ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಜರ್‌ ಬಿನ್ನಿಗೆ ಬಿಸಿಸಿಐ ಚುಕ್ಕಾಣಿ: ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ

ಪದಾಧಿಕಾರಿಗಳ ಅವಿರೋಧ ಆಯ್ಕೆ ಖಚಿತ
Last Updated 12 ಅಕ್ಟೋಬರ್ 2022, 1:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತವು 1983ರಲ್ಲಿ ಚೊಚ್ಚಲ ಏಕದಿನ ಕ್ರಿಕೆಟ್‌ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಆಲ್‌ರೌಂಡರ್ ರೋಜರ್‌ ಬಿನ್ನಿ ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿಯ ಚುಕ್ಕಾಣಿ
ಹಿಡಿಯಲಿದ್ದಾರೆ.

ಕಳೆದ ಮೂರು ವರ್ಷಗಳಿಂದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಇದೇ 18 ರಂದು ಅಧಿಕಾರವನ್ನು ಬಿನ್ನಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಸರ್ವಸದ್ಯಸರ ಸಭೆಯಲ್ಲಿ ಅವರು ಮಂಡಳಿಯ 36ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ ಕರ್ನಾಟಕದ ಎರಡನೇ ವ್ಯಕ್ತಿ ಎಂಬ ಗೌರವ ಬಿನ್ನಿ ಅವರದಾಗಲಿದೆ. ಈ ಹಿಂದೆ ಎಂ.ಚಿನ್ನಸ್ವಾಮಿ ಅವರು 1977 ರಿಂದ 1980ರ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಜಯ್‌ ಶಾ ಸತತ ಎರಡನೇ ಅವಧಿಗೆ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಐಸಿಸಿ ಮಂಡಳಿಯಲ್ಲಿ ಅವರು ಗಂಗೂಲಿ ಅವರ ಸ್ಥಾನದಲ್ಲಿ ಭಾರತದ ಪ್ರತಿನಿಧಿಯಾಗುವ ಸಾಧ್ಯತೆಯೂ ಇದೆ.

ಕಳೆದ ಒಂದು ವಾರದ ಅವಧಿಯಲ್ಲಿ ತೆರೆಮರೆಯಲ್ಲಿ ನಡೆದ ಚರ್ಚೆ, ಮಾತುಕತೆಯ ಬಳಿಕ ಬಿಸಿಸಿಐನ ಎಲ್ಲ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ.

‘ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದ್ದು, ಅ.18 ರಂದು ಚುನಾವಣೆ ಇರುವುದಿಲ್ಲ. ಮಂಡಳಿಯ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳನ್ನು ನಿರ್ಧರಿಸುವಲ್ಲಿ ಕೇಂದ್ರದ ಪ್ರಭಾವಿ ಸಚಿವರೊಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ರಾಜೀವ್‌ ಶುಕ್ಲಾ ಅವರು ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರ ತಮ್ಮ,ಹಾಲಿ ಖಜಾಂಚಿಯಾಗಿರುವ ಅರುಣ್‌ ಸಿಂಗ್‌ ಧುಮಾಲ್‌ ಐಪಿಎಲ್‌ ಮುಖ್ಯಸ್ಥರಾಗಲಿದ್ದಾರೆ. ಬ್ರಿಜೇಶ್‌ ಪಟೇಲ್‌ ಅವರ ಅಧಿಕಾರದ ಅವಧಿಯು ಕೊನೆಗೊಳ್ಳಲಿದೆ.

ಮಹಾರಾಷ್ಟ್ರದ ಬಿಜೆಪಿ ಮುಖಂಡ ಆಶೀಶ್‌ ಶೆಲಾರ್‌ ನೂತನ ಖಜಾಂಚಿಯಾಗಲಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮ ಅವರ ಆಪ್ತರಾಗಿರುವ ದೇವಜಿತ್‌ ಸೈಕಿಯಾ, ಜಂಟಿ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

67 ವರ್ಷದ ಬಿನ್ನಿ ಅವರು ಬಿಸಿಸಿಐನಲ್ಲಿ ಪ್ರಮುಖ ಹುದ್ದೆ ಅಲಂಕರಿಸಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಬಿಸಿಸಿಐ ಸರ್ವಸದಸ್ಯರ ಸಭೆಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು (ಕೆಎಸ್‌ಸಿಎ) ಕಾರ್ಯದರ್ಶಿ ಸಂತೋಷ್ ಮೆನನ್ ಅವರ ಬದಲು ಬಿನ್ನಿಯವರ ಹೆಸರು ಕಳಿಸಿದ್ದು ಇದಕ್ಕೆ ಕಾರಣವಾಗಿತ್ತು.
ಅದರೆ ಅವರಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದು ಹಲವರಿಗೆ ಅಚ್ಚರಿ ಉಂಟುಮಾಡಿದೆ.

‘ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಬಿನ್ನಿ ಸೂಕ್ತ ವ್ಯಕ್ತಿ. ಅವರೊಬ್ಬ ಜಂಟ್ಲ್‌ಮನ್‌. ಭಾರತಕ್ಕಾಗಿ ಹಲವು ಪಂದ್ಯಗಳನ್ನು ಆಡಿದ್ದಾರಲ್ಲದೆ, ವಿಶ್ವಕಪ್‌ ಟೂರ್ನಿಯ ಹೀರೊ ಕೂಡಾ ಆಗಿದ್ದರು. ಅವರದ್ದು ಕಳಂಕರಹಿತ ವ್ಯಕ್ತಿತ್ವ. ತಮ್ಮ ಪುತ್ರ ಸ್ಟುವರ್ಟ್‌ ಬಿನ್ನಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿದ್ದ ಸಮಯದಲ್ಲಿ ಅವರು ರಾಷ್ಟ್ರೀಯ ಆಯ್ಕೆ ಸಮಿತಿಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು’ ಎಂದು ಬಿಸಿಸಿಐನ ಇನ್ನೊಂದು ಮೂಲ ಹೇಳಿದೆ.

1983ರಲ್ಲಿ ಭಾರತ ತಂಡ ವಿಶ್ವಕಪ್‌ ಗೆಲ್ಲುವಲ್ಲಿ ಬಿನ್ನಿ ಅವರ ಆಲ್‌ರೌಂಡ್‌ ಆಟವೂ ಪ್ರಮುಖ ಪಾತ್ರ ವಹಿಸಿತ್ತು. ಆ ಟೂರ್ನಿಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಅವರು 18 ವಿಕೆಟ್‌ಗಳನ್ನು ಪಡೆದಿದ್ದರು.

ನಾಮಪತ್ರ ಸಲ್ಲಿಕೆ (ಮುಂಬೈ ವರದಿ): ರೋಜರ್‌ ಬಿನ್ನಿ ಸೇರಿದಂತೆ ವಿವಿಧ ಹುದ್ದೆಗಳ ಆಕಾಂಕ್ಷಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ವಾಪಸ್‌ ಪಡೆಯಲು ಅ.14 ಕೊನೆಯ ದಿನವಾಗಿದೆ. ಅ.15 ರಂದು ಅಭ್ಯರ್ಥಿಗಳ ಅಂತಿಮಪಟ್ಟಿ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT