಚೊಚ್ಚಲ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. ಈ ಮೂಲಕ ಭಾನುವಾರ ನಡೆದ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ.

ಚೆಸ್‌ ಒಲಿಂಪಿಯಾಡ್‌ನ ಒಂದೇ ಆವೃತ್ತಿಯಲ್ಲಿ ಚೀನಾ ಮತ್ತು ಸೋವಿಯತ್ ಒಕ್ಕೂಟ ಮಾತ್ರ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿತ್ತು.

ಒಲಿಂಪಿಯಾಡ್‌ನಲ್ಲಿ ಭಾರತ ಓಪನ್ ವಿಭಾಗದಲ್ಲಿ 2014ರಲ್ಲಿ (ನಾರ್ವೆಯ ಟ್ರೊಮ್ಸೊ) ಮತ್ತು 2022ರಲ್ಲಿ (ಚೆನ್ನೈ) ಕಂಚಿನ ಪದಕ ಗೆದ್ದುಕೊಂಡಿದ್ದು, ಮಹಿಳಾ ತಂಡ 2022ರ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು ಇದುವರೆಗಿನ ಪ್ರಮುಖ ಸಾಧನೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT