ಹಾಂಗ್‌ಝೌ: ಭಾರತದ ನರೇಂದರ್ ಬೆರ್ವಾಲ್ (+92 ಕೆ.ಜಿ) ಮತ್ತು ಸಚಿನ್ ಸಿವಾಚ್ (57 ಕೆ.ಜಿ) ಅವರು ಮಂಗಳವಾರ ಏಷ್ಯನ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಕ್ರಮವಾಗಿ ಕ್ವಾರ್ಟರ್‌ಫೈನಲ್ ಮತ್ತು ಪ್ರೀಕ್ವಾರ್ಟರ್‌ಫೈನಲ್ ತಲುಪಿದರು.
23 ವರ್ಷದ ಸಚಿನ್ 5–0 ಯಿಂದ ಇಂಡೊನೇಷ್ಯಾದ ಅಸ್ರಿ ಉದಿನ್ ಅವರನ್ನು ಸೋಲಿಸಿ 16ರ ಸುತ್ತು ತಲುಪಿದರು. ನರೇಂದರ್ ಅವರು ಮೊದಲ ಸುತ್ತಿನಲ್ಲಿ ನಾಕೌಟ್ ಆಧಾರದ ಮೇಲೆ ಕಿರ್ಗಿಸ್ತಾನದ ಇಲ್ಕೊರೊ ಯುಲು ಉಮಟ್ಬೆಕ್ ಅವರನ್ನು ಸೋಲಿಸಿದರು. ಅವರ ಮುಂದಿನ ಎದುರಾಳಿ ಇರಾನ್‌ನ ರಮೀಜನ್ಪುರ್ ದೆಲಾವರ್.
ಇಂಡೊನೇಷ್ಯಾ ಎದುರಾಳಿಯ ಸತತ ಅಕ್ರಮಣವನ್ನು ಚುರುಕಿನ ಫುಟ್‌ವರ್ಕ್ ಮೂಲಕ ಸುಲಭವಾಗಿ ನಿಭಾಯಿಸಿದ ಸಚಿನ್ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಅವರು 16ರ ಸುತ್ತಿನಲ್ಲಿ ಕುವೈತ್‌ನ ತುರ್ಕಿ ಅಬುಕುತಲಿಬ್ ಅವರನ್ನು ಎದುರಿಸಲಿದ್ದಾರೆ.