ಪ್ಯಾರಿಸ್: ಭಾರತ ಪುರುಷರ ಹಾಕಿ ತಂಡವು ಇತ್ತೀಚಿನ ದಶಕಗಳಲ್ಲೇ ಅತ್ಯಂತ ಕೆಚ್ಚೆದೆಯ
ಪ್ರದರ್ಶನವೊಂದನ್ನು ನೀಡಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ತಲುಪಿದೆ.
ಆದರೆ, ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡದ ಅನುಭವಿ ಡಿಫೆಂಡರ್ ಅಮಿತ್ ರೋಹಿದಾಸ್ ಎರಡನೇ ಕ್ವಾರ್ಟರ್ ಮಧ್ಯದಲ್ಲಿ ವಿಲಿಯಂ ಕಲ್ನಾನ್ ಅವರತ್ತ ಅಜಾಗೂಕತೆಯಿಂದ ಸ್ಟಿಕ್ ಎತ್ತಿದ್ದಕ್ಕೆ ರೆಡ್‌ಕಾರ್ಡ್ ಪಡೆದು ಹೊರ ನಡೆಯಬೇಕಾಯಿತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ FIH (International Hockey Federation) ಆಟದ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಅಮಿತ್ ರೋಹಿದಾಸ್ ಅವರನ್ನು ಒಂದು ಪಂದ್ಯವಾಡದಂತೆ ನಿಷೇಧ ಹೇರಿದೆ.
ಇದರಿಂದ ಜರ್ಮನಿ ವಿರುದ್ಧದ ಸೆಮಿಫೈನಲ್‌ನಲ್ಲಿ ಅಮಿತ್ ರೋಹಿದಾಸ್ ಆಡುವುದು ಅನುಮಾನ ಎನ್ನಲಾಗಿದೆ.
ಇನ್ನೊಂದೆಡೆ ಅಮಿತ್ ರೋಹಿದಾಸ್ ನಿಷೇಧದ ವಿರುದ್ಧ ಎಫ್‌ಐಎಚ್‌ಗೆ ಹಾಕಿ ಇಂಡಿಯಾ ಮೇಲ್ಮನವಿ ಸಲ್ಲಿಸಿದೆ.
ಬ್ರಿಟನ್ ವಿರುದ್ಧ ಇವ್ಸ್ ಡಿ ಮ್ಯಾನುವಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆ ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಗೆಲುವು ಸಾಧಿಸಿತು. 42 ನಿಮಿಷಗಳಷ್ಟು ದೀರ್ಘ ಅವಧಿಗೆ 10 ಆಟಗಾರರಿದ್ದರೂ ತಂಡ ಎದೆಗುಂದಲಿಲ್ಲ. ತಮ್ಮ ಜೀವವೇ ಪಣಕ್ಕಿದೆ ಎನ್ನುವಂತೆ ಆಡಿ ಬ್ರಿಟನ್ ತಂಡದ ದಾಳಿಗಳನ್ನು ದಿಟ್ಟವಾಗಿ ಎದುರಿಸಿತು.