ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸೊರಗಿದ ಶ್ರೀಮಂತ ಕುಸ್ತಿ ಪರಂಪರೆ

ನಿರ್ಲಕ್ಷ್ಯಕ್ಕೆ ಒಳಗಾದ ಗರಡಿ ಮನೆಗಳು: ಕುಸ್ತಿಗೆ ಸಿಗದ ಪ್ರೋತ್ಸಾಹ
Last Updated 27 ಫೆಬ್ರುವರಿ 2023, 4:05 IST
ಅಕ್ಷರ ಗಾತ್ರ

ಧಾರವಾಡ: ಬದಲಾದ ಜೀವನ ಶೈಲಿ ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಗರಡಿ ಮನೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಒಂದೆಡೆಯಾದರೇ, ಮತ್ತೊಂದೆಡೆ ಸರ್ಕಾರಗಳಿಂದ ಕುಸ್ತಿ ಕ್ರೀಡೆಗೆ ಸಿಗಬೇಕಾದ ಉತ್ತೇಜನ, ಪ್ರೋತ್ಸಾಹ ನಿರೀಕ್ಷಿತ ಮಟ್ಟದಲ್ಲಿ ಸಿಗದೇ ಇರುವುದು ಯುವಕರ ಆಸಕ್ತಿ ಕುಗ್ಗಿಸಿದೆ.

ಸರ್ಕಾರದ ನಿರಾಸಕ್ತಿ ಪರಿಣಾಮ ಗರಡಿ ಮನೆಗಳು ಕಾಲಗರ್ಭ ಸೇರುವ ಸ್ಥಿತಿ ತಲುಪಿವೆ. ಬಿರುಕು ಬಿಟ್ಟಿರುವ ಗರಡಿ ಮನೆಯ ಗೋಡೆಗಳು ಬೀಳುವ ಹಂತದಲ್ಲಿವೆ. ಅವುಗಳನ್ನು ಕಂಡು ಹಿರಿಯ ಪೈಲ್ವಾನರು ಮರುಗುತ್ತಿದ್ದಾರೆ. ಹಿಂದೆ ಕುಸ್ತಿ ಆಡುವುದೆಂದರೆ ಒಂದು ರೀತಿಯ ಪ್ರತಿಷ್ಠೆಯ ವಿಷಯವಾಗಿತ್ತು. ಆರೋಗ್ಯದ ದೃಷ್ಟಿಯಿಂದಲೂ ಗರಡಿ ಮನೆಗಳು ಪ್ರಮುಖ ಪಾತ್ರ ವಹಿಸಿದ್ದವು. ಆದರೆ, ಇಂದಿನ ಮಕ್ಕಳಿಗೆ ಗರಡಿ ಮನೆಗಳ ಮಹತ್ವ ತಿಳಿಯದಾಗಿದೆ.

ಯುವಕರು ಹಲವು ದುಶ್ಚಟಗಳಿಗೆ ಬಲಿಯಾಗಿ ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆ. ಮೊಬೈಲ್ ಗೀಳಿಗೆ ಒಳಗಾಗಿ, ದೇಶಿಯ ಆಟಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಕುಸ್ತಿಯಲ್ಲಿ ಎಷ್ಟೇ ಹೆಸರು ಮಾಡಿದರೂ, ಅಂಥವರಿಗೆ ಸಿಗಬೇಕಾದ ಪ್ರೋತ್ಸಾಹ, ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಯುವಕರ ಆಸಕ್ತಿ ಕುಗ್ಗಿಸಿದೆ ಎಂಬುದು ಹಿರಿಯ ಕುಸ್ತಿ ಪೈಲ್ವಾನರ ಬೇಸರದ ನುಡಿಗಳು.

ಜಿಲ್ಲೆಯಲ್ಲಿ 15 ನೋಂದಣಿಯಾದ ಗರಡಿ ಮನೆಗಳಿದ್ದರೇ, 510ಕ್ಕೂ ಹೆಚ್ಚು ನೋಂದಣಿ ಆಗದ ಗರಡಿ ಮನೆಗಳಿವೆ. ಆದರೆ ಇವುಗಳಲ್ಲಿ ಬಹುತೇಕವು ಮುರಿದು ಬೀಳುವ ಸ್ಥಿತಿಯಲ್ಲಿವೆ. ಸಂಬಂಧಿಸಿದ ಅಧಿಕಾರಿಗಳು ಅಳಿವಿನಂಚಿನಲ್ಲಿರುವ ಗರಡಿ ಮನೆಗಳ ಉಳಿವಿಗೆ ಸರ್ಕಾರದ ಮಟ್ಟದಲ್ಲಿ ಅನುದಾನ ಪಡೆದು, ಕ್ರಮಕ್ಕೆ ಮುಂದಾಗಬೇಕು ಎಂಬುದು ಅವರ ಆಗ್ರಹ.

2014-15 ರಿಂದ 2018–19ರ ವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹೊಸದಾಗಿ 15 ಗರಡಿ ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹1.10 ಕೋಟಿ ಅನುದಾನ ಒದಗಿಸಿದೆ. ಆದರೆ, ಈಗಾಗಲೇ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಇರುವ ಗರಡಿ ಮನೆಗಳು ಪಾಳು ಬಿದ್ದಿದ್ದು, ಅವುಗಳ ಉಳಿವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ, ತಾಲ್ಲೂಕು, ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಮೀಸಲು ಅನುದಾನ ಇದ್ದರೂ, ಅದನ್ನು ಬಳಸಿ ಪುನಃಶ್ವೇತನ ಗೊಳಿಸುವ ಕೆಲಸವಾಗದೇ ಇರುವುದು ನೋವಿನ ಸಂಗತಿ.

ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದಿದ್ದನ್ನು ಹೊರತುಪಡಿಸಿದರೆ, ಕುಸ್ತಿ ಉತ್ತೇಜಿಸಲು ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಹೀಗಾಗಿ ಕುಸ್ತಿ ಕ್ರೀಡೆಯಲ್ಲಿ ಮುಂದುವರಿದರೇ ತಮ್ಮ ಮಕ್ಕಳಿಗೆ ಭವಿಷ್ಯ ಇಲ್ಲ ಎಂಬ ಕಾರಣಕ್ಕೆ ಪಾಲಕರು ಮಕ್ಕಳನ್ನು ಕಳುಹಿಸಲು ಆಸಕ್ತಿ ತೋರುತ್ತಿಲ್ಲ.

‘ಈಗಾಗಲೇ ಗ್ರಾಮಗಳಲ್ಲಿರುವ ಪ್ರತಿ ಗರಡಿ ಮನೆಗಳಿಗೆ ಒಬ್ಬ ಮಾಜಿ ಪೈಲ್ವಾನರನ್ನು ನೇಮಕ ಮಾಡಿ, ಆ ಮೂಲಕ ಕುಸ್ತಿಯ ಇತಿಹಾಸ ಮರುಕಳಿಸುವ ಕೆಲಸಕ್ಕೆ ಸರ್ಕಾರ ಮುಂದಡಿ ಇಡಬೇಕಿದೆ. ನೇಮಕ ಮಾಡಿದ ಮಾಜಿ ಪೈಲ್ವಾನರಿಗೆ ತಿಂಗಳಿಗೆ ಒಂದಿಷ್ಟು ಪ್ರೋತ್ಸಾಹ ಧನ ನೀಡಿ, ಗ್ರಾಮದ ಯುವಕರನ್ನು ಕುಸ್ತಿ ಹಾಗೂ ಗರಡಿ ಮನೆಯತ್ತ ಸೆಳೆಯಲು ಉತ್ತೇಜನ ನೀಡಬೇಕು. ಎರಡು ತಿಂಗಳಿಗೊಮ್ಮೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿ, ಪ್ರೋತ್ಸಾಹ ನೀಡಬೇಕು’ ಎಂದು ಮಾಜಿ ಪೈಲ್ವಾನ್ ರೆಹಮಾನ ಹೋಳಿ ತಿಳಿಸಿದರು.

ಸರ್ಕಾರದ ಎಲ್ಲ ನೇಮಕಾತಿಯಲ್ಲಿ ಕ್ರೀಡಾ ಕೋಟಾದಡಿ ಕ್ರೀಡಾಪಟುಗಳನ್ನು ಸರ್ಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅವಕಾಶ ಇದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಕುಸ್ತಿ ಕಲಿಸಲು ಆಸಕ್ತಿ ವಹಿಸಬೇಕು. ಸರ್ಕಾರಗಳು ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಹೆಚ್ಚಿನ ಅನುದಾನ ಒದಗಿಸುವ ಮೂಲಕ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹಧನ ನೀಡುವ ಕೆಲಸವಾಗಬೇಕು.

ಜಾಗ ಅತಿಕ್ರಮಣ

ಉಪ್ಪಿನಬೆಟಗೇರಿ: ರಾಜ್ಯದಲ್ಲಿ ನಡೆಯುವ ವಿವಿಧ ಪಂದ್ಯಾವಳಿಗಳಲ್ಲಿ ಜಯಗಳಿಸಿದ ಸಾಕಷ್ಟು ಪೈಲ್ವಾನರು ಈ ಭಾಗದಲ್ಲಿದ್ದಾರೆ. ಲೋಕೂರ, ಶಿಬಾರಗಟ್ಟಿ, ಕಲ್ಲೂರ, ಗರಗ, ಹೆಬ್ಬಳ್ಳಿ, ಅಮ್ಮಿನಬಾವಿ, ಪುಡಕಲಕಟ್ಟಿ, ಕರಡಿಗುಡ್ಡ ಸುತ್ತಲಿನ ಗ್ರಾಮಗಳಲ್ಲಿ ಗರಡಿ ಮನೆಗಳು ಇದ್ದು, ಅಲ್ಲಿ ಮೂಲಸೌಕರ್ಯಗಳಿಲ್ಲದೆ ಕುಸ್ತಿ ಪಟುಗಳು ಶಹರಗಳಿಗೆ ತೆರಳಿ ತರಬೇತಿ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ಏಳು ಗರಡಿಮನೆಗಳಿವೆ. ಅವುಗಳಲ್ಲಿ ಕೆಲವು ಗರಡಿ ಮನೆಗಳನ್ನು ಕೆಡವು ಆ ಜಾಗದಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನೂ ಕೆಲವೆಡೆ ಗರಡಿ ಮನೆಗಳು ಇದ್ದೂ, ಇಲ್ಲದಂತಾಗಿದೆ. ಕೆಲ ಗರಡಿ ಮನೆಗಳಲ್ಲಿ ಕಲ್ಲು, ಇಟ್ಟಿಗೆ, ನೀರಿನ ಡ್ರಂಗಳು, ಕಟ್ಟಡ ಸಾಮಗ್ರಿ ಇಡುವ ಮೂಲಕ ಆಕ್ರಮಿಸಲಾಗುತ್ತಿದೆ.

‘ಪಾಳುಬಿದ್ದ ಜಾಗ ಹಾಗೂ
ಅತಿಕ್ರಮಣವಾದ ಗರಡಿ ಮನೆಗಳನ್ನು ಪುನಃ ನಿರ್ಮಾಣ ಕಾರ್ಯ ಕೈಗೊಂಡು ಯುವಕರಿಗೆ ಕುಸ್ತಿಗಳಲ್ಲಿ ತರಬೇತಿ ಪಡೆಯಲು ಹಾಗೂ ಪ್ರೊತ್ಸಾಹಿಸಲು ಅನುಕೂಲ ಕಲ್ಪಿಸಬೇಕು’ ಎಂದು ಸ್ಥಳೀಯ ಮಾಜಿ ಪೈಲ್ವಾನ್‌ ನಿಂಗಪ್ಪ ದಿವಟಗಿ ತಿಳಿಸಿದರು.

ಅನುದಾನದ ಕೊರತೆ

ಕುಂದಗೋಳ/ ಗುಡಿಗೇರಿ: ತಾಲ್ಲೂಕಿನಲ್ಲಿ ಒಟ್ಟು 24 ಗರಡಿ ಮನೆಗಳಿವೆ. ಇವುಗಳಲ್ಲಿ ಪ್ರಮುಖವಾಗಿ ರಾಮನಕೋಪ್ಪ, ಯರಗುಪ್ಪಿ, ಕೂಬಿಹಾಳ, ಇಂಗಳಗಿ, ರೊಟ್ಟಿಗವಾಡ, ಕಮಡೋಳ್ಳಿ, ಹಿರೆಗುಂಜಳದಲ್ಲಿ ಗರಡಿ ಮನೆಗಳಿವೆ.

ಕಳೆದ ಎರಡು ದಶಕದ ಹಿಂದೆ ಗರಡಿ ಮನೆಯಲ್ಲಿ ರಾತ್ರಿ ವೇಳೆ ತಾಲೀಮು ನೋಡುವುದೇ ಒಂದು ಸೊಬಗಾಗಿತ್ತು. ಆದರೆ ಇಂದು ಗರಡಿ ಮನೆಗಳು ಬಿಕೋ ಎನ್ನುತ್ತಿವೆ. ಗುಡಿಗೇರಿ ಗ್ರಾಮದ ಚೌವಡಿ ಬಳಿ ಇರುವ ಗರಡಿ ಮನೆ ಹಾಗೂ ಗೋಣಿಬಸವೇಶ್ವರ ಗುಡಿ ಬಳಿಯ ಗರಡಿ ಮನೆಗಳು ಸರ್ಕಾರ ದುರಸ್ತಿ ಮಾಡಿಸಿದೆ. ಆದರೆ ಯಾರೂ ಇದರತ್ತ ಮುಖ ಮಾಡುತ್ತಿಲ್ಲ.

ಈ ಕಾಲದ ಯುವಕರಿಗೆ ಗರಡಿ ಮನೆ ಕುರಿತು ಆಸಕ್ತಿ ಇಲ್ಲ. ಇಲ್ಲಿರುವ ಒಂದು ಸಾಧನವನ್ನು ಎತ್ತಲೂ ಆಗದಷ್ಟು ದುರ್ಬಲರಾಗಿದ್ದಾರೆ. ಯುವಕರಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಪೈಲ್ವಾನ ಮಹೇಂದ್ರ ಅಕ್ಕಿ ಹೇಳಿದರು.

ಬಡವಾದ ದೇಶಿ ಕ್ರೀಡೆ

ಹುಬ್ಬಳ್ಳಿ: ‘ಒಂದು ಕಾಲದಲ್ಲಿ ಓಣಿ–ಓಣಿಗೂ ಸಿಗುತ್ತಿದ್ದ ಗರಡಿ ಮನೆಗಳ ಸಂಖ್ಯೆ ಈಗ ಕುಸಿದಿದೆ. ಆಧುನಿಕತೆಯ ಪ್ರಭಾವ, ಯುವಜನರ ಉತ್ಸಾಹ, ಆರ್ಥಿಕ ನೆರವಿನ ಕೊರತೆಯಿಂದ ಬೆರಳೆಣಿಕೆ ಸಂಖ್ಯೆಗೆ ತಗ್ಗಿದೆ. ಇದರಿಂದ ದೇಶಿ ಕ್ರೀಡೆ ಬಡವಾಗಿದೆ’ ಇದು ನಗರದ ಗರಡಿ ಮನೆಯೊಂದರ ಪೈಲ್ವಾನರೊಬ್ಬರ ಕಳವಳ.

‘ದಶಕಗಳ ಹಿಂದಿನ ಹುಬ್ಬಳ್ಳಿಯಲ್ಲಿ 40ಕ್ಕೂ ಹೆಚ್ಚು ಗರಡಿ ಮನೆಗಳಿದ್ದವು. ಈಗ ಹೆಚ್ಚೆಂದರೆ ನಾಲ್ಕೈದು ಸಕ್ರಿಯವಾಗಿ ಉಳಿದಿವೆ. ಇತ್ತೀಚೆಗೆ ಮ್ಯಾಟ್‌ ಕುಸ್ತಿಗೆ ಆದ್ಯತೆ ಸಿಕ್ಕಿದ್ದರಿಂದಲೂ ಮಣ್ಣಿನ ಕುಸ್ತಿಯ ಒಲವು ಕಡಿಮೆಯಾಗಿದೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಕುಸ್ತಿ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ಶಾಸ್ತ್ರಿ.

‘ದಶಕಗಳಿಂದ ನಮ್ಮ ಗರಡಿ ಮನೆಯಲ್ಲಿ ಕುಸ್ತಿ ತಾಲೀಮು ನಡೆಯತ್ತಿದೆ. ಈಗಲೂ ನಮಲ್ಲಿ 25 ಕೆ.ಜಿಯಿಂದ 80 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುವ 20 ಯುವ ಪೈಲ್ವಾನರಿದ್ದಾರೆ’ ಎಂದು ಉಣಕಲ್‌ನ ವಾಯುಪುತ್ರ ಸ್ಫೋರ್ಟ್ಸ್‌ ಫೌಂಡೇಷನ್‌ನ ಮುಖ್ಯಸ್ಥ ಅಶೋಕ ಚಿಲ್ಲನ್ನವರ ಹೇಳುತ್ತಾರೆ.

ಅವರು ತಮ್ಮ ಅಖಾಡದಲ್ಲಿ ಮಕ್ಕಳಿಗೆ ಮಣ್ಣು ಹಾಗೂ ಮ್ಯಾಟ್‌ ಎರಡರ ಮೇಲೂ ಅಭ್ಯಾಸ ಮಾಡಿಸುವುದು ವಿಶೇಷ. ‘ಹುಬ್ಬಳ್ಳಿ ತಾಲ್ಲೂಕಿನ ಪೈಕಿ ರಾಯನಾಳ, ಗಾಮನಗಟ್ಟಿಯಲ್ಲೂ ಕುಸ್ತಿ ಅಖಾಡಗಳು ಸಕ್ರಿಯವಾಗಿವೆ. ಹುಬ್ಬಳ್ಳಿಯಲ್ಲೂ ಈ ದೇಶಿ ಕ್ರೀಡೆಗೆ ಸ್ಕೋಪ್‌ ಇದೆ. ಮಕ್ಕಳಿಗೆ ಕಲಿಯಲು ಬೇಕಾದ ವಸತಿ ವ್ಯವಸ್ಥೆ ಸಿಕ್ಕರೆ, ನೆರೆಯ ಹಳ್ಳಿಗಳಿಂದ ಕನಿಷ್ಠ 150 ಮಕ್ಕಳು ಕುಸ್ತಿ ಕಲಿಯಲು ಬರುತ್ತಾರೆ’ ಎಂಬುದು ಅವರ ವಿಶ್ವಾಸ.

ಪಾಳುಬಿದ್ದ ಗರಡಿ ಮನೆಗಳು

ಕಲಘಟಗಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಗರಡಿ ಮನೆಗಳು ಅನುದಾನದ ಕೊರತೆ ಹಾಗೂ ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸ್ಥಿತಿಯಲ್ಲಿವೆ.

‘ಹಲವು ಕಡೆ ಗರಡಿ ಮನೆ ಇಲ್ಲದೆ ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ ಕುಸ್ತಿ ಆಡುವ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಪ್ರತಿ ಗ್ರಾಮಕ್ಕೆ ಗರಡಿ ಮನೆ ನಿರ್ಮಾಣ ಹಾಗೂ ಇದ್ದ ಗರಡಿ ಮನೆ ನಿರ್ವಹಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕಿನ ದ್ಯಾವನಕೊಂಡ ಗ್ರಾಮದ ಮಾಜಿ ಕುಸ್ತಿಪಟು ಶಂಕರಗೌಡ ಭಾವಿಕಟ್ಟಿ ಒತ್ತಾಯಿಸಿದರು.

ಶಿಥಿಲಾವಸ್ಥೆಯಲ್ಲಿರುವ ‘ಅಖಾಡಗಳು’

ಅಳ್ನಾವರ: ಪಟ್ಟಣದ ಮಧ್ಯ ಭಾಗದಲ್ಲಿರುವ ಏಕೈಕ ಗರಡಿ ಮನೆ ಆರು ದಶಕಗಳ ಹಿಂದೆ ಕಟ್ಟಲಾಗಿದೆ. ಮಳೆಗಾಲದಲ್ಲಿ ಚಾವಣಿ ಸೋರುತ್ತದೆ. ಒಳಗಡೆ ಸರಿಯಾದ ವ್ಯವಸ್ತೆ ಇಲ್ಲದೆ ಯುವ ಕುಸ್ತಿ ಪಟುಗಳು ಈ ಆಟದಿಂದ ದೂರ ಸರಿಯುತ್ತಿದ್ದಾರೆ ಎಂದು ಹಿರಿಯರು ಹೇಳುತ್ತಾರೆ.

ಈಚೆಗೆ ಪಟ್ಟಣದಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಆಟಗಳು ಯುವಕರಲ್ಲಿ ಹೊಸ ಆಶಾ ಭಾವನೆ ಮೂಡಿಸಿವೆ. ಆದರೆ ಹಳೆಯದಾದ ಗರಡಿ ಮನೆ ಸಂಪೂರ್ಣ ತೆರವುಗೊಳಿಸಿ ಹೊಸ ಕಟ್ಟಡ ಆಗಲಿ ಎಂಬ ಬೇಡಿಕೆಗೆ ಇನ್ನೂ ಮನ್ನಣೆ ದೊರೆತಿಲ್ಲ.

ಇಲ್ಲಿಯೇ ತಾಲೀಮು ಆರಂಭಿಸಿ ನಂತರ ಕೊಲ್ಹಾಪುರದಲ್ಲಿ ತಾಲೀಮ ಮಾಡಿ 1974ರಲ್ಲಿ ಕರ್ನಾಟಕ ಕುಮಾರ ಪ್ರಶಸ್ತಿ ಪಡೆದ ಶಂಕರ ಅಷ್ಟೇಕರ, ಅನ್ನೂ ಕಲ್ಯಾಣಕರ, ಮಾರುತಿ ಪೇಜೊಳ್ಳಿ, ಶಿವಾಜಿ ಜನಕಾಟಿ ಮುಂತಾದ ಮಹಾನ ಪೈಲ್ವಾನರು ಕುಸ್ತಿ ಹಿಡಿದ ಕಣ ಇಂದು ಸೌಲಭ್ಯಗಳ ಕೊರತೆಯಿಂದ ತನ್ನತನ ಕಳೆದುಕೊಂಡಿದೆ.

ಪ್ರಜಾವಾಣಿ ತಂಡ: ರಾಯಸಾಬ ಅನಸರಿ, ರಮೇಶ ಓರಣಕರ, ಗಿರೀಶ ಘಾಟಗೆ, ವಾಸುದೇವ ಮುರಗಿ, ಕಲ್ಲಪ್ಪ ಮ. ಮಿರ್ಜಿ, ರಾಜಶೇಖರ ಸುಣಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT